ಕರ್ನಾಟಕ

‘ಕಾಮನ್‌ವೆಲ್ತ್ ವಿಜ್ಞಾನ ಸಮಾವೇಶ’ ಉದ್ಘಾಟನೆ: ಮುಂದಿನ ದಿನಗಳು ವಿಜ್ಞಾನಕ್ಕೆ ಮೀಸಲು: ಪ್ರಣವ್

Pinterest LinkedIn Tumblr

science

ಬೆಂಗಳೂರು, ನ.25: ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ, ಯಶಸ್ವಿ ಮಂಗಳ ಯಾನ, ಕಡಿಮೆ ಬೆಲೆಯ ಲಸಿಕೆಗಳ ಉತ್ಪಾದನೆ, ಸೌರಶಕ್ತಿ ಬಳಕೆ ಮೊದಲಾದ ವಿಷಯಗಳಲ್ಲಿ ನಮ್ಮ ದೇಶ ಯಶಸ್ಸಿನತ್ತ ಮುನ್ನಡೆದಿದೆ. ಮುಂದಿನ ದಿನಗಳು ವಿಜ್ಞಾನಕ್ಕೆ ಮೀಸಲು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಿಳಿಸಿದ್ದಾರೆ.
ಲಂಡನ್‌ನ ರಾಯಲ್ ಸೊಸೈಟಿ ಭಾರತ ಸರಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಾಮನ್‌ವೆಲ್ತ್ ವಿಜ್ಞಾನ ಸಮಾ ವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳಯಾನವನ್ನು ಕೈಗೊಂಡ ನಾಲ್ಕನೆ ರಾಷ್ಟ್ರ ಭಾರತವಾಗಿದ್ದು, ಮೊದಲ ಪ್ರಯತ್ನದಲ್ಲೆ ನಾವು ಯಶಸ್ವಿಯಾಗಿದ್ದೇವೆ. ವಿಜ್ಞಾನದಿಂದ ಹೊಸ ಆವಿಷ್ಕಾರಗಳು ಮಾತ್ರವಲ್ಲದೆ ಮನುಕುಲಕ್ಕೆ ಉಪಯೋಗ ವಾಗುವಂತಹ ಸಂಶೋಧನೆಗಳು ನಡೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಇಂದಿನ ಯುಗದಲ್ಲಿ ಶಿಕ್ಷಣವು ಮಹತ್ವದ ಪಾತ್ರ ವಹಿಸುತ್ತಿದ್ದು ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕಿದೆ. ನಮ್ಮ ಭವಿಷ್ಯ ವಿಜ್ಞಾನದ ಮೇಲೆ ಅವಲಂಬಿತವಾಗಿದೆ. ಬೆಂಗಳೂರು ದೇಶದಲ್ಲೇ ಐ.ಟಿ. ಹಬ್ ಎಂದೇ ಗುರುತಿಸಲ್ಪಟ್ಟಿದೆ. ಭಾರತವು ಇಂಟರ್‌ನೆಟ್ ಬಳಕೆಯಲ್ಲಿ ಮೂರನೆ ಸ್ಥಾನದಲ್ಲಿದೆ. ಅಲ್ಲದೆ ಮೊಬೈಲ್ ಬಳಕೆಯಲ್ಲೂ ಭಾರತ ಎರಡನೆ ಸ್ಥಾನದಲ್ಲಿದೆ. ಆದುದರಿಂದ, ವಿಜ್ಞಾನದ ಸದ್ಬಳಕೆಯನ್ನು ಹಾಗೂ ಅದರ ಸಂಶೋಧನೆಯನ್ನು ನಾವು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ರಾಯಲ್ ಸೊಸೈಟಿ ಆಫ್ ಲಂಡನ್ ನ ಅಧ್ಯಕ್ಷ ಪಾಲ್‌ನರ್ಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾವು ಹವಾಮಾನ ವೈಪರೀತ್ಯ, ರೋಗ ರುಜಿನಗಳು, ಜನಸಂಖ್ಯಾ ಸ್ಫೋಟ, ಪರಿಸರ ಮಾಲಿನ್ಯ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಂತಹ ಗಂಭೀರ ವಿಚಾರಗಳನ್ನು ಚರ್ಚಿಸಿ ಪರಿಹಾರೋಪಾಯಗಳನ್ನು ರೂಪಿಸಲು ಈ ರೀತಿಯ ಸಮಾವೇಶಗಳು ಸೂಕ್ತ ವೇದಿಕೆಯಾಗಲಿದೆ ಎಂದರು.

ಇಂದಿನ ಯುವ ವಿಜ್ಞಾನಿಗಳೆ ಮುಂದೆ ವಿಜ್ಞಾನದ ಉತ್ತಮ ಭವಿಷ್ಯಕ್ಕೆ ದಾರಿ ದೀಪವಾಗಲಿದ್ದಾರೆ. ಅವರ ಸಹಕಾರ ವೈಜ್ಞಾನಿಕ ದೃಷ್ಟಿಕೋನ ಹಾಗೂ ಸಂಶೋಧನೆಗಳಿಂದ ಈ ಎಲ್ಲ ಕಾಮನ್‌ವೆಲ್ತ್ ರಾಷ್ಟ್ರಗಳು ಪ್ರಯೋಜನ ಪಡೆಯಲಿವೆ. ಇದು ಕಾಮಲ್‌ವೆಲ್ತ್ ನ ಮೊದಲ ಸಮಾವೇಶವಾಗಿದ್ದು 30 ದೇಶಗಳಿಂದ ಸುಮಾರು 300 ವಿಜ್ಞಾನಿಗಳು ಹಾಗೂ 70 ಪಿಎಚ್‌ಡಿ ವಿಜ್ಞಾನಿಗಳು ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ‘ಭಾರತರತ್ನ’ ವಿಜ್ಞಾನಿ ಡಾ.ಸಿ.ಎನ್.ಆರ್. ರಾವ್, ವಿಜ್ಞಾನವು ಪ್ರತಿದಿನವೂ ಬದಲಾವಣೆಗೊಂಡು ಹೊಸ ರೂಪ ತಾಳುತ್ತಿದೆ. ವಿಜ್ಞಾನ ಬಳಕೆಯ ಒಂದೆ ಧ್ಯೇಯವೆಂದರೆ ಅದು ಶಾಂತಿ ಹಾಗೂ ಸೌಹಾರ್ದಕ್ಕೆ ಪೂರಕವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಮಾತನಾಡಿ, ವಿಜ್ಞಾನವನ್ನು ಮನುಕುಲದ ಬಳಕೆಗಾಗಿ ಉಪಯೋಗಿಸಬೇಕು. ಈಗ ತಂತ್ರಜ್ಞಾನ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ನಾವು ವಿಜ್ಞಾನದ ಹೊಸ ಸಂಶೋಧನೆಗಳತ್ತ ಗಮನಹರಿಸಿ ಭಾರತವನ್ನು ಮುನ್ನಡೆಸಬೇಕೆಂದರು. ಸಮಾರಂಭದಲ್ಲಿ ರಾಜ್ಯಪಾಲ ವಾಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಮನ್‌ವೆಲ್ತ್‌ನ ಕಾರ್ಯದರ್ಶಿ ಕಮಲೇಶ್ ಶರ್ಮ, ರಾಯಲ್ ಸೊಸೈಟಿ ಉಪಾಧ್ಯಕ್ಷ ಪ್ರೊ.ಆಂಟನಿಚೇತಮ್, ಡ್ಯೂಕ್ ಆಫ್ ಆರ್ಕ್ ಭಾಗವಹಿಸಿದ್ದರು.

http://vbnewsonline.com/

Write A Comment