ಕರ್ನಾಟಕ

ಮಹಿಳೆ ಬಲಿ: ನರಹಂತಕ ಹುಲಿಗಾಗಿ ಹುಡುಕಾಟ; ಮುಡುಗೈ ಗ್ರಾಮಸ್ಥರಿಂದ ಪ್ರತಿಭಟನೆ, ಪೊಲೀಸರಿಗೆ ಏಟು

Pinterest LinkedIn Tumblr

tiger

ಖಾನಾಪುರ (ಬೆಳಗಾವಿ): ತಾಲ್ಲೂಕಿನ ನೀಲವಾಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿರುವ ಮುಡುಗೈ (ಮುಗವಾಡೆ) ಗ್ರಾಮದಲ್ಲಿ ಬುಧವಾರ ಸಂಜೆ ನರಹಂತಕ ಹುಲಿ ಎಳೆದೊಯ್ದಿದ್ದ  ಅಂಜನಾ ಅಪ್ಪಣ್ಣ ಹಣಬರ (23) ಅವರ ಶವ ಗುರುವಾರ ಪತ್ತೆಯಾಗಿದೆ.

ರೊಚ್ಚಿಗೆದ್ದ ಗ್ರಾಮಸ್ಥರು ಹುಲಿ­ಯನ್ನು ಕೊಲ್ಲುವಂತೆ ಒತ್ತಾಯಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಬುಧ­ವಾರ ರಾತ್ರಿ ದಿಗ್ಬಂಧನ ಹಾಕಿ­ದರು. ಹುಲಿ ಹಿಡಿಯಲು ವಿಫಲರಾಗಿ­ದ್ದರಿಂದ ಸಿಟ್ಟಿಗೆದ್ದ ಶಾಸಕ ಅರವಿಂದ ಪಾಟೀಲ ಅವರು ಬೆಳಗಾವಿಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ ಅವರನ್ನು ಎಳೆದಾಡಿದರು.

ಈ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಅನು­ಮತಿ ನೀಡಿದ್ದಾರೆ. ಅರಣ್ಯ ಹಾಗೂ ಪೊಲೀಸ್‌ ಸಿಬ್ಬಂದಿ ಜಂಟಿಯಾಗಿ ಅರ­ಣ್ಯ­­ದಲ್ಲಿ ಗುರುವಾರ ಇಡೀ ಕಾರ್ಯಾ­ಚರಣೆ ನಡೆಸಿದರು. ಗ್ರಾಮಸ್ಥರು ಕೂಡ ನಾಡ ಬಂದೂಕು ಹಾಗೂ ದೊಣ್ಣೆ ಹಿಡಿದು  ಪಾಲ್ಗೊಂಡಿದ್ದರು. ಆದರೆ, ಹುಲಿ ಕಾಣಿಸಿಕೊಂಡಿಲ್ಲ.

ಕಲ್ಲು ತೂರಾಟ: ಘಟನೆಯಿಂದಾಗಿ ಮುಡುಗೈ ಗ್ರಾಮವು ಶೋಕ ಸಾಗರ­ದಲ್ಲಿ ಮುಳುಗಿತ್ತು. ಹುಲಿ ಹಿಡಿಯು­ವ­ರೆಗೂ ಅಂತ್ಯಸಂಸ್ಕಾರ ನಡೆಸಲು ಅವ­ಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜನರು ಬಂದಿದ್ದರು.

tiger1

ಬಂದೋಬಸ್ತ್‌ಗಾಗಿ ರಾತ್ರಿಯೇ ಗ್ರಾಮಕ್ಕೆ ಬಂದಿದ್ದ ಪೊಲೀಸರು ಅಲ್ಲಿಯೇ ಉಪಹಾರ ಸೇವಿಸಲು ಆರಂಭಿಸಿ­ದಾಗ ಕೆರಳಿದ ಗ್ರಾಮಸ್ಥರು ಅವರ ಮೇಲೆ ಕಲ್ಲು ತೂರಿ, ದೊಣ್ಣೆಗಳಿಂದ ಹಲ್ಲೆ ನಡೆಸಿದರು. ಕಲ್ಲು ತೂರಾಟ ಮತ್ತು ಹಲ್ಲೆಯಿಂದ ಐವರು ಪೊಲೀಸರು ಗಾಯಗೊಂಡಿದ್ದಾರೆ.

ಚಿಕ್ಕಮಗಳೂರಿಂದ ತಂದು ಬಿಟ್ಟದ್ದು
‘ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಬಲಿ ತೆಗೆದುಕೊಂಡ ನಂತರ ಹಿಡಿದು ಇಲ್ಲಿಗೆ   ತಂದು ಬಿಟ್ಟಿರುವ ನರಹಂತಕ ಹುಲಿಯೇ ಈ ಮಹಿಳೆಯನ್ನು ಬಲಿ ತೆಗೆದುಕೊಂಡಿದೆ. ಇದರ ಕುತ್ತಿಗೆಯಲ್ಲಿ ರೇಡಿಯೊ ಕಾಲರ್‌  ಕಂಡು ಬಂದಿದೆ. ಆದರೆ, ಅದರಿಂದ ಸಿಗ್ನಲ್‌ ಸಿಗುತ್ತಿಲ್ಲ. ಹುಲಿ ಸಿಗುವವರೆಗೂ ಹಗಲು– ರಾತ್ರಿ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಡಿಸಿಎಫ್‌ ಅಂಬಾಡಿ ತಿಳಿಸಿದರು.

ಬೆಳಗಾವಿ ಸಮೀಪದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದ ಬಳಿ ಸೋಮವಾರ ಕಾಣಿಸಿಕೊಂಡಿದ್ದೂ ಇದೇ ಹುಲಿ. ಖಾನಾಪುರ ತಾಲ್ಲೂಕಿನಲ್ಲಿ ಇದುವರೆಗೆ ಏಳು  ಜಾನುವಾರುಗಳನ್ನು  ಇದು ಕೊಂದಿದೆ ಎಂದು ಶಂಕಿಸಲಾಗಿದೆ.

‘ಅಧಿಕಾರಿಗಳ ನಿರ್ಲಕ್ಷ್ಯ’
‘ಮಹಿಳೆಯ ಶವದ ಬಳಿ ಹುಲಿ ಮಲಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿಲ್ಲ. ರಾತ್ರಿಯೇ ಹುಲಿಯನ್ನು ಕೊಲ್ಲಲು ಅವಕಾಶ ಇತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹುಲಿ ತಪ್ಪಿಸಿ­ಕೊಂಡು ಹೋಗಿದೆ. ಮತ್ತೆ ಯಾರಾ­­­ದರೂ ಪ್ರಾಣ ಕಳೆದು­ಕೊಂಡರೆ ಅಧಿಕಾರಿಗಳೇ
ಹೊಣೆ.’
–ಅರವಿಂದ ಪಾಟೀಲ, ಶಾಸಕ

Write A Comment