ಕರ್ನಾಟಕ

ಸರಣಿ ಅಪಘಾತ: ನಟ ಅನಂತ್‌ನಾಗ್‌ ಪಾರು

Pinterest LinkedIn Tumblr

ananth

ರಾಮನಗರ: ಬಿಡದಿಯ ಹೆಜ್ಜಾಲ ಬಳಿ ಬೆಂಗಳೂರು– ಮೈಸೂರು ರಸ್ತೆಯಲ್ಲಿ ಗುರುವಾರ ನಡೆದ ಸರಣಿ ಕಾರು ಅಪಘಾತದಲ್ಲಿ ನಟ ಅನಂತನಾಗ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಲ್ಲಿ ‘ಐರಾವತ’ ಸಿನಿಮಾ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ‘ಇನೊವಾ’ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಅನಂತ್‌ನಾಗ್‌ ಅವರ ಕಾರು ಹೆಜ್ಜಾಲ ಸಮೀಪಿಸುತ್ತಿದ್ದಂತೆ ಚಾಲಕ  ಜೋರಾಗಿ ಮುನ್ನುಗ್ಗಿ­ಸಿದ ಪರಿಣಾಮ ಮುಂದಿದ್ದ ‘ಇಂಡಿಕಾ’ ಕಾರಿಗೆ ಡಿಕ್ಕಿ ಹೊಡೆದಿದೆ. ಆ ಕಾರು ಮುಂದಿದ್ದ ಮತ್ತೊಂದು ‘ಇಂಡಿಕಾ’ ಕಾರಿಗೆ ಡಿಕ್ಕಿ ಹೊಡೆದಿದೆ. ಅದು ತನ್ನ ಮುಂದಿದ್ದ ‘ಐ–10’ ಕಾರಿಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ಕಳೆದುಕೊಂಡ ‘ಇನೊವಾ’ ಹಾಗೂ ‘ಇಂಡಿಕಾ’ ರಸ್ತೆ ವಿಭಜಕ ದಾಟಿ, ಪಕ್ಕದ ರಸ್ತೆಯ ಬದಿಯ ಖಾಲಿ ಜಾಗದ ತಗ್ಗು ಪ್ರದೇಶಕ್ಕೆ ನುಗ್ಗಿವೆ.

ಅನಂತನಾಗ್‌ ಅವರ ಹಣೆ, ಬಲಗೈ, ಪಕ್ಕೆಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪ್ರಯಾಣಿಕ­ರೊಬ್ಬರು ತಮ್ಮ ಕಾರಿನಲ್ಲಿ ಬೆಂಗಳೂರಿಗೆ  ಕರೆದೊಯ್ದರು.

‘ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಪ್ರಾಣಾ­ಪಾಯದಿಂದ ಪಾರಾಗಿದ್ದಾರೆ. ಅವರ   ಚಾಲಕನಿಗೆ ಸ್ವಲ್ಪ ಗಾಯವಾಗಿದೆ. ಕಾರಿನಲ್ಲಿ ‘ಏರ್‌ ಬ್ಯಾಗ್‌’ ಇದ್ದ ಕಾರಣ  ಭಾರಿ ಅನಾಹುತ ತಪ್ಪಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಕರಣ: ‘ಇನೊವಾ’ ಚಾಲಕನ ವಿರುದ್ಧ ಅತಿವೇಗ, ಅಜಾಗರೂಕತೆ ಹಾಗೂ ಸಂಚಾರಿ ನಿಯಮ ಉಲ್ಲಂಘನೆ  ಪ್ರಕರಣ ದಾಖಲಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Write A Comment