ಬೆಂಗಳೂರು: ‘ಬಂಡಾಯಗಾರರು ಮರುಹುಟ್ಟು ಪಡೆಯಬೇಕು ಹಾಗೂ ದಲಿತರು ದಲಿತತ್ವದ ಕೋಟೆ ಒಡೆದು ಹೊರಬರಬೇಕು. ಈ ಎರಡೂ ಏಕಕಾಲದಲ್ಲಿ ನಡೆದರೆ ಮತ್ತೆ ಅಗಾಧ ಬದಲಾವಣೆಯಾಗಲಿದೆ’ ಎಂದು ಮೈಸೂರು ವಿ.ವಿ ಪ್ರಾಧ್ಯಾಪಕ ಡಾ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.
ಸುವರ್ಣ ಸಂಭ್ರಮದ ಅಂಗವಾಗಿ ಬೆಂಗಳೂರು ವಿ.ವಿ ಕನ್ನಡ ಅಧ್ಯಯನ ಕೇಂದ್ರವು ಶುಕ್ರವಾರ ಆಯೋಜಿಸಿದ್ದ ‘ಚಾರಿತ್ರಿಕ ದಾಖಲೆ ಬರೆದ ದಲಿತ–ಬಂಡಾಯ ಸಾಹಿತ್ಯ ಚಳವಳಿ’ ಎಂಬ ವಿಷಯ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
‘ಧರ್ಮಮುಖಿ ಚಿಂತನೆಯ ಅಟಾಟೋಪ ಹಾಗೂ ಕಾರ್ಪೊರೇಟ್ ಕರಿನೆರಳಿನಲ್ಲಿ ಸಮಾಜ ನಲುಗುತ್ತಿದೆ. ಎಡೆ ಸ್ನಾನ, ಮಡೆ ಸ್ನಾನ ಎಂದು ವಿವಾದ ಎಬ್ಬಿಸುತ್ತಿದ್ದಾರೆ. ಈ ಸ್ವರೂಪಕ್ಕೆ ಬೆಂಬಲ ವ್ಯಕ್ತಪಡಿಸುವವರೇ ಹೋಗಿ ಉರುಳಾಡಿ ತೋರಿಸಲಿ ನೋಡೋಣ’ ಎಂದು ಸವಾಲು ಹಾಕಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಸಿ.ವೀರಣ್ಣ, ‘ದಲಿತ–ಬಂಡಾಯ ಸಾಹಿತ್ಯ ಚಳವಳಿಯಲ್ಲಿ ತೊಡಗಿಸಿಕೊಂಡವರು ಪ್ರಜಾಸತ್ತಾತ್ಮಕ
ವ್ಯವಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ನೊಂದಿಗೆ ಗುರುತಿಸಿಕೊಳ್ಳಲು ಹಿಂಜರಿದರು. ಮುಂದೆ ಕೆಲವರು ಸರ್ಕಾರದೊಂದಿಗೆ ಕೈಜೋಡಿಸಿದರು. ಇದರಿಂದಾಗಿ ಚಳವಳಿ ಬಡವಾಯಿತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕವಿ ಡಾ.ಸಿದ್ದಲಿಂಗಯ್ಯ ಅವರು, ‘ದಲಿತ ಎನ್ನುವುದು ಒಂದು ಜಾತಿಯಲ್ಲ. ಎಲ್ಲಾ ಜಾತಿಯಲ್ಲಿರುವ ನೊಂದವರು, ಹಸಿದವರು, ಬಡವರೆಲ್ಲಾ ದಲಿತರೇ. ಶೋಷಿತರ ಕಣ್ಣೀರಿಗೆ ಸ್ಪಂದಿಸುವ ಹಾಗೂ ಅವರ ಹಿತವನ್ನು ಕಾಪಾಡುವ ರೀತಿಯ ಹಾಡು, ಕವನ ಹೊರಹೊಮ್ಮಬೇಕಾಗಿದೆ’ ಎಂದರು.
ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ‘ದೇಶದಲ್ಲಿ ಬಂಡವಾಳಶಾಹಿ ವಲಯ ಹಾಗೂ ಪುರೋಹಿತಶಾಹಿ ವಲಯ ಎಂಬ ಗುಂಪು ಅಪಾಯಕಾರಿಯಾಗಿ ಬೆಳೆದಿದ್ದು ನಮ್ಮ ಮುಂದೆ ಸವಾಲಾಗಿ ನಿಂತಿವೆ’ ಎಂದು ಹೇಳಿದರು.
‘ಪ್ರಧಾನಿ ಮೋದಿ ಅವರು ಗಂಗಾ ನದಿ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಸ್ವಚ್ಛಗೊಳಿಸಬೇಕು ಎಂದರೆ ಗಬ್ಬೆದ್ದು ಹೋಗಿದೆ ಎಂದರ್ಥ. ಗಂಗಾ ನದಿಯು ಭಾರತದ ಸಂಸ್ಕೃತಿಯ ಪ್ರತೀಕ. ಅಂದರೆ ದೇಶದ ಸಂಸ್ಕೃತಿಯೇ ಈಗ ಗಬ್ಬೆದ್ದು ಹೋಗಿದೆ. ಕರಾಳ ಶಕ್ತಿಗಳು ವಿವಿಧ ವೇಷ ತೊಟ್ಟು ಈ ಕೃತ್ಯದಲ್ಲಿ ತೊಡಗಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
ದೇಸಿ ಭಾಷೆಗಳಿಗೆ ಕಂಟಕ
ಕಾರ್ಪೊರೇಟ್ ವಲಯದ ಪ್ರಭಾವವು ಭಾರತೀಯ ಭಾಷೆಗಳ ಕತ್ತನ್ನು ಹಿಸುಕುತ್ತಿದೆ. ದೇಸಿ ಭಾಷೆ ಉಳಿಸಿಕೊಳ್ಳದಿದ್ದರೆ ನಮ್ಮ ದೇಶದಲ್ಲಿಯೇ ನಾವು ಅನಾಥರಾಗುತ್ತೇವೆ. ಇದು ಕೇವಲ ಕನ್ನಡ ಭಾಷೆಯೊಂದರ ಪ್ರಶ್ನೆ ಅಲ್ಲ. ಭಾರತದ ಎಲ್ಲಾ ದೇಸಿ ಭಾಷೆಗಳಿಗೆ ಕಂಟಕ ಎದುರಾಗಿದೆ
–ಡಾ.ಅರವಿಂದ ಮಾಲಗತ್ತಿ
