ಕರ್ನಾಟಕ

ಬರ ಗ್ರಾಮಗಳಿಗೆ ಕುಡಿಯುವ ನೀರು: ಕೃಷ್ಣ ಬೈರೇಗೌಡ

Pinterest LinkedIn Tumblr

 

 

pvec23-Bara-01

ರಾಜ್ಯದ 34 ತಾಲ್ಲೂಕುಗಳಲ್ಲಿ ಬರದಿಂದಾಗಿ ಸಂಭವಿಸಿರುವ ಹಾನಿಗೆ ಸಂಬಂಧಿಸಿದ ವಸ್ತು ಸ್ಥಿತಿ ವರದಿಯನ್ನು ಕಂದಾಯ ಸಚಿವ ವಿ. ಶ್ರೀನಿವಾಸ್‌ ಪ್ರಸಾದ್‌ ಅವರು ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡದ ಮುಖ್ಯಸ್ಥ ಆರ್‌.ಬಿ ಸಿನ್ಹಾ ಅವರಿಗೆ ಸಲ್ಲಿಸಿದರು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು, ಕೃಷಿ ಸಚಿವ ಕೃಷ್ಣ ಬೈರೇಗೌಡ ಇದ್ದರು

ಬೆಂಗಳೂರು: ರಾಜ್ಯದ ಬರಪೀಡಿತ 34 ತಾಲ್ಲೂಕುಗಳ 1,173 ಗ್ರಾಮಗಳಿಗೆ (ನಗರ ಪ್ರದೇಶಗಳ ವಾರ್ಡ್‌ಗಳೂ ಸೇರಿವೆ) ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ಇದುವರೆಗೆ ₨19.9 ಕೋಟಿ ವೆಚ್ಚಮಾಡ­ಲಾಗಿದೆ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಹೇಳಿದರು.

ಬರದಿಂದಾಗಿ ರಾಜ್ಯದಲ್ಲಿ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಕೋರಿ ಕೇಂದ್ರದ ತಂಡಕ್ಕೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು, ಪ್ರತಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ತಲಾ ₨ 2 ಕೋಟಿ ನೀಡಲಾಗಿದೆ’ ಎಂದರು.

ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಈ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಮುಖ್ಯಮಂತ್ರಿ ಅವರು ಗ್ರಾಮೀಣಾ­ಭಿವೃದ್ಧಿ ಇಲಾಖೆಗೆ ಹೆಚ್ಚುವರಿಯಾಗಿ ₨100 ಕೋಟಿ ನೀಡಿದ್ದಾರೆ’ ಎಂದು ಹೇಳಿದರು. ‘ಈ ಪ್ರದೇಶಗಳಿಗೆ ಮೂರು ತಿಂಗಳ ಕಾಲ ಮಾತ್ರ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಷರತ್ತು ಹಾಕಲಾ ಗಿತ್ತು. ಆದರೆ, ಈ ವಿಷಯವನ್ನು ಸಚಿವ ಸಂಪುಟದ ಮುಂದೆ ಇಟ್ಟು ಷರತ್ತನ್ನು ಸಡಿಲಿಸಲಾಗಿದೆ. ಇದಕ್ಕೆ ಸಂಬಂಧಿಸಿ ದಂತೆ ನಿರ್ಧಾರ ಕೈಗೊಳ್ಳುವ    ಸ್ವಾತಂತ್ರ್ಯ ವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ’ ಎಂದು ಅವರು ಹೇಳಿದರು.

ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಮಾತನಾಡಿ, ‘ಇದುವರೆಗೆ ಬರ ಪರಿಹಾರಕ್ಕಾಗಿ ₨ 42 ಕೋಟಿ ಖರ್ಚು ಮಾಡಲಾಗಿದೆ. ಬರದಿಂದಾಗಿ ₨2,589.07 ಕೋಟಿ ನಷ್ಟವಾಗಿದ್ದು, ಕೇಂದ್ರದಿಂದ ₨779 ಕೋಟಿ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಕೇಂದ್ರ ತಂಡ ಸಕಾರಾತ್ಮಕವಾಗಿ ಸ್ಪಂದಿಸಿದೆ’ ಎಂದರು.

‘ಒಂದೂವರೆ ವರ್ಷದಲ್ಲಿ ಪ್ರಕೃತಿ ವಿಕೋಪಗಳಿಂದಾಗಿ ರಾಜ್ಯದಲ್ಲಿ ₨9,828 ಕೋಟಿ ನಷ್ಟ ಉಂಟಾಗಿದೆ. ಇದುವರೆಗೆ ನಾವು ಕೇಂದ್ರ ಸರ್ಕಾರಕ್ಕೆ ಐದು ಬಾರಿ ಮನವಿ ಮಾಡಿದ್ದೇವೆ. ಆದರೆ, ಕೇಂದ್ರ ₨542 ಕೋಟಿ     ಮಾತ್ರ ನೆರವು ನೀಡಿದೆ. ನಾವು ₨972 ಕೋಟಿ ವೆಚ್ಚಮಾಡಿದ್ದೇವೆ’ ಎಂದು ಹೇಳಿದರು.

ಹೆಚ್ಚು ಪರಿಣಾಮ ಇಲ್ಲ: ಬರ ಹಾಗೂ ಅತಿ ವೃಷ್ಟಿಯಿಂದಾಗಿ ರಾಜ್ಯದ ಕೃಷಿ ಉತ್ಪಾದನೆ ಮೇಲೆ ಹೆಚ್ಚಿನ ಪರಿಣಾಮ ಆಗದು. ನಮ್ಮ ಬಳಿ ಸಾಕಷ್ಟು ಧಾನ್ಯಗಳ ಸಂಗ್ರಹ ಇದೆ. ಹಾಗಾಗಿ, ಆಹಾರ ಭದ್ರತೆಗೆ ಧಕ್ಕೆ ಆಗಲಾರದು ಎಂದು ಸಚಿವರು ಹೇಳಿದರು.

Write A Comment