ಬೆಂಗಳೂರು, ನ.25: ಗ್ರಾಮೀಣ ಪ್ರದೇಶದ ಜನರ ಬದುಕನ್ನು ಸುಧಾರಣೆ ಮಾಡಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿ ಮನೆಗೆ ಒಂದು ಶೌಚಾಲಯ ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆವತಿಯಿಂದ ಏರ್ಪಡಿಸಲಾಗಿದ್ದ ‘ಗ್ರಾಮೀಣಾಭಿವೃದ್ಧಿ ಪಥ- ವಿಧಾನ ಸಭಾ ಸದಸ್ಯರಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟನೆ ಹಾಗೂ ಗ್ರಾಮೀಣ ಮತ ಕ್ಷೇತ್ರಗಳ ಗ್ರಾಮೀಣಾಭಿವೃದ್ಧಿ ಯೋಜನೆಗಳ ಪೂರ್ಣ ಮಾಹಿತಿಯುಳ್ಳ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪ್ರತಿ ಗ್ರಾಮಕ್ಕೆ ಒಂದು ಶಾಲೆ, ಮನೆಗೊಂದು ಶೌಚಾಲಯ, ಚರಂಡಿ ವ್ಯವಸ್ಥೆ, ಆಟದ ಮೈದಾನ ಕಡ್ಡಾಯವಾಗಿರಬೇಕು ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು, ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕು. ಪ್ರತಿಯೊಬ್ಬರಿಗೂ ಶೌಚಾಲಯ ಅಗತ್ಯ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಬಗ್ಗೆ ಚುನಾಯಿತ ಜನ ಪ್ರತಿನಿಧಿಗಳು ಆಸಕ್ತಿ ವಹಿಸಿದರೆ ನಮ್ಮ ರಾಜ್ಯವನ್ನು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡಬಹುದು ಎಂದು ಅವರು ಹೇಳಿದರು.
ಗ್ರಾಮೀಣ ಭಾಗದ ಜನರ ಜೀವನ ಸುಧಾರಣೆಯಾಗಬೇಕಾದರೆ ಸ್ವಚ್ಛತೆಯೂ ಅಷ್ಟೇ ಮುಖ್ಯ. ಎಲ್ಲರಿಗೂ ಎಲ್ಲ ಯೋಜನೆಗಳು ತಕ್ಷಣಕ್ಕೆ ಸಿಗುವುದಿಲ್ಲ. ಹಂತ-ಹಂತವಾಗಿ ತಲುಪುತ್ತವೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಸರಕಾರ ಅನುಷ್ಠಾನಗೊಳಿಸುವ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳಿಗೆ ಅರಿವಿರಬೇಕು. ಇದರ ಬಗ್ಗೆ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ತಿಳಿಸಬೇಕು. ಇಲ್ಲದಿದ್ದರೆ ಸರಕಾರ ಎಷ್ಟೇ ಖರ್ಚು ಮಾಡಿದರೂ ಪ್ರಯೋಜನ ಆಗುವುದಿಲ್ಲ ಎಂದು ಅವರು ಸಲಹೆ ನೀಡಿದರು.
ಸರಕಾರದ ಯೋಜನೆಗಳನ್ನು ಶಾಸಕರು ಸಮರ್ಥವಾಗಿ ಮೇಲ್ವಿಚಾರಣೆ ನಡೆಸಿದರೆ ಯೋಜನೆಗಳ ಅನುಷ್ಠಾನ ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಇಂದು ಬಿಡುಗಡೆ ಮಾಡಲಾಗಿರುವ ಮಾಹಿತಿ ಪುಸ್ತಕಗಳು ಸಹಕಾರಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಈಗಿರುವ ಪಂಚಾಯತ್‌ರಾಜ್ ವ್ಯವಸ್ಥೆ ಹಲವು ಬದಲಾವಣೆಗಳನ್ನು ಕಂಡಿದೆ. ಇನ್ನೂ ಹಲವು ಬದಲಾವಣೆಗಳಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶಾಸಕ ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆ ಯಾವರೀತಿ ಇರಬೇಕೆಂದು ತಿದ್ದುಪಡಿಗೆ ಶಿಫಾರಸು ಮಾಡಿ ವರದಿ ನೀಡಿದ್ದು, ಅದು ಸರಕಾರದ ಪರಿಶೀಲನೆಯಲ್ಲಿದೆ ಎಂದು ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್, ರಾಜ್ಯದ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಗಳು ನಾಯಕತ್ವ ವಹಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಗುಣಾತ್ಮಕ ಬದಲಾವಣೆ ತರಬೇಕು ಎಂದರು.
ರಾಜ್ಯದಲ್ಲಿ ಇನ್ನೂ 56 ಲಕ್ಷ ಶೌಚಾಲಯಗಳ ನಿರ್ಮಾಣ ಕಾರ್ಯ ಆಗಬೇಕಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಒಂದು ಲಕ್ಷ ಶೌಚಾಲಯ ನಿರ್ಮಾಣವಾಗಿದ್ದು, ಇತರ ಜಿಲ್ಲೆಗಳಲ್ಲೂ ಈ ಮಾದರಿ ಅನುಸರಿಸಬೇಕಾಗಿದೆ. 2018ರೊಳಗಾಗಿ ರಾಜ್ಯದ ಪ್ರತಿ ಮನೆಗೂ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಮೂಲಕ ಬಯಲು ಬಹಿರ್ದೆಸೆಮುಕ್ತ ರಾಜ್ಯ ಮಾಡಲಾಗುವುದು ಎಂದು ಅವರು ಹೇಳಿದರು.
ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ 40 ಮಂದಿ ನಿರುದ್ಯೋಗಿ ಯುವಕ-ಯುವತಿಯರನ್ನು ಗುರುತಿಸಿ ಸ್ವಯಂ ಉದ್ಯೋಗ ತರಬೇತಿ ಮೂಲಕ ಉದ್ಯೋಗಾವಕಾಶ ಕಲ್ಪಿಸಲು ರಾಜೀವ್‌ಗಾಂಧಿ ಯುವಚೈತನ್ಯ ಯೋಜನೆ ಜಾರಿಗೆ ತರಲಾಗಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 107 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 2 ಲಕ್ಷ ಯುವಕ-ಯುವತಿಯರನ್ನು ಗುರುತಿಸಿ, ಉದ್ಯೋಗಾವಕಾಶ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರ್ಯಾಂಕ್ ನೀಡುವ ಪದ್ಧತಿಯಿತ್ತು. ಆದರೆ, ಇನ್ನು ಮುಂದೆ ವಿಧಾನಸಭಾ ಕ್ಷೇತ್ರವಾರು ರ್ಯಾಂಕ್ ನೀಡಲಾಗುವುದು. ಇದರಿಂದಾಗಿ, ಶಾಸಕರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಶಾಸಕರಿಗೆ ಅನುದಾನ, ಕಾಮಗಾರಿ, ಗುರಿ ಸಾಧನೆ, ಲಾನುಭವಿಗಳು ಸೇರಿದಂತೆ ಇನ್ನಿತರ ಮಾಹಿತಿಯನ್ನೊಳಗೊಂಡ ಪುಸ್ತಕ ಮತ್ತು ಸಿಡಿಯನ್ನು ನೀಡಲಾಗಿದ್ದು, ಇದರಿಂದ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಬಳಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಸಚಿವರಾದ ಆರ್.ರೋಷನ್ ಬೇಗ್, ಉಮಾಶ್ರೀ, ಡಾ.ಶರಣ್‌ಪ್ರಕಾಶ್‌ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪ, ಎಚ್.ಎಸ್. ಮಹದೇವ ಪ್ರಸಾದ್, ರಾಜ್ಯ ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿ ಅಪ್ಪಾಜಿ ನಾಡಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಇಲಾಖೆಯ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
http://vbnewsonline.com
