ಕನ್ನಡ ವಾರ್ತೆಗಳು

ಕುಂದಾಪುರ: ದೆಹಲಿಯ ಫೋಟೋಗ್ರಾಫರ್ ಸೇನಾಪುರ ರೈಲ್ವೇ ನಿಲ್ದಾಣದಲ್ಲಿ ಅಸ್ವಸ್ಥನಾಗಿ ಪತ್ತೆ; ಅಮಲು ಪದಾರ್ಥ ನೀಡಿ ಸುಲಿಗೆ ಮಾಡಿರುವ ಶಂಕೆ

Pinterest LinkedIn Tumblr

ಕುಂದಾಪುರ: ನೋಡಲು ಸುಶಿಕ್ಷಿತ ವ್ಯಕ್ತಿಯಂತೆ ಕಾಣುತ್ತಿದ್ದ ಯುವಕನೊಬ್ಬ ಸೇನಾಪುರ ರೈಲು ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ಚಿಕಿತ್ಸೆಗೆಂದು ಕುಂದಾಪುರದ ಮಾತಾ ಆಸ್ಪತ್ರೆಗೆ ದಾಖಲಿಸಿದ ಘಟನೆ ಶನಿವಾರ ನಡೆದಿದೆ. ಮಾನಸಿಕ ಅಸ್ವಸ್ಥನಂತೆ ಕಂಡು ಬಂದ ವ್ಯಕ್ತಿಯನ್ನು ಪ್ರಸಿದ್ಧ ಫೋಟೋ ಗ್ರಾಫರ್ ಮತ್ತು ವೆಬ್ ಡಿಸೈನರ್ ಶಶಾಂಕ ನೇಗಿ ಎಂದು ಗುರುತಿಸಲಾಗಿದೆ.

shashank (2)

ಘಟನೆಯ ವಿವರ: ಶನಿವಾರ ಸೇನಾಪುರ ರೈಲು ನಿಲ್ದಾಣದ ಹೊರಗಡೆ ಯುವಕನೊಬ್ಬ ಬ್ಯಾಗಿನೊಂದಿಗೆ ಬರಿ ಮೈಯಲ್ಲಿ ಕುಣಿಯುತ್ತಿದ್ದ, ಈ ಬಗ್ಗೆ ಆತನನ್ನು ಪ್ರಶ್ನಿಸಿದಾಗ ಅಸಮಂಜಸವಾಗಿ ಹಿಂದಿಯಲ್ಲಿಯಲ್ಲಿ ಮಾತನಾಡುತ್ತಿದ್ದ. ಇದರಿಂದ ಆತನಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದು ಖಚಿತಗೊಂಡ ಸ್ಥಳೀಯರು ನಾಡದ ಗೋಪಾಲ ಎಂಬುವರಿಗೆ ಸುದ್ಧಿ ಮುಟ್ಟಿಸಿದ್ದಾರೆ. ತಕ್ಷಣ ಗೋಪಾಲ ಹಾಗೂ ಸ್ಥಳೀಯ ಮಂಜು ಎಂಬುವರು ನಾಲ್ಕಾರು ಜನರೊಂದಿಗೆ ಬಂದಾಗ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಮಾನಸಿಕ ಆಘಾತಕ್ಕೊಳಗಾದ ಆತನನ್ನು ಹಿಡಿದುಕೊಳ್ಳು ಯತ್ನಿಸಿದಾಗ ರೈಲು ಹಳಿಗೆ ಹಾರುವ ಬೆದರಿಕೆಯನ್ನೂ ಹಾಕಿದಾಗ ಗಾಭರಿಗೊಂಡ ಸ್ಥಳೀಯರು ಆತನನ್ನು ಹಗ್ಗದ ಸಹಾಯದಿಂದ ಕಟ್ಟಿ ಹಾಕಿದ್ದಾರೆ. ನಂತರ ಆತನೊಂದಿಗೆ ಸಂಬಂಧಿಕರ ವಿವರ ಕೇಳಿದಾಗ ಆತನ ತಂದೆಯ ದೂರವಾಣಿ ಸಂಖ್ಯೆ ನೀಡಿದ್ದಾನೆ. ಸ್ಥಳೀಯರು ಆತನ ತಂದೆಯನ್ನು ಸಂಪರ್ಕಿಸಿದಾಗ ಆತ ವೃತ್ತಿಪರ ಛಾಯಾಚಿತ್ರಗ್ರಾಹಕನಾಗಿದ್ದು, ಫೋಟೋಗ್ರಾಫಿಗಾಗಿ ಕೇರಳ ಹಾಗೂ ಕರ್ನಾಟಕಕ್ಕೆ ತೆರಳುವುದಾಗಿ ತಿಳಿಸಿ ಹೊರಟಿದ್ದ ಎಂದು ತಿಳಿದು ಬಂದಿದೆ. ನಂತರ ಗಂಗೊಳ್ಳಿಯ ೨೪*೭ ಹೆಲ್ಪ್ ಲೈನ್ ಕಾರ್ಯಕರ್ತ ಮೊಹಮ್ಮದ್ ಇಬ್ರಾಹಿಂ ಸಹಾಯದಿಂದ ಅಂಬ್ಯುಲೆನ್ಸ್‌ನಲ್ಲಿ ಕುಂದಾಪುರದ ಸರ್ಕಾರೀ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅಲ್ಲಿ ವೈದ್ಯರು ಯುವಕನ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ನಿರಾಕರಿಸಿದ್ದು, ಉಡುಪಿಯ ಅಜ್ಜರ ಕಾಡಿಗೆ ಕೊಂಡೊಯ್ಯಲು ಸೂಚಿಸಿದ್ದಾರೆ. ನಂತರ ಕುಂದಾಪುರದ ಮಾತಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಅಷ್ಟು ಹೊತ್ತಿಗಾಗಲೇ ಶಶಾಂಕನಿಗೆ ಪ್ರಜ್ಞೆ ಮರುಕಳಿಸಲಾರಂಭಿಸಿದ್ದು, ಮಾತನಾಡಲು ತೊಡಗಿದ್ದಾನೆ.

ಗಂಟೆಗಳ ಕಾಲ ಕಾಡಿನಲ್ಲಿ ತಾಳ್ಮೆಯಿಂದ ಛಾಯಾಚಿತ್ರ ತೆಗೆಯುವ ವೃತ್ತಿ ಮಾಡುತ್ತಿರುವ ಯಾವುದೇ ವ್ಯಕ್ತಿಯೂ ಮಾಸಿಕ ಸ್ಥಿಮಿತ ಕಳೆದುಕೊಳ್ಲುವುದು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೇ ಆತ ದೆಹಲಿಯ ಮಾಯಾ ಅಕಾಡೆಮಿಯಲ್ಲಿ ಫೋಟೋ ಗ್ರಾಫಿ ಕಲಿತಿದ್ದು, ಮಾಯಾ ಕ್ರಿಯೇಟಿವ್ ಶಾಪ್ ಮತ್ತು ಶಶಾಂಕ್ ಫೋಟೋಗ್ರಾಫಿಸ್ ಎನ್ನುವ ಸಂಸ್ಥೆ ನಡೆಸುತ್ತಿದ್ದಾನೆಂದು ತಿಳಿದು ಬಂದಿದೆ.

ರೈಲಿನಲ್ಲಿ ಯಾರೋ ಆತನಿಗೆ ಅಮಲು ಪದಾರ್ಥ ತಿನ್ನಿಸಿ ಆತನಲ್ಲಿದ್ದ ಸೊತ್ತು ದೋಚಲು ಹುನ್ನಾರ ನಡೆಸಿರಬಹುದು ಎಂಬುದಾಗಿ ಶಂಕಿಸಲಾಗಿದ್ದು, ರೈಲಿನಲ್ಲಿಯೂ ಆತ ಶುಕ್ರವಾರ ರಾತ್ರಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದುದರಿಂದ ಆತನನ್ನು ರೈಲಿನಿಂದ ಸೇನಾಪುರ ರೈಲ್ವೇ ಸ್ಟೇಶನ್‌ನಲ್ಲಿ ರೈಲ್ವೇ ಕ್ರಾಸಿಂಗ್‌ಗಾಗಿ ರೈಲು ನಿಂತಾಗ ಇಳಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶಶಾಂಕ್ ಬ್ಯಾಗಿನಲ್ಲಿ ಬಟ್ಟೆ ಹಾಗೂ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಕ್ಯಾಮೆರಾ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದೆ. ಉಳಿದ ಯಾವುದೇ ಸೊತ್ತುಗಳಾಗಲೀ ಬ್ಯಾಗ್‌ಗಳಾಗಲೀ. ಹಣವಾಗಲೀ ಆತನ ಜೊತೆಗಿಲ್ಲದ ಕಾರಣ ಅದನ್ನು ಅಪರಿಚಿತರು ದೋಚಿರಬಹುದು ಎಂಬುದಾಗಿ ಶಂಕಿಸಲಾಗಿದೆ.

ಸುದ್ಧಿ ತಿಳಿದ ತಕ್ಷಣ ಆತನ ಮನೆಯವರು ವೈದ್ಯರನ್ನು ಸಂಪರ್ಕ ಮಾಡಿದ್ದು, ಯೋಗ್ಯ ಶುಷ್ರೂಷೆ ನೀಡುವಂತೆಯೂ ಆದಿತ್ಯವಾರ ಆತನ ಸಂಬಂಧಿಕರು ಕುಂದಾಪುರಕ್ಕೆ ಬರುವುದಾಗಿಯೂ ತಿಳಿಸಿದ್ದಾರೆ. ಒಟ್ಟಾರೆ ಪ್ರತಿಭಾನ್ವಿತ ಯುವಕ ಶಶಾಂಕ್‌ನ ಮಾನಸಿಕ ಸ್ಥಿತಿ ಇನ್ನೂ ಸಂಫುರ್ಣ ಸುಧಾರಿಸದೇ ಇರುವುದರಿಂದ ನಡೆದ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment