ಕರ್ನಾಟಕ

ಧಾರವಾಡದಲ್ಲಿ ಉಗ್ರಗಾಮಿಗಳ ಬೆಂಬಲಿಗರ ನೆಲೆ

Pinterest LinkedIn Tumblr

pvec23dwd3ep

ಧಾರವಾಡ: ಚೆನ್ನೈ ರೈಲ್ವೆ ನಿಲ್ದಾಣ­ದಲ್ಲಿ ಮೇ 1ರಂದು ಸಂಭವಿಸಿದ ಬಾಂಬ್‌ ಸ್ಫೋಟ ಕೃತ್ಯಕ್ಕೆ ನೆರವು ನೀಡಿದ್ದ ಉತ್ತರ ಪ್ರದೇಶ ಮೂಲದ ಮೂವರು ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಆರೋಗ್ಯ ನಗರದಲ್ಲಿ ತಂಗಿದ್ದರು ಎಂಬ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಕರಣದ ತನಿಖೆಗಾಗಿ ಕೇಂದ್ರ ಗುಪ್ತದಳ, ಚೆನ್ನೈ ಪೊಲೀಸ್‌, ಹೈದರಾಬಾದ್‌ ಪೊಲೀಸರು ನಗರಕ್ಕೆ ಭೇಟಿ ನೀಡಿ, ಆರೋಪಿಗಳು ತಂಗಿದ್ದ ಮನೆಯ ಮಾಲೀಕ ಹಾಗೂ ಆಸುಪಾಸಿನ ಕೆಲ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿದರು ಎಂದು ತಿಳಿದುಬಂದಿದೆ.
ಚೆನ್ನೈ ಸ್ಫೋಟಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ ಪೊಲೀಸರು ಈ ಮೂವರನ್ನು ಬಂಧಿಸಿದ್ದರು.

ಇವ­ರನ್ನು ತೀವ್ರ ವಿಚಾರಣೆಗೆ ಒಳಪಡಿ­ಸಿದಾಗ ಧಾರವಾಡದಲ್ಲಿ ತಂಗಿದ್ದ ಮಾಹಿತಿ ಲಭ್ಯವಾಗಿದೆ. ಆರೋಪಿ­ಗಳಲ್ಲಿ ಒಬ್ಬನ ಹೆಸರು ಆಸೀಫ್‌ ಎಂದು ತಿಳಿದು ಬಂದಿದ್ದು ಉಳಿದವರ ಹೆಸರುಗಳನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಇದೇ ವರ್ಷ ಜನವರಿಯಲ್ಲಿ ನಗರಕ್ಕೆ ಬಟ್ಟೆ ವ್ಯಾಪಾರಿಗಳ ಸೋಗಿ­ನಲ್ಲಿ ಬಂದಿದ್ದ ಮೂವರು ತಮ್ಮನ್ನು ಅರವಿಂದ, ಕಿಶನ್‌, ಆನಂದರಾಮ್‌ ಎಂದು ಹೇಳಿಕೊಂಡು ಶಿವಾಜಿ ಕುಲಕರ್ಣಿ ಎಂಬುವವರ ಮನೆಯ ಒಂದು ಭಾಗವನ್ನು ಬಾಡಿಗೆಗೆ ಪಡೆ­ದಿದ್ದರು.

ಬಂಧಿತರು ಭಯೋತ್ಪಾದಕರಿಗೆ ಅಗತ್ಯ ನೆರವು ಒದಗಿಸುವ ಸ್ಲೀಪರ್‌ ಸೆಲ್‌ ಸದಸ್ಯರು ಎಂದು ಶಂಕಿಸಲಾಗಿದೆ. ‘ನಾವು ಅ. 15ರಂದು ಈ ಮನೆಗೆ ಬಂದಿದ್ದೇವೆ. ಪ್ರಕರಣದ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ. ಆದರೆ ಇಂದು ಬೆಳಿಗ್ಗೆ ಬಂದ ಅಧಿಕಾರಿಗಳು ನಮ್ಮಿಂದ ಮಾಹಿತಿ ಪಡೆದರು. ನಮ್ಮ ಗುರುತಿನ ಚೀಟಿಯ ಫೋಟೊಪ್ರತಿ ಪಡೆದರು. ನಂತರ ನಮ್ಮೊಂದಿಗೆ ಚಹಾ ಸೇವಿಸಿ ಹೊರಟರು’ ಎಂದು ಮನೋಜ್‌ ಕುಮಾರ್‌ ತಿವಾರಿ ಎಂಬ ವಿದ್ಯಾರ್ಥಿ ಹೇಳಿದರು.

ನಂಬಲು ಸಾಧ್ಯವಾಗುತ್ತಿಲ್ಲ
‘ಈ ಮನೆಯಲ್ಲಿ ಜನವರಿಯಿಂದ ಜೂನ್‌ 6ರವರೆಗೆ ವಾಸವಿದ್ದ ಮೂವರು, ಹೊರಡುವ ಮುನ್ನ ಜೂನ್‌ 9ರ ಒಳಗೆ ಬರದಿದ್ದರೆ ಬೇರೆಯವರಿಗೆ ಬಾಡಿಗೆಗೆ ಮನೆ ನೀಡಿ ಎಂದು ಹೇಳಿ ಹೋಗಿದ್ದರು’ ಎಂದು ಮಾಲೀಕ ಶಿವಾಜಿ ಕುಲಕರ್ಣಿ ಹೇಳಿದರು. ‘ಮುಂದೆ ಬಾಡಿಗೆಗೆ ಬರುವವರಾದರೇ ಇಂಥವರೇ ಬರಲಿ ಎಂದುಕೊಂಡಿದ್ದೆ. ಅಷ್ಟು ವಿಧೇಯ ಹುಡುಗರು ನಮ್ಮ ಮನೆಯನ್ನು ಬಾಡಿಗೆಗೆ ಪಡೆದಿದ್ದು ಅದೃಷ್ಟ ಎಂದೆನಿಸಿತ್ತು. ಆದರೆ ಅವರು ಹೋದ ನಂತರ ಬೇರೆ ಬೇರೆ ರಾಜ್ಯಗಳ ಪೊಲೀಸರು ಬಂದಾಗಲೇ ಇವರ ಅಸಲಿಯತ್ತು ಗೊತ್ತಾದುದು. ಘಟನೆಯ ನಂತರ ಯಾರನ್ನು ನಂಬಬೇಕು ಎಂಬುದೇ ತಿಳಿಯುತ್ತಿಲ್ಲ’ ಎಂದರು.

ಒಂದು ಸಿಮ್‌ ಕಾರ್ಡ್‌ ಕಥೆ
ಬಂಧಿತರು ಧಾರವಾಡದ ಮನೆಯಲ್ಲಿದ್ದ ಸಂದರ್ಭದಲ್ಲಿ ಶಿವಾಜಿ ಕುಲಕರ್ಣಿ ಅವರ ಮತದಾರರ ಗುರುತಿನ ಚೀಟಿ ಪಡೆದು ಸಿಮ್‌ ಕಾರ್ಡ್‌ ಖರೀದಿಸಿದ್ದಾರೆ. ಇವರ ಸಿಮ್‌ ಕಾರ್ಡ್‌ ಮಾಹಿತಿ ಪಡೆದ ತನಿಖಾಧಿಕಾರಿಗಳು ನೇರವಾಗಿ ಬಂದುದು ಈ ಮನೆಗೆ. ಈ ಸಂಬಂಧ ಮನೆಯ ಮಾಲೀಕರನ್ನು ವಿಚಾರಿಸಿದಾಗ, ‘ನನ್ನ ಹೆಸರು ಶಿವಾಜಿ ಕುಲಕರ್ಣಿ. ಆದರೆ ಗುರುತಿನ ಚೀಟಿಯಲ್ಲಿ ಶಿವರಾಜ ಕುಲಕರ್ಣಿ ಎಂದು ತಪ್ಪಾಗಿ ಮುದ್ರಿತವಾಗಿದೆ. ನಾನು ಒಬ್ಬನೇ ಇದ್ದು, ಇದೇ ಮನೆಯ ಕೋಣೆಯಲ್ಲಿ ವಾಸಿಸುತ್ತಿದ್ದೆ. ಅದರ ಜೆರಾಕ್ಸ್ ಪ್ರತಿ ಪಡೆದುಕೊಂ ಡಿರುವುದು ನನಗೆ ತಿಳಿದಿರಲಿಲ್ಲ’ ಎಂದು ಹೇಳಿದರು.

ಉಗ್ರರು ನೆಲಸಿದ್ದು ವದಂತಿ– ಜಾರ್ಜ್‌
ಬೆಳಗಾವಿ: ‘ಧಾರವಾಡದಲ್ಲಿ ಉಗ್ರರು ನೆಲೆಸಿದ್ದರು ಎಂಬುದು ಕೇವಲ ವದಂತಿ. ಯಾವೊಬ್ಬ ಉಗ್ರರು ಇಲ್ಲಿ ನೆಲೆಸಿಲ್ಲ, ಇದರಲ್ಲಿ ಸತ್ಯಾಂಶವಿಲ್ಲ’ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ಶನಿವಾರ ಇಲ್ಲಿ ಹೇಳಿಕೊಂಡರು.

Write A Comment