ಕರ್ನಾಟಕ

ಕೊನೆಗೂ ವೈದ್ಯಕೀಯ ಪರೀಕ್ಷೆಗೆ ರಾಘವೇಶ್ವರ ಸ್ವಾಮೀಜಿ ಹಾಜರು: ತಾನು ಸಂಪೂರ್ಣ ಪುರುಷ ಎಂದ ಶ್ರೀ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ

Pinterest LinkedIn Tumblr

141205kpn71_ಬೆಂಗಳೂರು,ಡಿ.5: ರಾಮಕಥಾ ಗಾಯಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಶುಕ್ರವಾರ ವೈದ್ಯಕೀಯ ಪರೀಕ್ಷೆಗೆ ಹಾಜರಾಗಿದ್ದಾರೆ.

ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯ ನೆಫ್ರೋ ಯುರಾಲಜಿ ಸಂಸ್ಥೆಗೆ ಇಂದು ಬೆಳಗ್ಗೆ 8:30 ರ ವೇಳೆಗೆ ಖಾಲಿ ಹೊಟ್ಟೆಯಲ್ಲಿ ತನ್ನ ಶಿಷ್ಯ ಸಮೂಹದೊಂದಿಗೆ ಸ್ವಾಮೀಜಿ ಆಗಮಿಸಿದರು. ಆಸ್ಪತ್ರೆಯ ಅಧೀಕ್ಷಕ ಡಾ.ದುಗ್ಗಪ್ಪನೇತೃತ್ವದ ವೈದ್ಯರ ತಂಡ ಸತತ ಐದು ಗಂಟೆಗಳ ಕಾಲ ಸ್ವಾಮೀಜಿಯ ಜೀವರಸಗಳ ವೈದ್ಯಕೀಯ ಪರೀಕ್ಷೆ ನಡೆಸಿತು. ಆಸ್ಪತ್ರೆಯ ಸುತ್ತ ಪೊಲೀಸರು ಭಾರೀ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಆಸ್ಪತ್ರೆಯ ಹೊರಗಡೆ ಸ್ವಾಮೀಜಿಯ ಹಲವು ಶಿಷ್ಯರು ಜಮಾಯಿಸಿದ್ದರು. ಬೆಳಗ್ಗೆ 8:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಾಘವೇಶ್ವರ ಶ್ರೀಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಹೈಕೋರ್ಟ್ ಆದೇಶದಂತೆ 16 ವಿವಿಧ ಪರೀಕ್ಷೆಗಳನ್ನು ನಡೆಸಬೇಕಾಗಿದ್ದು, 13 ಪರೀಕ್ಷೆಗಳನ್ನು ಮಾತ್ರ ಇಂದು ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸ್ವಾಮೀಜಿ ಮುಜುಗರವಾಗುವ ಯಾವುದೇ ಪರೀಕ್ಷೆಗೆ, ಪುರುಷತ್ವಕ್ಕೆ ಸಂಬಂಧಿಸಿದ ಪರೀಕ್ಷೆಗೆ ಒಳಪಡಲು ನಿರಾಕರಿಸಿದ ಕಾರಣ ಉಳಿದ 3 ಪರೀಕ್ಷೆಗಳನ್ನು ಮಾಡಲಾಗಿಲ್ಲ ಎನ್ನಲಾಗುತ್ತಿದೆ.

ಸತತ 5 ಗಂಟೆಗಳ ಕಾಲ ನಡೆದ ವೈದ್ಯಕೀಯ ಪರೀಕ್ಷೆ ಮುಗಿದ ನಂತರ ಹೊರಗೆ ಬರುತ್ತಿದ್ದಂತೆಯೇ ರಾಘವೇಶ್ವರ ಶ್ರೀಯನ್ನು ಅದೇ ಪೊಲೀಸ್ ಭದ್ರತೆಯಲ್ಲಿ ಮಠಕ್ಕೆ ಕಳುಹಿಸಿಕೊಡಲಾಯಿತು. ರಾಮಕಥಾ ಗಾಯಕಿ ಪ್ರೇಮಲತಾ ಅವರು ನೀಡಿದ್ದ ಅತ್ಯಾಚಾರ ದೂರಿಗೆ ಸಂಬಂಧಪಟ್ಟಂತೆ ಸ್ವಾಮೀಜಿಯ ವೈದ್ಯಕೀಯ ಪರೀಕ್ಷೆ ನಡೆಸಲು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠ ಡಿ. 3 ರಂದು ಅನುಮತಿ ನೀಡಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ರಾಘವೇಶ್ವರ ಸ್ವಾಮೀಜಿಗೆ ನೋಟಿಸ್ ನೀಡಿ, ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದ್ದರು. ತರಾತುರಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಸ್ವಾಮೀಜಿ ಪರ ವಕೀಲರು, ವೈದ್ಯಕೀಯ ಪರೀಕ್ಷೆಗೆ 1 ವಾರ ಗಡುವು ನೀಡುವಂತೆ ಸಿಐಡಿ ಅಧಿಕಾರಿಗಳನ್ನು ಕೋರಿದ್ದರು.

ಕಾಲಾವಕಾಶ ನೀಡಲು ನಿರಾಕರಿಸಿದ ಸಿಐಡಿ ಅಧಿಕಾರಿಗಳು ನಿನ್ನೆ ರಾತ್ರಿ 8.45ಕ್ಕೆ ಮಠಕ್ಕೆ ಮತ್ತೊಂದು ನೋಟಿಸ್ ಕಳುಹಿಸಿ ನಾಳೆಯೇ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲೇಬೇಕು ಎಂದು ತಿಳಿಸಿ, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಗೂ ಮಾಹಿತಿ ನೀಡಿದ್ದರು. ಸಿಐಡಿ ಪೊಲೀಸರ ಎರಡನೇ ನೋಟಿಸ್‌ಗೆ ಮರುಮಾತನಾಡದ ಸ್ವಾಮೀಜಿ ಇಂದು ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಗೆ ಹಾಜರಾಗಿದ್ದು, ಆಸ್ಪತ್ರೆಯ ಅಧೀಕ್ಷಕ ಡಾ.ದುಗ್ಗಪ್ಪ ನೇತೃತ್ವದಲ್ಲಿ ಐದು ಮಂದಿ ವ್ಯೆದ್ಯರ ತಂಡ ಶ್ರೀಗಳ ರಕ್ತ, ಮೂತ್ರ, ವೀರ್ಯ, ಡಿಎನ್‌ಎ ಮತ್ತು ದೈಹಿಕ ಸದೃಢತೆ ಮುಂತಾದ ಪರೀಕ್ಷೆಗಳನ್ನು ನಡೆಸಿತು. ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ವೈದ್ಯಕೀಯ ಪರೀಕ್ಷೆ ಮುಕ್ತಾಯಗೊಂಡಿತು.

ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ವರದಿ ರವಾನಿಸಲಾಗಿದೆ.ಪ್ರಯೋಗಾಲಯದಿಂದ ಅಂತಿಮ ವರದಿ ಬಂದ ನಂತರ ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ನ್ಯಾಯಪೀಠದಲ್ಲಿ ಸ್ವಾಮೀಜಿಯ ವೈದ್ಯಕೀಯ ಪರೀಕ್ಷೆ ಸಂಬಂಧ ತೀವ್ರ ವಾದ-ಪ್ರತಿವಾದ ನಡೆದು, ಶ್ರೀಗಳ ಪರ ವಕೀಲರು ವೈದ್ಯಕೀಯ ಪರೀಕ್ಷೆಯ ಸ್ವರೂಪ ತಿಳಿಸಬೇಕೆಂದು ಮನವಿ ಮಾಡಿದ್ದರು. ಈ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು.

ನ್ಯಾಯ ಎಲ್ಲರಿಗೂ ಒಂದೇ. ಪ್ರಕರಣ ಗಂಭೀರ ಸ್ವರೂಪವಾಗಿದ್ದು, ರಾಘವೇಶ್ವರ ಸ್ವಾಮೀಜಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಇದರಲ್ಲಿ ಸಂವಿಧಾನ ಬಾಹಿರವಾದ ಯಾವುದೇ ಅಂಶವೂ ಇಲ್ಲ ಎಂದು ಪೀಠ ಹೇಳಿತ್ತು. ಈ ಮಧ್ಯೆ ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಬೇಕೆಂಬ ರಾಘವೇಶ್ವರ ಸ್ವಾಮೀಜಿಯ ಅರ್ಜಿ ವಿಚಾರಣೆಯನ್ನು ಇಂದು ನ್ಯಾಯಾಲಯ ಡಿ.8್ಕಕೆ ಮುಂದೂಡಿತು.

Write A Comment