ಬೆಂಗಳೂರು, ನ.25: ರಾಜ್ಯದ ಎಲ್ಲ ಭಾಗಗಳಲ್ಲೂ ತುರ್ತು ಸಂದರ್ಭಗಳಲ್ಲಿ ‘ಆರೋಗ್ಯ ಕವಚ 108’ ಸೇವೆ ಕಲ್ಪಿಸುವುದು ಸರಕಾರದ ಮುಖ್ಯ ಧ್ಯೇಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಮುಂಭಾಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ‘108 ಆರೋಗ್ಯ ಕವಚ’ಕ್ಕೆ ಹೊಸದಾಗಿ ಸೇರ್ಪಡೆಗೊಂಡ 198 ಆ್ಯಂಬುಲೆನ್ಸ್ ವಾಹನಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಅಪಘಾತ, ಹೆರಿಗೆ ಸಮಯದಲ್ಲಿ ಹಾಗೂ ತೀವ್ರತರದ ಕಾಯಿಲೆಗಳಿಗೆ ತುತ್ತಾದ ಸಂದರ್ಭದಲ್ಲಿ ಮೊದಲ ಒಂದು ಗಂಟೆಯೊಳಗೆ ಅಗತ್ಯ ವೈದ್ಯಕೀಯ ಸೇವೆ ಲಭ್ಯವಾದರೆ ವ್ಯಕ್ತಿಯ ಪ್ರಾಣ ಉಳಿಸಬಹುದು. ರಾಜ್ಯದಲ್ಲಿ 6.17 ಕೋಟಿ ಜನಸಂಖ್ಯೆಯಿದ್ದು, 1 ಲಕ್ಷ ಜನಸಂಖ್ಯೆ ಗೊಂದರಂತೆ ಆ್ಯಂಬುಲೆನ್ಸ್ ಸೇವೆ ಲಭ್ಯವಿತ್ತು. ಇದೀಗ ಹೊಸದಾಗಿ 198 ಆ್ಯಂಬುಲೆನ್ಸ್ ವಾಹನಗಳು ಸೇರ್ಪಡೆಯಾಗಿರುವುದರಿಂದ ಈ ಪ್ರಮಾಣ 75-80 ಸಾವಿರಕ್ಕೆ ಇಳಿಕೆ ಯಾಗಿದೆ ಎಂದು ಅವರು ಹೇಳಿದರು.
ಹೊಸದಾಗಿ 198 ಆ್ಯಂಬುಲೆನ್ಸ್ ಗಳು ಸೇರ್ಪಡೆಯಾಗಿರುವುದರಿಂದ ಆ್ಯಂಬುಲೆನ್ಸ್ಸ್‌ಗಳ ಸಂಖ್ಯೆ 715ಕ್ಕೆ ಏರಿಕೆಯಾಗಿದ್ದು, ಇಂದಿನಿಂದಲೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಆ್ಯಂಬುಲೆನ್ಸ್‌ಗಳು ಕರ್ತವ್ಯ ನಿರ್ವಹಿಸಲಿವೆ. 108 ಆ್ಯಂಬುಲೆನ್ಸ್ ವಾಹನದಲ್ಲಿ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯಗಳಿರುತ್ತವೆ. ರಾಜ್ಯದಲ್ಲಿನ ಬಡವರೂ ಸೇರಿದಂತೆ ಎಲ್ಲ ವರ್ಗದವರಿಗೂ ತುರ್ತು ಆರೋಗ್ಯ ಸೇವೆ ಒದಗಿಸಬೇಕೆಂಬುದು ನಮ್ಮ ಗುರಿ. ಪ್ರತಿಯೊಬ್ಬರ ಪ್ರಾಣವೂ ಕೂಡ ಅಮೂಲ್ಯವಾದದ್ದು ಎಂದು ಸಿದ್ದರಾಮಯ್ಯ ಹೇಳಿದರು.
ಶ್ರೀಮಂತರು ಖಾಸಗಿ, ಹೈಟೆಕ್ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಯನ್ನು ಪಡೆಯುತ್ತಾರೆ. ಆದರೆ, ಬಡವರು, ಕೆಳ ಮಧ್ಯಮ ವರ್ಗದ ಜನರಿಗೆ ಆರ್ಥಿಕ ಶಕ್ತಿ ಇಲ್ಲದ ಕಾರಣ, ಅವರಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುವುದಿಲ್ಲ. ಅಂತಹವರಿಗೆ ಆರೋಗ್ಯ ಕವಚ ಯೋಜನೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು. ಮುಂದಿನ ಸಾಲಿನ ಜನವರಿ ಮೊದಲ ವಾರದಲ್ಲಿ ಮೋಟರ್ ಬೈಕ್ ಆ್ಯಂಬುಲೆನ್ಸ್ ಸೇವೆಯನ್ನು ರಾಜ್ಯದಲ್ಲಿ ಆರಂಭಿಸಲಾಗುವುದು. ಅಲ್ಲದೆ, ಬಜೆಟ್‌ನಲ್ಲಿ ಘೋಷಿಸಿರುವಂತೆ 60 ವರ್ಷ ಮೇಲ್ಪಟ್ಟವರಿಗೆ ಉಚಿತ ದಂತಪಂಕ್ತಿ ವಿತರಣೆ ಮಾಡುವ ಯೋಜನೆಗೆ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ, ಪಂಜಾಬ್‌ನಲ್ಲಿ ಹಸಿರು ಕ್ರಾಂತಿ, ಗುಜರಾತ್‌ನಲ್ಲಿ ಕ್ಷೀರ ಕ್ರಾಂತಿಯಾದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ‘ಆರೋಗ್ಯ ಕ್ರಾಂತಿ’ಯನ್ನು ನಡೆಸಿದೆ. ಆರೋಗ್ಯ ಕವಚ ಯೋಜನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಮುಖ್ಯಮಂತ್ರಿ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದರು.
ಜನವರಿ ಮೊದಲ ವಾರದಲ್ಲಿ ಮೋಟರ್ ಬೈಕ್ ಆ್ಯಂಬುಲೆನ್ಸ್ ಸೇವೆ ಜಾರಿಗೆ ತರಲಾಗುತ್ತಿದ್ದು, ಏಷ್ಯಾದಲ್ಲೆ ಇದು ಮೊಟ್ಟ ಮೊದಲ ಬಾರಿಗೆ ಅನುಷ್ಠಾನಗೊಳ್ಳಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಏರ್ ಆ್ಯಂಬುಲೆನ್ಸ್ ಸೇವೆ ಒದಗಿಸಲು ಚರ್ಚೆ ನಡೆಯುತ್ತಿದೆ ಎಂದು ಖಾದರ್ ತಿಳಿಸಿದರು.
ಡಿಸೆಂಬರ್ ಅಂತ್ಯದೊಳಗೆ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಉಚಿತ ಕೃತಕ ದಂತ ಅಳವಡಿಕೆ ಯೋಜನೆ ಆರಂಭಿಸಲಾಗುವುದು. ಅಲ್ಲದೆ, ಪ್ರತಿಯೊಂದು ಜಿಲ್ಲೆಯಲ್ಲಿ ತಾಲೂಕಿಗೊಂದು ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಅವರು ನುಡಿದರು.
ಸಮಾರಂಭದಲ್ಲಿ ಸಚಿವರಾದ ಆರ್.ರೋಷನ್ ಬೇಗ್, ಡಾ.ಶರಣಪ್ರಕಾಶ್ ಪಾಟೀಲ್, ದಿನೇಶ್ ಗುಂಡೂರಾವ್, ಮೇಯರ್ ಎನ್.ಶಾಂತಕುಮಾರಿ, ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಭೈರತಿ ಬಸವರಾಜ್, ಜಿವಿಕೆ ಸಂಸ್ಥೆ ನಿರ್ದೇಶಕ ಕೃಷ್ಣರಾಜು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಶೈಲಂ, ಆಯುಕ್ತ ಪಿ.ಎಸ್.ವಸ್ತ್ರದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
http://vbnewsonline.com/home/
