ಕರ್ನಾಟಕ

ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿರೋಧ: ಕಸ್ತೂರಿರಂಗನ್ ವರದಿ: ಮೈಸೂರು ಜಿಲ್ಲೆ ಗ್ರಾಮಸ್ಥರ ತಟಸ್ಥ ನಿಲುವು

Pinterest LinkedIn Tumblr

Untitled-1

ಹಾಸನ: ‘ಪಶ್ಚಿಮಘಟ್ಟ ಪ್ರದೇಶದಲ್ಲಿ ಜೀವ ವೈವಿಧ್ಯ ರಕ್ಷಣೆಗೆ ಸಂಬಂಧಿಸಿ ದಂತೆ ಡಾ.ಕಸ್ತೂರಿ ರಂಗನ್‌ ಸಲ್ಲಿಸಿದ ವರದಿ­ಯಲ್ಲಿ ಏನಿದೆ ಎಂಬುದು ಜನರಿಗೆ ತಿಳಿದಿಲ್ಲ. ಮಾಧ್ಯಮಗಳಿಂದ ತಿಳಿದು ಬಂದಿರುವ ವಿಚಾರದಲ್ಲೂ ಕೆಲವು ಗೊಂದಲಗಳಿದ್ದು, ಈ ಸ್ಥಿತಿ ಯಲ್ಲಿ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯ ವಿಲ್ಲ’ ಎಂದು ಗುರುವಾರ ಇಲ್ಲಿಯ ಜಿಲ್ಲಾಧಿ­ಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರೈತರು ಹಾಗೂ ಜನಪ್ರತಿನಿಧಿ­ಗಳು ವಿರೋಧ ವ್ಯಕ್ತಪಡಿಸಿದರು.

ಕಸ್ತೂರಿ ರಂಗನ್‌ ವರದಿಯ ಆಧಾರ­ದಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಕರಡು ನೀತಿಯ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆಗಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು.

‘ಎರಡು ದಿನಗಳ ಹಿಂದೆ ನೋಟಿಸ್‌ ಕೊಟ್ಟು ವರದಿ ಬಗ್ಗೆ ಅಭಿಪ್ರಾಯ ತಿಳಿಸಿ ಎಂದರೆ ಹೇಗೆ? ವರದಿಯ ಪ್ರತಿಯನ್ನು ಅಂತರ್ಜಾಲದಿಂದ ಪಡೆಯಬೇಕು, ಅಲ್ಲಿಯೂ ವರದಿಯ ಕನ್ನಡ ಅನು ವಾದ ಇಲ್ಲ. ಹೀಗಿದ್ದಾಗ ಹಳ್ಳಿಯ ರೈತರು ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು. ವರದಿಯ ಮುಖ್ಯಾಂಶ­ಗಳನ್ನು ಕನ್ನಡಕ್ಕೆ ಭಾಷಾಂತರಿಸಿ, ಅದನ್ನು ಜನರಿಗೆ ಕೊಟ್ಟು ನಂತರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ ಅಭಿಪ್ರಾಯ ಸಂಗ್ರಹಿಸಬೇಕು’ ಎಂದು ಒತ್ತಾಯಿಸಿದರು.

ತಟಸ್ಥ ನಿಲುವು, (ಮೈಸೂರು ವರದಿ):
ಪಶ್ಚಿಮಘಟ್ಟದ ಸಂರಕ್ಷಣೆಯ ಕುರಿತು ಡಾ. ಕಸ್ತೂರಿ ರಂಗನ್‌ ಸಮಿತಿ ಸಲ್ಲಿಸಿರುವ ವರದಿಗೆ ಮೈಸೂರು ಜಿಲ್ಲೆಯ ಸೂಕ್ಷ್ಮ ಜೀವ ವೈವಿಧ್ಯ ತಾಣದ ವ್ಯಾಪ್ತಿಯ ಗ್ರಾಮಸ್ಥರು ಯಾವುದೇ ಅಭಿಪ್ರಾಯ ವ್ಯಕ್ತ ಪಡಿಸಲಿಲ್ಲ.

ನ. 21ರಿಂದ 27ರ ಮಧ್ಯಾಹ್ನ 3 ಗಂಟೆಯವರೆಗೆ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜೀವ ವೈವಿಧ್ಯ ತಾಣದ ವ್ಯಾಪ್ತಿಗೆ ಒಳಪಟ್ಟ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ 49 ಗ್ರಾಮಗಳ ಪೈಕಿ, 4 ಹಳ್ಳಿ ತಟಸ್ಥ ನಿಲುವಿಗೆ ಬದ್ಧವಾಗಿವೆ. ಉಳಿದ 45 ಗ್ರಾಮ ಬಂಡೀಪುರ ಮತ್ತು ನಾಗರ­ಹೊಳೆಯ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಒಳಪಟ್ಟಿ ರುವುದರಿಂದ ಅಹ­ವಾಲು ಸ್ವೀಕಾರ ಅಭಿಯಾನದಿಂದ ಅವುಗಳನ್ನು ಕೈಬಿಡ ಲಾಗಿತ್ತು. ಹೀಗಾಗಿ, ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಅಹವಾಲು ಸ್ವೀಕಾರ ಸಭೆ ಕೆಲವೇ ನಿಮಿಷಗಳಲ್ಲಿ ಪೂರ್ಣ ಗೊಂಡಿತು.

ಮುಂದಿನ ವಾರ ವರದಿ: ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತ ನಾಡಿದ ರಾಜ್ಯ ತಜ್ಞರ ಸಮಿತಿಯ ಸದಸ್ಯ ಕಾರ್ಯದರ್ಶಿ ಆರ್‌.ಕೆ. ಸಿಂಗ್‌, ಪಶ್ಚಿಮಘಟ್ಟದ ಕುರಿತು ಡಾ.ಕಸ್ತೂರಿ ರಂಗನ್‌ ಸಮಿತಿ ಸಲ್ಲಿಸಿರುವ ವರದಿಯ ವ್ಯಾಪ್ತಿಗೆ 9 ಜಿಲ್ಲೆಗಳು ಒಳಪಡುತ್ತವೆ. ನ. 17ರಿಂದ ಎಲ್ಲ ಜಿಲ್ಲೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳಿಗೆ ಭೇಟಿ ನೀಡ ಲಾಗಿದೆ. ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭೇಟಿಗೆ ಸಮಯ ನಿಗದಿಯಾಗಿದೆ. ಈ ಪ್ರಕ್ರಿಯೆ ಎರಡು ದಿನಗಳಲ್ಲಿ ಪೂರ್ಣಗೊಳ್ಳ­ಲಿದ್ದು, ಡಿಸೆಂಬರ್ ಮೊದಲ ವಾರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸ ಲಾಗುವುದು. ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವರದಿಯನ್ನು ಬೆಂಬಲಿಸಿ 83 ಗ್ರಾಮ ಪಂಚಾಯ್ತಿಗಳು ನಿರ್ಣಯ ಕೈಗೊಂಡಿವೆ.

ಮಡಿಕೇರಿಗೆ ಭೇಟಿ ಇಂದು (ಮಡಿಕೇರಿ ವರದಿ): ಡಾ.ಕಸ್ತೂರಿ ರಂಗನ್‌ ವರದಿಯ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಸಮಿತಿಯ ತಜ್ಞರು ನ. 28ರಂದು ಮಡಿಕೇರಿಗೆ ಭೇಟಿ ನೀಡಲಿದ್ದಾರೆ. ಸಮಿತಿಗೆ ಆಕ್ಷೇಪಣೆಗಳನ್ನು ಸಲ್ಲಿ ಸಲು ಕಸ್ತೂರಿ ರಂಗನ್‌ ವರದಿ ವಿರೋಧಿ ಹೋರಾಟ ಸಮಿತಿ ನಿರ್ಧರಿಸಿದೆ.

ವರದಿ  ತಿರಸ್ಕರಿಸಲು ಆಗ್ರಹ, (ಕಾರವಾರ ವರದಿ):  ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಾದ ಡಾ.ಕೆ.ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಈ ವರದಿಯನ್ನು ಸರ್ಕಾರ ತಿರಸ್ಕರಿ ಸಬೇಕು ಎಂದು ಒತ್ತಾಯಿ ಸಿದರು. ಕಸ್ತೂರಿ ರಂಗನ್ ಸಮಿತಿ ನೀಡಿರುವ ಶಿಫಾರಸುಗಳ ಪರಿಶೀಲನೆಗೆ ಸರ್ಕಾರ ರಚಿಸಿರುವ ಎನ್.ಎಂ.ಎನ್. ಸಹಾಯ್ ಅವರ ನೇತೃತ್ವದ ಉನ್ನತಾಧಿಕಾರ ಸಮಿತಿ ಗುರುವಾರ ಕಾರವಾರದಲ್ಲಿ ಅಹವಾಲುಗಳನ್ನು ಸ್ವೀಕರಿಸಿತು. ವಿವಿಧ ಸಂಘ ಸಂಸ್ಥೆಗಳ ಪರವಾಗಿ ಒಟ್ಟು 64 ಅರ್ಜಿಗಳನ್ನು ಸಲ್ಲಿಸಲಾಯಿತು.
………………………………………..
ಚಿಕ್ಕಮಗಳೂರು: ವರದಿ ತಿರಸ್ಕರಿಸಲು ಒಕ್ಕೊರಲ ನಿರ್ಣಯ
ಚಿಕ್ಕಮಗಳೂರು: ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ ಪ್ರದೇಶಗಳ ಸಂರಕ್ಷಣೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಡಾ.ಕೆ. ಕಸ್ತೂರಿರಂಗನ್ ವರದಿ ತಿರಸ್ಕರಿಸಬೇಕೆಂಬ ಒಕ್ಕೊರಲ ನಿರ್ಣಯ ವನ್ನು ಇಲ್ಲಿ ಗುರುವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಕೈಗೊಳ್ಳಲಾಯಿತು.

ಕಸ್ತೂರಿರಂಗನ್‌ ವರದಿಯಲ್ಲಿ ಜಿಲ್ಲೆಯ 142 ಹಳ್ಳಿಗಳನ್ನು ಸೇರಿಸಿದ್ದು, ಈ ಎಲ್ಲ ಹಳ್ಳಿಗಳ ಜನರು ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವರದಿ ಮಲೆನಾಡಿನ ಜನರ ಬದುಕು ಕಸಿದುಕೊಳ್ಳಲಿದೆ.

ಈ ವರದಿಯಿಂದ ಜಿಲ್ಲೆ ಕೈಬಿಡಬೇಕೆಂದು ಜನಪ್ರತಿನಿಧಿಗಳು ಮತ್ತು ರೈತ ಮುಖಂಡರು ಆಗ್ರಹಿಸಿ ದರು.  ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶಗಳ ಬಗ್ಗೆ ಡಾ.ಕೆ. ಕಸ್ತೂರಿರಂಗನ್‌ ನೇತೃತ್ವದ ಸಮಿತಿ ಶಿಫಾರಸು ಮಾಡಿ­ರುವ ವರದಿ ಕುರಿತು ಸಾರ್ವಜನಿಕ ಅಹವಾಲು ಸ್ವೀಕರಿಸಲು ಜಿಲ್ಲಾ ಪಂಚಾ­ಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ಕರೆಯಲಾಗಿತ್ತು. ಅಹವಾಲು ಆಲಿಸಲು ರಾಜ್ಯಮಟ್ಟದ ತಜ್ಞರ ಸಮಿತಿ ಸದಸ್ಯರಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ ಮತ್ತು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ರವಿರಾಜ್‌ ಸಭೆಗೆ ಬಂದಿದ್ದರು.

ಕಸ್ತೂರಿರಂಗನ್‌ ವರದಿ ಸಾರಾಂಶ­ವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲು ಮುಂದಾದ ಅಧಿಕಾರಿಗಳಿಗೆ, ಅವಕಾಶ ನೀಡದ ರೈತ ಮುಖಂಡರು ಮತ್ತು ವಿವಿಧ ಜನಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿ­ಸಿದರು.

ವೈಜ್ಞಾನಿಕವಲ್ಲದ ಈ ವರದಿ ತಿರಸ್ಕರಿಸಬೇಕೆಂಬ ಜಿಲ್ಲೆಯ ಜನರ ಒಕ್ಕೊರಲ ದನಿಯನ್ನು ಕೇಂದ್ರದ ಮುಂದಿಡಬೇಕು ಎಂದು ಒತ್ತಾಯಿಸಿ ದರು. ರಾಜ್ಯಮಟ್ಟದ ತಜ್ಞರ ಸಮಿತಿ ಸದಸ್ಯರಾದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿರಾಜ್‌ ಮಾತನಾಡಿ, ‘ಡಾ.ಕೆ.ಕಸ್ತೂರಿರಂಗನ್‌ ಸಮಿತಿ ಪಶ್ಚಿಮಘಟ್ಟ ಸಂರಕ್ಷಣೆಗೆ ಉಪಗ್ರಹ ಆಧಾರಿತ ಅಂಕಿ–ಅಂಶ ಮತ್ತು ಚಿತ್ರ ಆಧರಿಸಿ ವರದಿ ತಯಾರಿಸಿದೆ. ಕೇಂದ್ರ ಸರ್ಕಾರ ಈ ವರದಿಯಲ್ಲಿ ಸೇರಿರುವ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಸ್ಥಳ ಸಮೀಕ್ಷೆ ನಡೆಸಲು ಮತ್ತು ಜನರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚಿಸಿದೆ.

ಈ ಸಮಿತಿ ಸದಸ್ಯರಾಗಿ ಜನರ ಅಹವಾಲು ಆಲಿಸಲು ಬಂದಿದ್ದೇವೆ. ನೀವು ನೀಡುವ ಅಭಿಪ್ರಾಯ ಮತ್ತು ಲಿಖಿತ ಹೇಳಿಕೆಗಳನ್ನು ಕ್ರೋಡೀಕರಿಸಿ ಸರ್ಕಾರದ ಮುಂದಿಡುತ್ತೇವೆ’ ಎಂದು ಸಭೆಗೆ ಸ್ಪಷ್ಟಪಡಿಸಿದರು.

ಶಾಸಕ ಡಿ.ಎನ್‌.ಜೀವರಾಜ್‌ ಮಾತ ನಾಡಿ, ಜಿಲ್ಲೆಯ ಮಲೆನಾಡು ಪ್ರದೇಶ ಜಲಾಶಯಗಳು, ಕುವೆಂಪು ಜೈವಿಕ ಉದ್ಯಾನ, ಹುಲಿ ಯೋಜನೆ ಹೀಗೆ ನಾನಾ ಕಾರಣಗಳಿಗಾಗಿ ಬಹ ಳಷ್ಟು ಭೂಮಿ ಕಳೆದುಕೊಂಡಿದೆ. ಜನರು ಸಂತ್ರಸ್ತರಾಗಿದ್ದಾರೆ. ಕಸ್ತೂರಿರಂಗನ್‌ ವರದಿ ಜಾರಿಯಾದರೆ ಮಲೆನಾಡಿನ ಜನರ ಸಂಪೂರ್ಣ ಬದುಕನ್ನಷ್ಟೆ ಅಲ್ಲ, ಬಟ್ಟೆ, ಬರೆ ಕಸಿದುಕೊಂಡು ಆದಿಮಾನ­ವ­ರನ್ನಾಗಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಜೀವರಾಜ್‌ ಮಾತಿಗೆ ಶಾಸಕರಾದ ಸಿ.ಟಿ.ರವಿ, ಬಿ.ಬಿ.ನಿಂಗಯ್ಯ ಹಾಗೂ ವಿಧಾನ ಪರಿಷತ್‌ ಸದಸ್ಯೆ ಗಾಯತ್ರಿ ಶಾಂತೇಗೌಡ ದನಿಗೂಡಿಸಿದರು. ಗ್ರಾಮ ಸಭೆಗಳನ್ನು ನಡೆಸಿ ತಳಮಟ್ಟದಿಂದ ಜನರ ಅಭಿಪ್ರಾಯ ಸಂಗ್ರಹಿಸದ ಜಿಲ್ಲಾಡಳಿತದ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿದರು. ಕಸ್ತೂರಿ­ರಂಗನ್‌ ವರದಿ ಜನರಲ್ಲಿ ಆತಂಕ ಮೂಡಿಸಿದೆ.

ಈ ವರದಿ ತಿರಸ್ಕರಿಸ­ಬೇಕೆನ್ನುವುದು ಜನಾಭಿಪ್ರಾಯವಾಗಿದೆ. ಇದೇ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಬೇಕು ಎಂದು ಎಲ್ಲ ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು. ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಿ ರುವುದಾಗಿ ಒಂದು ಸಾಲಿನ ನಿರ್ಣಯ ಪ್ರಕಟಿಸದಿದ್ದರೆ ಸ್ಥಳದಲ್ಲೇ ಧರಣಿ ನಡೆಸುವುದಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಜಯರಾಮ್‌ ಎಚ್ಚರಿಕೆ ನೀಡಿದರು.

ಜಿಲ್ಲೆಯ ಜನರು ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಆಧರಿಸಿ, ವರದಿ ತಿರಸ್ಕರಿಸುವ ನಿರ್ಣಯ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಬಿ.ಎಸ್‌.ಶೇಖರಪ್ಪ  ಪ್ರಕಟಿಸಿದರು. ಸಭೆಯಲ್ಲಿ ಜಿಪಂ  ಅಧ್ಯಕ್ಷೆ ಭಾಗ್ಯ ರಂಗನಾಥ್‌, ಕಾರ್ಯನಿರ್ವಹಣಾ ಧಿಕಾರಿ ಪ್ರಿಯಾಂಕ್‌ ಮೇರಿ ಫ್ರಾನ್ಸಿಸ್‌, ಜಿಲ್ಲಾ ಪೊಲೀಸ್‌ ವರಿಷ್ಠ ಆರ್‌. ಚೇತನ್‌, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಣಿಕ್‌ ಇದ್ದರು.

Write A Comment