ಕರ್ನಾಟಕ

ಅರ್ಕಾವತಿ ಬಡಾವಣೆ ಡಿನೋಟಿಫಿ­ಕೇಶನ್‌ ಹಗರಣ: ಸಿ.ಎಂ ವಿರುದ್ಧ ಹೈಕಮಾಂಡ್‌ಗೆ ದೂರು

Pinterest LinkedIn Tumblr

siddu

ನವದೆಹಲಿ: ಅರ್ಕಾವತಿ ಬಡಾವಣೆ ಡಿನೋಟಿಫಿ­ಕೇಶನ್‌ ಹಗರಣ ಕುರಿತು ಕರ್ನಾಟಕದ ಕೆಲ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ಗೆ ದೂರು ನೀಡಿದ್ದಾರೆ.

ಮುಖ್ಯಮಂತ್ರಿಗಳ ಕೆಲವು ಸಮೀಪವರ್ತಿಗಳು ಈ ಡಿನೋಟಿ­­­ಫಿ­ಕೇಶನ್‌ನಿಂದ ಲಾಭ ಮಾಡಿಕೊಂಡಿ­ದ್ದಾರೆಂಬ ಆರೋಪಗಳಿವೆ ಎಂದು ಹೈಕಮಾಂಡ್‌ಗೆ ತಿಳಿಸಿದ್ದಾಗಿ ವಿಶ್ವಸನೀಯ ಮೂಲಗಳು ಹೇಳಿವೆ.

ಅರ್ಕಾವತಿ ಡಿನೋಟಿಫಿಕೇಶನ್‌ ತೀರ್ಮಾನವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲು ಬಿಜೆಪಿ ಉದ್ದೇಶಿಸಿದೆ. ಮೊಕದ್ದಮೆ ದಾಖಲಿಸಲು ರಾಜ್ಯಪಾಲರ ಅನುಮತಿ ಪಡೆಯುವ ಸಂಭವವಿದೆ. ಹಾಗೇನಾದರೂ ಆದರೆ ಪಕ್ಷ ಮತ್ತು ಸರ್ಕಾರ ತೀವ್ರ ಮುಜುಗರ ಎದುರಿಸ­ಬೇಕಾ­ಗುತ್ತದೆ ಎಂದು ವರಿಷ್ಠರ ಗಮನಕ್ಕೆ ತಂದಿದ್ದಾರೆ.

ಇವರೆಲ್ಲ ಅನೇಕ ದಿನಗಳಿಂದ ದೆಹಲಿಯಲ್ಲಿ ಉಳಿದಿದ್ದು, ಅರ್ಕಾವತಿ  ಹಗರಣದ ಎಲ್ಲ ದಾಖಲೆ­ಗಳನ್ನು ಹೈಕಮಾಂಡ್‌ಗೆ ತಲುಪಿಸಿ­ದ್ದಾರೆಂದು ಮೂಲ­ಗಳು ಖಚಿತಪಡಿಸಿವೆ.

ಹಿಂದೆ ಬಿ.ಎಸ್‌. ಯಡಿಯೂರಪ್ಪ ಪ್ರಕರಣದಲ್ಲಿ ಆಗಿನ ರಾಜ್ಯಪಾಲ ಎಚ್‌. ಆರ್‌. ಭಾರದ್ವಾಜ್‌ ಮಾಡಿದಂತೆ ಅರ್ಕಾವತಿ ಪ್ರಕರಣದಲ್ಲಿ ರಾಜ್ಯಪಾಲ ವಜುಭಾಯ್‌ ವಾಲಾ ಅವರು ಮೊಕದ್ದಮೆಗೆ ಅನುಮತಿ ಕೊಡುವ  ಸಾಧ್ಯತೆಯಿದೆ ಎಂದೂ ಈ ಮುಖಂಡರು ವಿವರಿಸಿದ್ದಾರೆ.

ಎಸ್‌.ಎಂ. ಕೃಷ್ಣ ಸರ್ಕಾರ 2003ರಲ್ಲಿ ರೂಪಿಸಿದ ಅರ್ಕಾವತಿ ಬಡಾವಣೆ ಯೋಜನೆಗೆ ಬಿಡಿಎ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭಿಸಿದಾಗಿನಿಂದಲೂ ವಿವಾದ ಹುಟ್ಟಿಕೊಂಡಿದೆ. ಸಿದ್ದರಾಮಯ್ಯ ಸರ್ಕಾರ ಬಿಡಿಎ ಶಿಫಾರಸಿನ ಅನ್ವಯ ಅರ್ಕಾವತಿ ಬಡಾವಣೆ ಯೋಜನೆ­ಯನ್ನು ಪುನರ್‌ ರೂಪಿಸಿ 541 ಎಕರೆ ಭೂಮಿ­ಯನ್ನು ಅಧಿಸೂಚನೆ ವ್ಯಾಪ್ತಿಯಿಂದ ಕೈಬಿಟ್ಟಿದೆ.

ಕೋರ್ಟ್ ಆದೇಶದಂತೆ ಈ ಕ್ರಮ ಕೈಗೊಂಡಿ­ರು­ವುದಾಗಿ  ಸಿದ್ದರಾಮಯ್ಯ ಪ್ರತಿಪಾದಿ­ಸುತ್ತಿ­ದ್ದಾರೆ. ಆದರೆ ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅಧಿ­ಸೂಚನೆ ವ್ಯಾಪ್ತಿಯಿಂದ ಕೈಬಿಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ದೂರುತ್ತಿದ್ದಾರೆ.

Write A Comment