ಕರ್ನಾಟಕ

ಡಾ.ರಾಜ್‌ ಸ್ಮಾರಕ ಲೋಕಾರ್ಪಣೆಗೆ ಅದ್ಧೂರಿ ಸಿದ್ಧತೆ: ಭದ್ರತೆಗೆ 1500 ಪೊಲೀಸರು, ಸಂಜೆ ಅರಮನೆ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

Pinterest LinkedIn Tumblr

pvec29nov14-Raj-08_0

ಬೆಂಗಳೂರು: ಕಂಠೀರವ ಸ್ಟುಡಿಯೊ ಆವರಣದಲ್ಲಿ ನಿರ್ಮಿಸಿರುವ ಕನ್ನಡದ ಮೇರುನಟ ಡಾ. ರಾಜ್‌ಕುಮಾರ್‌ ಅವರ ಸ್ಮಾರಕದ ಲೋಕಾರ್ಪಣೆ ಸಮಾರಂಭವನ್ನು  ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಅದ್ಧೂರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಶನಿವಾರ (ನ.29) ಬೆಳಿಗ್ಗೆ 10.30ರಿಂದ 11.30ರವರೆಗೆ ಈ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ. ಮೇರು ನಟರಾದ ರಜನಿಕಾಂತ್, ಚಿರಂಜೀವಿ, ಡಾ.ಬಿ.ಸರೋಜಾದೇವಿ ಸೇರಿದಂತೆ ವಿವಿಧ ಭಾಷೆಗಳ ನಟ–ನಟಿಯರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ಸಮಾರಂಭದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.

‘ಸಮಾರಂಭಕ್ಕೆ ಆರು ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಚಿತ್ರರಂಗ ಮತ್ತು ರಾಜಕೀಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ಥಳಾವಕಾಶದ ಕೊರತೆ ಕಾರಣದಿಂದ ಉದ್ಘಾಟನೆ ಸಮಯದಲ್ಲಿ ಸ್ಮಾರಕದ ಬಳಿ ತೆರಳಲು ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ’ ಎಂದು ಶಾಲಿನಿ ರಜನೀಶ್ ಹೇಳಿದರು.

‘ಸಾರ್ವಜನಿಕರು ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮವನ್ನು ವೀಕ್ಷಿಸಲು ಸ್ಟುಡಿಯೊ ಆವರಣದಲ್ಲಿ 10 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.  ಉದ್ಘಾಟನೆ ಮುಗಿದ ಬಳಿಕ ಎಲ್ಲರೂ ಸ್ಮಾರಕದ ಬಳಿ ತೆರಳಿ ಶ್ರದ್ಧಾಂಜಲಿ ಸಲ್ಲಿಸಬಹುದಾಗಿದೆ. ಇದೇ ವೇಳೆ ಡಾ.ರಾಜ್‌ ಅವರ ಜೀವನ ಚರಿತ್ರೆ ಆಧಾರಿತ 20 ನಿಮಿಷಗಳ ಸಾಕ್ಷ್ಯಚಿತ್ರವನ್ನು ತಮಿಳು ನಟ ರಜನಿಕಾಂತ್ ಬಿಡುಗಡೆ ಮಾಡಲಿದ್ದಾರೆ’ ಎಂದು ವಿವರಿಸಿದರು.

29BG_RAJKUMAR__1__2225878f‘ರಾಜ್‌ಕುಮಾರ್ ಅಭಿನಯದ ಚಿತ್ರಗಳಿಂದ ಸಂಗ್ರಹಿಸಿದ ಛಾಯಾಚಿತ್ರಗಳನ್ನು ಒಳಗೊಂಡ ಪುಸ್ತಕವನ್ನೂ ಸಿದ್ಧಪಡಿಸಲಾಗಿದೆ. ಅದನ್ನು ನಟ ಚಿರಂಜೀವಿ ಬಿಡುಗಡೆ ಮಾಡಲಿದ್ದಾರೆ. ನಂತರ, ಸಂಜೆ ಆರು ಗಂಟೆಗೆ ಅರಮನೆ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಲ್ಲಿ 25 ಸಾವಿರ ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಬರುವವರಿಗೆ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಸಹಾಯ ಕೇಂದ್ರ ಸ್ಥಾಪನೆ: ‘ಸಾಂಸ್ಕೃತಿಕ ಕಾರ್ಯಕ್ರಮ­ದಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳ ಕುಂದು ಕೊರತೆ ಆಲಿಸಲು ಅಮಾನುಲ್ಲಾ ಖಾನ್ ಗೇಟ್ ಬಳಿ ಪೊಲೀಸ್ ಸಹಾಯ ಕೇಂದ್ರ ತೆರೆಯಲಾಗಿದೆ. ಕುಟುಂಬ ಸದಸ್ಯರು ನಾಪತ್ತೆಯಾದರೆ ಅಥವಾ ಇನ್ನಿತರೆ ಯಾವುದೇ ಸಮಸ್ಯೆಗಳು ಎದುರಾದರೆ ಜನ ಕೇಂದ್ರದ ನೆರವು ಪಡೆಯಬಹುದು’ ಎಂದು ಪೊಲೀಸರು ಹೇಳಿದರು.

ಬಿಗಿ ಬಂದೋಬಸ್ತ್‌
‘ಸ್ಮಾರಕ ಲೋಕಾರ್ಪಣೆ ಸಮಾರಂಭ ಹಾಗೂ ಅರಮನೆ ಮೈದಾನದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್ ಅಲೋಕ್‌ ಕುಮಾರ್ ಹೇಳಿದರು.

‘ಸ್ಟುಡಿಯೊ ಬಳಿ ಐವರು ಡಿಸಿಪಿ, 11 ಎಸಿಪಿ, 45 ಇನ್‌ಸ್ಪೆಕ್ಟರ್‌, ಮಹಿಳಾ ಸಿಬ್ಬಂದಿ ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಜತೆಗೆ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಹಾಗೂ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) 20 ತುಕಡಿಗಳು, ಜಲಫಿರಂಗಿ, ಕ್ಷಿಪ್ರ ಕಾರ್ಯ ಪಡೆ (ಆರ್ಎಎಫ್‌), ಕ್ಷಿಪ್ರ ಪ್ರತಿಕ್ರಿಯಾ ತಂಡಗಳು (ಕ್ಯೂಆರ್‌ಟಿ) ಬಂದೋಬಸ್ತ್‌ಗೆ ಇರುತ್ತವೆ. ಪ್ರತಿ ಪ್ರವೇಶ ದ್ವಾರದಲ್ಲೂ ತಪಾಸಣೆಗಾಗಿ 39 ಲೋಹ ಶೋಧಕಗಳನ್ನು ಅಳವಡಿಸಲಾಗಿದೆ. ಜನ ಸಾಮಾನ್ಯರು ಸ್ಟುಡಿಯೊದ ಮುಖ್ಯ ಪ್ರವೇಶ ದ್ವಾರದ ಮೂಲಕವೇ ಆವರಣಕ್ಕೆ ಬರಬೇಕು’ ಎಂದರು.

‘ಸಂಜೆ ಅರಮನೆ ಮೈದಾನದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯ­ಕ್ರಮದ ವೇಳೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಇಲ್ಲಿ ಮೂವರು ಡಿಸಿಪಿಗಳ ನೇತೃತ್ವ­ದಲ್ಲಿ ಭದ್ರತೆ ಇರು­ತ್ತದೆ. ಅಭಿಮಾನಿಗಳು ಒಂದು ತಾಸಿನ ಮುಂಚೆಯೇ ಮೈದಾನಕ್ಕೆ ಬರ­ಬೇಕು. ಕಾರ್ಯ­ಕ್ರಮಕ್ಕೆ ಪಾನಮತ್ತರಾಗಿ ಬಂದರೆ ಅಥವಾ ಮಾರಕಾಸ್ತ್ರ, ಸ್ಫೋಟಕ ವಸ್ತು­ಗಳ ಜತೆ ಬಂದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ವಾಹನ ನಿಲುಗಡೆ ವ್ಯವಸ್ಥೆ
‘ಸ್ಮಾರಕ ಲೋಕಾರ್ಪಣೆಗೆ ಬರುವ ಸಾರ್ವಜನಿಕರು ಕಂಠೀರವ ಸ್ಟುಡಿಯೊದಿಂದ ಸುಮನಹಳ್ಳಿ ಮೇಲ್ಸೇತುವೆವರೆಗೆ ರಸ್ತೆಯ ಎರಡು ಬದಿಯಲ್ಲೂ ವಾಹನ ನಿಲುಗಡೆ ಮಾಡ­ಬಹುದು. ಬೇರೆ ಬೇರೆ ಊರಿ­ನಿಂದ ಬಸ್‌, ಟೆಂಪೊಗಳಲ್ಲಿ ಬರುವವರು ಸ್ಟುಡಿಯೊ ಸಮೀಪದ ಕೂಲಿನಗರ ಮೈದಾನ­ದಲ್ಲಿ ವಾಹನ ನಿಲ್ಲಿಸಬೇಕು’ ಎಂದು ಪಶ್ಚಿಮ (ಸಂಚಾರ) ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದರು.

‘ಸಂಜೆ ಅರಮನೆ ಮೈದಾನಕ್ಕೆ ಬರುವವರು ಟಿ.ವಿ.ಟವರ್‌ ಮುಂಭಾಗದ ಸರ್ಕಸ್‌ ಮೈದಾ­ನ­ದಲ್ಲಿ ವಾಹನ ನಿಲುಗಡೆ ಮಾಡಬೇಕು. ಕೃಷ್ಣ ವಿಹಾರ ಗೇಟ್‌ ಮುಖಾಂತರ ಗಣ್ಯರು, ಗಾಯತ್ರಿ ವಿಹಾರ ಗೇಟ್ ಮೂಲಕ ಅಭಿಮಾನಿಗಳು ಮೈದಾನ ಪ್ರವೇಶಿಸಬೇಕು’ ಎಂದು ಅಲೋಕ್ ಕುಮಾರ್‌ ಹೇಳಿದರು.

Write A Comment