ಕರ್ನಾಟಕ

ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ನಾಟಕೀಯ ಬೆಳವಣಿಗೆ: ಪೀಠ ತ್ಯಾಗ ಮಾಡಿದ ಸ್ವಾಮೀಜಿ

Pinterest LinkedIn Tumblr

pvec233hub78

ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿವಾದದಿಂದಾಗಿ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಇಲ್ಲಿನ ಮೂರು­ಸಾವಿರ ಮಠದಲ್ಲಿ ಶನಿವಾರ ಸಂಜೆ ನಡೆದ ನಾಟಕೀಯ ಬೆಳವಣಿಗೆ ಹಾಲಿ ಪೀಠಾಧಿಪತಿ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಅವರ ಪೀಠ ತ್ಯಾಗಕ್ಕೆ ಸಾಕ್ಷಿಯಾಯಿತು.

ತರಾತುರಿಯಲ್ಲಿ ಮಾಧ್ಯಮಗಳ ಎದುರು ಪೀಠ ತ್ಯಾಗದ ನಿರ್ಧಾರ ಪ್ರಕಟಿಸಿದ ಸ್ವಾಮೀಜಿ, ‘ಉತ್ತರಾಧಿ­ಕಾರಿ ನೇಮಕಕ್ಕೆ ಭಕ್ತರ ಸಭೆ ನಡೆಸಲು ಕೆಲವರು ಬಿಡುತ್ತಿಲ್ಲ. ಪೊಲೀಸರು ಸಹ­ಕರಿಸುತ್ತಿಲ್ಲ. ಆದ್ದರಿಂದ ಆ ಜವಾ­ಬ್ದಾರಿಯನ್ನು ಭಕ್ತರಿಗೆ ಬಿಡುತ್ತೇನೆ’ ಎಂದರು.
ಆರೋಪ–ಪ್ರತ್ಯಾರೋಪಗಳಿಂದ ಜರ್ಝರಿತರಾದಂತೆ ಕಂಡುಬಂದ ಅವರು, ‘ನಾನು ಒತ್ತಡದಲ್ಲಿರುವೆ. ಹುಬ್ಬಳ್ಳಿಯ ಸಹವಾಸವೇ ಬೇಡ’ ಎಂದು ಬೇಸರ ವ್ಯಕ್ತಪಡಿಸಿದರು.

ಪೀಠ ತ್ಯಾಗದ ನಿರ್ಧಾರ ಪ್ರಕಟಿಸಿದ ನಂತರ ಗದ್ದುಗೆಗೆ ನಮಸ್ಕರಿಸಿ ತಮ್ಮ ಮೂಲಸ್ಥಾನವಾದ ಹಾನಗಲ್‌ನ ಕುಮಾರೇಶ್ವರ ಮಠಕ್ಕೆ ಹೊರಡಲು ಅನುವಾಗುತ್ತಿದ್ದಂತೆಯೇ  ಭಕ್ತ ಸಮೂಹ ಕಾರಿಗೆ ಅಡ್ಡಲಾಗಿ ನಿಂತು ಮಠ ಬಿಟ್ಟು ಹೋಗದಂತೆ ಮನವಿ ಮಾಡಿತು. ‘ಗುರುಗಳೇ ಅಮಾವಾಸ್ಯೆ ದಿನ ಮಠ ತೊರೆದು ಹೋಗಬೇಡಿ. ನೀವು ಹೋದರೆ ನಮಗೆ ಯಾರು ದಿಕ’ ಎಂದು ಕೆಲ ಭಕ್ತರು ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟರು. ‘ನಮಗೆ ನೀವು ಬೇಕು.

ಪೀಠಾಧಿಪತಿಯಾಗಿ ನೀವೇ ಮುಂದುವರಿಯಿರಿ’ ಎಂದು ಮನವಿ ಮಾಡಿದರು. ಆದರೆ ಅದಕ್ಕೆ ಸ್ವಾಮೀಜಿ ಸುತಾರಾಂ ಒಪ್ಪಲಿಲ್ಲ. ಸ್ಥಳಕ್ಕೆ ಬಂದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವಕಾರ ಹಾಗೂ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಕಾರಿನಲ್ಲಿ ಕುಳಿತಿದ್ದ ಸ್ವಾಮೀಜಿ ಅವರೊಂದಿಗೆ ಮಾತನಾಡಿ ಮಠದೊಳಗೆ ಬರುವಂತೆ ಮನವೊಲಿಸಿ ಕರೆದೊಯ್ದರು.

ಈ ಮೊದಲು ನಿಗದಿ ಮಾಡಿದಂತೆ ಭಕ್ತರ ಸಭೆ ನಡೆಸಲು ಒತ್ತಾಯಿಸಿದ ಕೆಲ ಮುಖಂಡರು ಅದಕ್ಕೆ ಬೆಂಬಲ ನೀಡುವುದಾಗಿ ಹೇಳಿದರು. ಆದರೆ ಮತ್ತೆ ಕೆಲವರು  ಗುಪ್ತಸಭೆಗೆ ವಿರೋಧ ವ್ಯಕ್ತಪಡಿಸಿ ಸ್ವಾಮೀಜಿ ಅವರೊಂದಿಗೆ ಮಾತನಾಡಲು ಮುಂದಾದರು.  ಈ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯೆ ಪ್ರವೇಶಿಸಿದ ಪೊಲೀಸರು, ಸ್ವಾಮೀಜಿ ಅವರ ಮೇಲೆ ಒತ್ತಡ ಹಾಕದಂತೆ ಎರಡೂ ಕಡೆಯವರಿಗೆ ತಾಕೀತು ಮಾಡಿದರು.

ಸ್ಪಷ್ಟ ನಿಲುವು:  ‘ನಾನು ಪೀಠ ತ್ಯಾಗ ಮಾಡಿ ಈಗಾಗಲೇ 40 ನಿಮಿಷ ಕಳೆದಿದೆ. ನಾನು ಇಲ್ಲಿಯೇ ಇದ್ದರೂ ನಾಳೆಯ ಸಭೆಗೆ ಹಾಜರಾಗುವುದಿಲ್ಲ. ನಾನು ಯಾವುದೇ ಸಭೆಯನ್ನೂ ಮಾಡುವುದಿಲ್ಲ. ಉತ್ತರಾಧಿಕಾರಿಯನ್ನೂ ನೇಮಿಸು ವುದಿಲ್ಲ. ಆ ಅಧಿಕಾರವೂ ನನಗಿಲ್ಲ. ಇಲ್ಲಿಂದ ತೆರಳಲು ಬಿಡಿ’ ಎಂದು ಹೇಳಿದ ಸ್ವಾಮೀಜಿ ಮಠದಿಂದ ಹೊರಡಲು ಕಾರು ಏರಿದರು. ಆಗ ಮತ್ತೆ ಎರಡೂ ಗುಂಪಿನವರೂ ಕಾರಿಗೆ ಅಡ್ಡ ಹಾಕಿದರು. ನಂತರ ಸ್ವಾಮೀಜಿ ಮನವಿಗೆ ಸ್ಪಂದಿಸಿದ ಪೊಲೀಸರು ಮಧ್ಯೆಪ್ರವೇಶಿಸಿ ಕಾರು ಹೋಗಲು ಅವಕಾಶ ಮಾಡಿಕೊಟ್ಟರು.

ಭಕ್ತರ ಸಭೆಗೆ ವಿರೋಧ: ಮಠದ ಉತ್ತರಾಧಿಕಾರಿ ನೇಮಕಕ್ಕೆ ಸ್ವಾಮೀಜಿ ಭಾನುವಾರ ಬೆಳಿಗ್ಗೆ ಭಕ್ತರ ಸಭೆ ಕರೆದಿದ್ದರು. ಇದಕ್ಕೆ ಹುಬ್ಬಳ್ಳಿ–ಧಾರವಾಡದ ಭಕ್ತರ ಒಂದು ಬಣ ಬೆಂಬಲ ನೀಡಿದ್ದರೆ, ಮತ್ತೊಂದು ಬಣ ವಿರೋಧ ವ್ಯಕ್ತಪ ಡಿಸಿತ್ತು. ಉತ್ತರಾಧಿಕಾರಿ ನೇಮಕ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಸಭೆಯ ಅಗತ್ಯವಿಲ್ಲ ಎಂದು ವಿರೋಧಿ ಬಣ ಪ್ರತಿಪಾದಿಸಿತ್ತು. ಇದರಿಂದ ಮಠದ ಆವರಣದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಲು ನಿರ್ಧರಿಸಿದ್ದರು. ಸಭೆ ರದ್ದು ಮಾಡುವಂತೆ ಮನವಿ ಮಾಡಿದ್ದರು.

ಇಂದಿನ ಸಭೆ ಅನಿಶ್ಚಿತ
ಸ್ವಾಮೀಜಿ ಅವರ ಪೀಠತ್ಯಾಗ­ದಿಂದಾಗಿ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕಕ್ಕೆ ಭಾನು­ವಾರ ಕರೆದಿದ್ದ ಭಕ್ತರ ಸಭೆ ನಡೆಯುವ ಬಗ್ಗೆ ಅನಿಶ್ಚಿತತೆ ತಲೆದೋರಿದೆ.

Write A Comment