ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರಿಗೂ ಉಳಿದ ಹಿಂದುತ್ವ ವಾದಿಗಳಿಗೂ ಸಾಕಷ್ಟು ವ್ಯತ್ಯಾಸ ಇದೆ. ಮೋದಿ ಅವರು ಶೇ 150ರಷ್ಟು ರಾಜಕಾರಣಿ’ ಎಂದು ಹಿರಿಯ ಇತಿಹಾಸತಜ್ಞ ಷ.ಶೆಟ್ಟರ್ ವ್ಯಾಖ್ಯಾನಿಸಿದರು.
‘ಅಭಿನವ’ ಪ್ರಕಾಶನದ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಯು.ಆರ್.ಅನಂತಮೂರ್ತಿ ಅವರ ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಕೃತಿಯ ಎರಡನೇ ಆವೃತ್ತಿ ಬಿಡುಗಡೆ ಹಾಗೂ ಸಂವಾದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರು ರಾಮಮಂದಿರ ನಿರ್ಮಾಣ ವಿಷಯವನ್ನು ಕೈಗೆತ್ತಿಕೊಂಡರು. ಇದರಲ್ಲಿ ಫಲಿತಾಂಶ ಸಿಗಲಿಲ್ಲ. ಬಿಜೆಪಿಗೂ ರಾಜಕೀಯ ಲಾಭ ಸಿಗಲಿಲ್ಲ. ಮೋದಿ ಅವರು ಗಂಗೆಯನ್ನು ತೊಳೆಯಲು ಮುಂದಾಗಿದ್ದಾರೆ. ಎಲ್ಲರೂ ಗಂಗೆ ಸ್ವಚ್ಛವಾಗಲಿ ಎಂದೇ ಬಯಸುತ್ತಾರೆ. ಇದೇ ಮೋಡಿ’ ಎಂದು ಅವರು ಪ್ರತಿಪಾದಿಸಿದರು. ‘ಪ್ರಧಾನಿ ಅವರ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಆರಂಭವಾಗಿದೆ. ಹಾದಿ ಬೀದಿ ಸ್ವಚ್ಛವಾದರೆ ಯಾರೂ ಬೇಡ ಎನ್ನುವುದಿಲ್ಲ. ಇದರ ಹಿಂದೆ ಹಿಂದುತ್ವದ ಅಜೆಂಡಾ ಇದ್ದರೆ ಅಪಾಯಕಾರಿ. ಆದರೆ, ಈ ಬಗ್ಗೆ ಈಗಲೇ ನಿರ್ಣಯಕ್ಕೆ ಬರಬೇಕಾದ ಅವಸರ ಇಲ್ಲ’ ಎಂದರು.
‘ಅನಂತಮೂರ್ತಿ ಅವರಿಗೆ ಮೋದಿ ಅವರ ಹಿನ್ನೆಲೆ ಗೊತ್ತಿತ್ತು. ಮುನ್ನೆಲೆ ಗೊತ್ತಿರಲಿಲ್ಲ. ಮುನ್ನೆಲೆ ಅವರ ಊಹೆ ಮಾತ್ರ. ಮೋದಿ ಅವರು ಪ್ರಧಾನಿಯಾಗಿ ಎಲ್ಲರಿಗೂ ಸಮ್ಮತಿಯಾಗುವ ಕೆಲಸ ಮಾಡಿದರೆ ಅನಂತಮೂರ್ತಿ ಅವರ ಆತಂಕಕ್ಕೆ ಅಡಿಪಾಯ ಇಲ್ಲ ಎಂದು ಹೇಳೋಣ. ಈಗಲೇ ಅನಂತಮೂರ್ತಿ ಅವರ ಆತಂಕವನ್ನು ತಳ್ಳಿ ಹಾಕುವುದು ಸರಿಯಲ್ಲ’ ಎಂದು ಸಲಹೆ ನೀಡಿದರು.
‘ಗಾಂಧೀಜಿ ಅವರ ಹಿಂದುತ್ವದ ಕಲ್ಪನೆ ಬೇರೆ ರೀತಿಯದ್ದು. ಗಾಂಧೀಜಿ ಅವರ ಜತೆಗಿದ್ದವರ ಹಿಂದುತ್ವ ಕಲ್ಪನೆ ಮತ್ತೊಂದು ರೀತಿಯದ್ದು. ದೊಡ್ಡ ಗಂಟಲಿನಿಂದ ಶಬ್ದ ಮಾಡುವವರ ಹಿಂದುತ್ವ ಕಲ್ಪನೆ ಬೇರೊಂದು ಬಗೆಯದು’ ಎಂದು ಅವರು ವಿಶ್ಲೇಷಿಸಿದರು.
