ರಾಷ್ಟ್ರೀಯ

ಗಡಿಯಲ್ಲಿ ಪಾಕ್‌ ದಾಳಿ: ಮೂವರು ಬಲಿ

Pinterest LinkedIn Tumblr

pak

ಶ್ರೀನಗರ/ಜಮ್ಮು: ಪಾಕಿಸ್ತಾನವು ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು–ಕಾಶ್ಮೀರದ ವಿವಿಧ ಕಡೆ ಗಡಿ ಠಾಣೆಗಳು ಹಾಗೂ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಶುಕ್ರವಾರ ರಾತ್ರಿಯಿಂದ ನಡೆಸುತ್ತಿರುವ  ಅಪ್ರಚೋದಿತ ದಾಳಿಗೆ ಇಬ್ಬರು ಯೋಧರು ಹಾಗೂ ಮಹಿಳೆಯೊಬ್ಬರು ಮೃತಪಟ್ಟು ೧೧ ಮಂದಿ ಗಾಯಗೊಂಡಿದ್ದಾರೆ.

ಗುಂಡಿನ ಮೊರೆತಕ್ಕೆ ಭಯಭೀತರಾದ  ಜನ ಗಡಿ ಗ್ರಾಮಗಳಿಂದ ಗುಳೆ ಹೋಗುತ್ತಿದ್ದಾರೆ. ಕನ್ನಯ್ಯಾ ಠಾಣೆ ಸನಿಹದ ಗಡಿನಿಯಂತ್ರಣ ರೇಖೆಯಲ್ಲಿ ಪಾಕ್‌್ ಪಡೆ ಕದನ ವಿರಾಮ ಉಲ್ಲಂಘಿಸಿದೆ. ತಂಗ್‌ದರ್‌ ಪ್ರದೇಶದಲ್ಲಿ ಶುಕ್ರವಾರ ರಾತ್ರಿಯಿಂದ ರಾಕೆಟ್‌ ದಾಳಿ ನಡೆಸುತ್ತಿದೆ.  ಈ ಸಂಬಂಧ ಸೇನೆ ಎಫ್‌ಐಆರ್‌್ ದಾಖಲಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ೯.೩೦ರಿಂದ ಪಾಕ್‌ ಪಡೆ ಅಪ್ರಚೋದಿತ ದಾಳಿ ನಡೆಸುತ್ತಿದೆ.  ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಇದಕ್ಕೆ ಪ್ರತ್ಯುತ್ತರ ನೀಡಿದೆ. ಶನಿವಾರ ನಸುಕಿನ ೩ ಗಂಟೆ ವರೆಗೂ ಪರಸ್ಪರ ಗುಂಡಿನ ಚಕಮಕಿ ನಡೆಯಿತು. ಬೆಳಿಗ್ಗೆ ೭ ಗಂಟೆಯಿಂದ ಪಾಕ್‌ ಪಡೆ ಮತ್ತೆ ಷೆಲ್‌ ದಾಳಿ ಶುರುಮಾಡಿತು ಎಂದು ಬಿಎಸ್‌ಎಫ್‌ ಐಜಿ ರಾಕೇಶ್‌ ಶರ್ಮ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಜಮ್ಮು–ಕಾಶ್ಮೀರದ ಕಥುವಾ ಹಾಗೂ ಸಾಂಬಾ  ಜಿಲ್ಲೆಗಳಲ್ಲಿ ಅಂತರ­ರಾಷ್ಟ್ರೀಯ ಗಡಿ ಗ್ರಾಮಗಳು ಹಾಗೂ ೧೨ ಠಾಣೆಗಳ  ಮೇಲೆ ಪಾಕ್‌ ಪಡೆ ನಡೆಸಿದ ಷೆಲ್‌ ದಾಳಿಗೆ ಮಹಿಳೆ­ಯೊಬ್ಬರು ಬಲಿಯಾಗಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.  ಮೃತ ಮಹಿಳೆಯನ್ನು  ಮಂಗು ಛಕ್‌್ ಗ್ರಾಮದ ತೋರಿ ದೇವಿ ಎಂದು ಗುರುತಿಸಲಾಗಿದೆ.

ಸಾಂಬಾ ಹಾಗೂ ಕಥುವಾ ಜಿಲ್ಲೆಗಳ ೧೪ ಸಾವಿರಕ್ಕೂ ಹೆಚ್ಚು ಗ್ರಾಮಸ್ಥರನ್ನು ತೆರವುಗೊಳಿಸ­ಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಪಾರ ಹಾನಿ: ಪಾಕ್‌ ಪಡೆಯ ದಾಳಿಗೆ ಗಡಿ ಗ್ರಾಮದ ಅನೇಕ ಮನೆಗಳಿಗೆ ಹಾನಿ­ಯಾಗಿದೆ. ಕೆಲವು ಸಾಕು ಪ್ರಾಣಿಗಳು ಸತ್ತಿವೆ.  ಜನ ಬಂಕರ್‌ಗಳಲ್ಲಿ ಆಶ್ರಯ ಪಡೆದುಕೊಂಡಿದ್ದು, ಹೊರಗೆ ಬರುವುದಕ್ಕೆ ಹೆದರುತ್ತಿದ್ದಾರೆ.

ಗುಂಡಿನ ದಾಳಿ ನಿಂತ ಬಳಿಕ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸ­ಲಾಗುತ್ತದೆ ಎಂದು ಸಾಂಬಾ ಜಿಲ್ಲೆಯ ಹಿರಿಯ ಪೊಲೀಸ್‌್ ವರಿಷ್ಠಾಧಿಕಾರಿ ಅನಿಲ್‌ ಮಂಗೋತ್ರಾ ತಿಳಿಸಿದ್ದಾರೆ.

550ಕ್ಕೂ ಹೆಚ್ಚು  ಬಾರಿ ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನವು ೨೦೧೪ರಲ್ಲಿ ೫೫೦ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಆಗಸ್ಟ್‌ನಿಂದ ಅಕ್ಟೋಬರ್‌ ತಿಂಗಳಿನಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸೇರಿ ೧೩ ಮಂದಿ ಮೃತಪಟ್ಟಿದ್ದರು. ಕಳೆದ ವರ್ಷ ಪಾಕ್‌ ದಾಳಿಗೆ ಐವರು ಯೋಧರು ಸೇರಿ ಒಟ್ಟು ೧೯ ಮಂದಿ ಬಲಿಯಾಗಿದ್ದರು. ೧೫೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

13ರ ಬಾಲಕಿ ಸಾವು
ಇಸ್ಲಾಮಾಬಾದ್‌ (ಐಎಎನ್‌ ಎಸ್‌): ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹಾಗೂ ಪಾಕಿಸ್ತಾನ ಅರೆ ಸೇನಾ ಪಡೆಗಳ ನಡುವೆ ಶನಿವಾರ ಅಂತರರಾಷ್ಟ್ರೀಯ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ   13 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ.

ಘಟನೆಯಲ್ಲಿ  ಪಂಜಾಬ್‌ ಪ್ರಾಂತ್ಯದ ಸಿಯಾಲ್‌­­ಕೋಟ್‌ ನಿವಾಸಿ ಸಮೀರಾ ಎಂಬ 13 ವರ್ಷದ ಬಾಲಕಿ ಮೃತಪಟ್ಟಿ­ರುವು­ದಾಗಿ ಪಾಕಿಸ್ತಾನ ಪತ್ರಿಕೆಗಳು ವರದಿ ಮಾಡಿವೆ.

ಪಾಕಿಸ್ತಾನದ ಯೋಧರ ಗುಂಡಿಗೆ  ಬಿಎಸ್‌ಎಫ್‌ ಯೋಧ ಬಲಿಯಾದ ನಂತರ ಪಾಕ್‌ನ ನಾಲ್ವರು ಯೋಧ­ರನ್ನು ಹತ್ಯೆ ಮಾಡಿರುವುದಾಗಿ ಭಾರತ ಹೇಳಿದೆ.

Write A Comment