ಕರ್ನಾಟಕ

ಯಾಪಲದಿನ್ನಿ ಹಜರತ್ ಜಂಗ್ಲಿಪೀರ್‌ ಉರುಸ್ ಸಂದರ್ಭದಲ್ಲಿ ದುರ್ಘಟನೆ; ಟ್ಯಾಂಕ್ ಸಿಡಿದು ಐವರ ಸಾವು

Pinterest LinkedIn Tumblr

raichur

ರಾಯಚೂರು: ಉರುಸ್‌ಗೆ ಬರುವ ಭಕ್ತರ ಅನುಕೂಲಕ್ಕಾಗಿ ರಾಯಚೂರು ತಾಲ್ಲೂಕು ಯಾಪಲದಿನ್ನಿ ಗ್ರಾಮದ ಹಜ­ರತ್ ಜಂಗ್ಲಿಪೀರ್‌ ಸಾಹೇಬ್ ದರ್ಗಾ ಎದುರು ತರಾತುರಿಯಲ್ಲಿ ನಿರ್ಮಿ­­­ಸಿದ್ದ ನೆಲ ಮಟ್ಟದ ನೀರಿನ ಟ್ಯಾಂಕ್‌ ಶನಿವಾರ ಬೆಳಿಗ್ಗೆ 9ರ ಸುಮಾರಿಗೆ ಗಾಳಿಯ ಒತ್ತಡಕ್ಕೆ ಸಿಡಿದು ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ರಾಯಚೂರಿನ ಜವಾಹರನಗರ ನಿವಾಸಿ ವೀರೇಶ (29), ತಿಮ್ಮಾಪುರ­ಪೇಟೆಯ ದುರುಗಪ್ಪ ಪೂಜಾರ (38), ಆಂಧ್ರದ ಗಟ್ಟು ಗ್ರಾಮದ ಹುಸೇನಪ್ಪ (24),  ಎಮ್ಮಿಗನೂರಿನ ಮಣಕಪಲ್ಲಿ ಶಹಜಾನ್ (35), ಮಿಠಾಯಿ ವ್ಯಾಪಾರಿ ಒಡಿಸ್ಸಾ ರಾಜ್ಯದ ಜ್ಯೂಯಲ್ ಎಸಾನ್ (45) ಮೃತಪಟ್ಟವರು ಎಂದು ಯಾಪ­ಲದಿನ್ನಿ ಪೊಲೀಸ್ ಠಾಣೆ ಪಿಎಸ್‌ಐ ಚಿತ್ತರಂಜನ್ ತಿಳಿಸಿದ್ದಾರೆ.

ಈ ದುರ್ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ‘ಉರುಸ್ ಇದ್ದ ಕಾರಣ ಗ್ರಾಮ ಪಂಚಾಯಿತಿ ವತಿ­ಯಿಂದ ನೆಲದಡಿ­ಯಲ್ಲಿ ತರಾತುರಿಯಲ್ಲಿ ಈ ಟ್ಯಾಂಕ್ ನಿರ್ಮಿಸಲಾಗಿತ್ತು.  ಬಂದ ಭಕ್ತರಿಗೆ ನೀರಿನ ಸೌಕರ್ಯ ಕಲ್ಪಿಸಲು ಟ್ಯಾಂಕ್‌ಗೆ ಶುಕ್ರವಾರ ನೀರು ಭರ್ತಿ ಮಾಡಿದ್ದರು. ನಿರ್ಮಾಣ ಸಮಯದಲ್ಲಿ ಸರಿಯಾಗಿ ಕ್ಯೂರಿಂಗ್ ಆಗದೇ ಇರುವುದರಿಂದ ಒಳಗಡೆಯ ಗಾಳಿಯ ಒತ್ತಡಕ್ಕೆ (ಏರ್ ಟೈಟ್) ಟ್ಯಾಂಕ್‌ ಮೂರು ಕಡೆ ಸಿಡಿದಿದೆ’ ಎಂದು ಡಿವೈಎಸ್‌ಪಿ ವಿಜಯಕುಮಾರ ಮಡಿವಾಳ ತಿಳಿಸಿದರು.

ಮೊಕದ್ದಮೆ, ಅಮಾನತು
ಈ ಸಂಬಂಧ ಯಾಪಲದಿನ್ನಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ, ಸದಸ್ಯ ವೀರೇಶ ಕುಂಬಾರ, ಪಿಡಿಒ ಚನ್ನಮ್ಮ, ಗುತ್ತಿಗೆದಾರ ವೀರೇಶ, ಕಿರಿಯ ಎಂಜಿನಿಯರ್‌ ನಿರಂಜನ, ಎಇಇ ಜಿ.ಎನ್.ಪ್ರಕಾಶ ವಿರುದ್ಧ ಪ್ರಕರಣ ದಾಖಲಾಗಿದೆ. ಚನ್ನಮ್ಮ ಮತ್ತು ನಿರಂಜನ ಅವರನ್ನು ಅಮಾನತಿನಲ್ಲಿ ಇಡಲಾಗಿದೆ. ಮೃತರ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ₨ 1 ಲಕ್ಷ ನೀಡಲಾಗಿದೆ.

Write A Comment