ಕರ್ನಾಟಕ

ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಶಾ ಪಣ; ರಾಜ್ಯ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಪಕ್ಷದ ನಾಯಕರಿಗೆ ಬಿಜೆಪಿ ಅಧ್ಯಕ್ಷರ ಸೂಚನೆ

Pinterest LinkedIn Tumblr

ರಾಜ್ಯ ನಾಯಕರಿಗೆ ನೀಡಿದ ಟಾರ್ಗೆಟ್ 1. ಒಂದು ಕೋಟಿ ಸದಸ್ಯರ ನೋಂದಣಿ ಗುರಿ 2. ರಾಜ್ಯ ಸರಕಾರದ ವೈಫಲ್ಯಗಳ ಕುರಿತು ಜನರಿಗೆ ಮನವರಿಕೆ 3. ಮಠ ಮಾನ್ಯ ನಿಯಂತ್ರಣ ವಿಧೇಯಕ ವಾಪಸ್‌ಗೆ ಪಟ್ಟು 4. ಗೋಹತ್ಯೆ ನಿಷೇಧ ಕಾಯಿದೆ ವಾಪಸ್ ವಿರುದ್ಧ ಪ್ರತಿಭಟನೆ 5. ಬಸ್ ಪ್ರಯಾಣ ದರ ಇಳಿಕೆ ಮಾಡುವಂತೆ ಒತ್ತಡ

Amit_Shah_at_BJP_rally_in_Haryana_PTI_360

ಬೆಂಗಳೂರು: ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಹೋರಾಟ ನಡೆಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.

”ಕಾಂಗ್ರೆಸ್ ಮುಕ್ತ ಅಂದರೆ ಆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದು ಶಾಶ್ವತವಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕೂರಿಸುವುದು. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಸಂಕಲ್ಪದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಕರ್ನಾಟಕದಲ್ಲಿ ಗುರಿ ತಲುಪಬೇಕಿದೆ. ಈ ಹಿನ್ನೆಲೆಯಲ್ಲಿ ಸರಕಾರದ ವೈಫಲ್ಯಗಳು, ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ ನಡೆಸಬೇಕು,” ಎಂದು ಷಾ ಹೇಳಿದ್ದಾರೆ.

ನಗರದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದ ಅವರು ಇಡೀ ದಿನ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ ದಿಲ್ಲಿಗೆ ತೆರಳಿದರು. ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ರಾಜ್ಯ ನಾಯಕರೊಂದಿಗೆ ಕೋರ್ ಕಮಿಟಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ, ರಾಜ್ಯ ಕಾಂಗ್ರೆಸ್ ಸರಕಾರದ ಕಾರ್ಯವೈಖರಿ ಟೀಕಿಸಿದರು.

”ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮಂತ್ರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಸರಕಾರದ ದುರಾಡಳಿತದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕಾನೂನು ವ್ಯವಸ್ಥೆ ಕುಸಿದಿದೆ. ಇದರ ಪರಿಣಾಮ ಬಿಜೆಪಿ ಸರಕಾರದ ಆಡಳಿತ ಅವಧಿಯಲ್ಲಿ ಇದ್ದ ಅಭಿವೃದ್ಧಿ ಪ್ರಮಾಣ ಶೇ.10ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ರಾಜ್ಯದ ಜನತೆಗೆ ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದೆ. ಕೆಲವು ವರ್ಗಗಳನ್ನಷ್ಟೇ ಓಲೈಸುವ ಪ್ರಯತ್ನ ನಡೆದಿದೆ,” ಎಂದು ಟೀಕಿಸಿದರು.

ಸರಕಾರದ ವೈಫಲ್ಯ 25 ಲಕ್ಷ ಮನೆಗೆ ತಲುಪಿಸಿ
ಮುಂದಿನ ಮೂರು ತಿಂಗಳಲ್ಲಿ ಒಂದು ಕೋಟಿ ಸದಸ್ಯತ್ವ ನೋಂದಣಿ ಮಾಡುವಂತೆ ಪಕ್ಷದ ರಾಜ್ಯ ನಾಯಕರಿಗೆ ಗುರಿ ನಿಗದಿಪಡಿಸಿದ ಅವರು, ಸದಸ್ಯತ್ವ ಅಭಿಯಾನದ ಜತೆ ಜತೆಯಲ್ಲೇ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ 25 ಲಕ್ಷ ಮನೆಗಳಿಗೆ ತಲುಪಿಸುವಂತೆ ಸೂಚನೆ ನೀಡಿದರು.

amit-shah-in-bangalore

”ಮಠಗಳನ್ನು ನಿಯಂತ್ರಿಸುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ವಿಧೇಯಕ ವಾಪಸ್ ಪಡೆಯಬೇಕು. ಗೋಹತ್ಯೆ ನಿಷೇಧ ಕಾಯಿದೆ ಪುನಃ ಜಾರಿಗೊಳಿಸಬೇಕು. ಇಂಧನ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾದರೂ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಇಳಿಕೆ ಮಾಡದಿರುವ ಸರಕಾರದ ಕ್ರಮದ ವಿರುದ್ಧ ಹೋರಾಟ ನಡೆಸಬೇಕು. ಮನೆಮನೆ ಅಭಿಯಾನದಲ್ಲಿ ಈ ಅಂಶಗಳನ್ನು ಜನತೆಗೆ ತಿಳಿಸಬೇಕು,” ಎಂದು ಸಲಹೆ ನೀಡಿದರು.

”ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಶೇ. 77ರಷ್ಟು ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಜನರಿಗೆ ಕೊಟ್ಟ ಭರವಸೆಯಂತೆ ಆಡಳಿತ ನೀಡಲು ಸರಕಾರ ವಿಫಲವಾಗಿದೆ,” ಎಂದು ವಿಶ್ಲೇಷಿಸಿದರು.

ಸರಕಾರ ಅಸ್ಥಿರಗೊಳಿಸುವ ಉದ್ದೇಶವಿಲ್ಲ
”ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ನಾನು ಬೆಂಗಳೂರಿಗೆ ಬಂದಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರಿಂದ ಅಂತಹ ಪ್ರಮಾಣಪತ್ರವೂ ನನಗೆ ಬೇಕಿಲ್ಲ. ಪಕ್ಷದ ಸದಸ್ಯತ್ವ ಅಭಿಯಾನ ಚುರುಕುಗೊಳಿಸಿ ಮುಂದಿನ ಮಾರ್ಚ್ ವೇಳೆಗೆ ದೇಶಾದ್ಯಂತ 10 ಕೋಟಿ ಸದಸ್ಯತ್ವ ನೋಂದಣಿ ಮಾಡಬೇಕೆಂಬ ಗುರಿ ಹಾಕಿಕೊಳ್ಳಲಾಗಿದೆ,” ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಬಲವಂತದ ಮತಾಂತರಕ್ಕೆ ವಿರೋಧ
”ಮರು ಮತಾಂತರ ನಮ್ಮ ಪಕ್ಷ ಹಾಗೂ ಸರಕಾರದ ಕಾರ್ಯಕ್ರಮವಲ್ಲ. ಬಲವಂತದ ಮತಾಂತರ ಮಾಡುವುದಕ್ಕೆ ನಮ್ಮ ಪಕ್ಷದ ವಿರೋಧವಿದೆ. ಇಂತಹ ಕಾರ್ಯ ಚಟುವಟಿಕೆ ನಿಯಂತ್ರಿಸುವ ಸಂಬಂಧ ಕಠಿಣ ಕಾನೂನು ಜಾರಿಗೊಳಿಸುವ ಅಗತ್ಯವಿದೆ. ಈ ಸಂಬಂಧ ವಿಧೇಯಕ ರೂಪಿಸಬೇಕೆಂಬ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಆಶಯಕ್ಕೆ ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳಿಂದ ಪೂರಕ ಸಹಕಾರ ಸಿಗುತ್ತಿಲ್ಲ,” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೋದಿ ಸಾಧನೆ ಗುಣಗಾನ
ಕಪ್ಪು ಹಣ ವಾಪಸ್ ತರುವುದು, ಜನ್‌ಧನ್ ಯೋಜನೆ, ಇಂಧನ ದರ ಇಳಿಕೆ, ಮೇಕಿಂಗ್ ಇಂಡಿಯಾ, ಸ್ವಚ್ಛ ಭಾರತ್ ಯೋಜನೆಗಳು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಏಳು ತಿಂಗಳ ಸಾಧನೆಯನ್ನು ಷಾ ಗುಣಗಾನ ಮಾಡಿದರು.
—–

ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸುವುದು ಕನಸಷ್ಟೇ.ಕೆಲ ರಾಜ್ಯಗಳಲ್ಲಿ ಬಿಜೆಪಿಗೆ ದೊರೆತ ಯಶಸ್ಸು ರಾಜ್ಯದಲ್ಲೂ ಮುಂದುವರಿಯಲಿದೆ ಎಂಬುದು ಭ್ರಮೆ. ಕಳೆದ ಚುನಾವಣೆಯನ್ನು ಬಿಜೆಪಿ ನೆನಪಿಸಿಕೊಳ್ಳಲಿ * ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಅಮಿತ್ ಶಾ, ಮೋದಿ ಕಂಡರೆ ನಮಗೆ ಭಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ಗೆ 130 ವರ್ಷ ಇತಿಹಾಸವಿದೆ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಲು ಯಾರಿಂದಲೂ ಸಾಧ್ಯವಿಲ್ಲ * ಸಿದ್ದರಾಮಯ್ಯ, ಮುಖ್ಯಮಂತ್ರಿ

Write A Comment