ಪ್ರಮುಖ ವರದಿಗಳು

ಚೀನಾ ಓಪನ್ ಸೂಪರ್ ಸರಣಿ: ಸೈನಾ, ಶ್ರೀಕಾಂತ್ ಫೈನಲ್‌ಗೆ ಲಗ್ಗೆ

Pinterest LinkedIn Tumblr

saina-nehwal

ಬೀಜಿಂಗ್, ನ.15: ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಹಾಗೂ ಯುವ ಶಟ್ಲರ್ ಕೆ.ಶ್ರೀಕಾಂತ್ ಚೀನಾ ಓಪನ್ ಸೂಪರ್ ಸರಣಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ಇವೆಂಟ್‌ನಲ್ಲಿ ಫೈನಲ್‌ಗೆ ತಲುಪಿದ್ದಾರೆ. ಆರನೆ ಬಾರಿ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುತ್ತಿರುವ ಸೈನಾ ಶನಿವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂ.17ನೆ ಆಟಗಾರ್ತಿ, ಚೀನಾದ ಲೂ ಕ್ಸಿನ್ ಅವರನ್ನು 47 ನಿಮಿಷಗಳ ಹೋರಾಟದಲ್ಲಿ 21-17, 21-17 ಸೆಟ್‌ಗಳಿಂದ ಮಣಿಸಿದರು.
ರವಿವಾರ ನಡೆಯಲಿರುವ ಫೈನಲ್‌ನಲ್ಲಿ ವಿಶ್ವದ ನಂ.5ನೆ ಆಟಗಾರ್ತಿ ಸೈನಾ ಅವರು ಐದನೆ ಶ್ರೇಯಾಂಕಿತೆ ಕೊರಿಯಾದ ಬೇ ಯಿಯೊನ್ ಜು ಅಥವಾ ಜಪಾನ್‌ನ ಅಕಾನೆ ಯಾಮಾಗುಚಿ ಅವರನ್ನು ಎದುರಿಸಲಿದ್ದಾರೆ. ಸೈನಾ ಈ ಹಿಂದೆ ಆಸ್ಟ್ರೇಲಿಯನ್ ಸೂಪರ್ ಸರಣಿಯಲ್ಲಿ ಸ್ಪೇನ್‌ನ ಕಾರೊಲಿನಾ ಮರಿನ್‌ರನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಆ ನಂತರ ಯಾವುದೇ ಟೂರ್ನಿಯಲ್ಲಿ ಫೈನಲ್ ತಲುಪಿಲ್ಲ. ಇಂದು ನಡೆದ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಸ್ಕೋರ್ 21-11, 13-7 ಆಗಿದ್ದಾಗ ಜರ್ಮನಿಯ ಮಾರ್ಕ್ ವೆಬ್ಲೆರ್ ಗಾಯಾಳು ನಿವೃತ್ತಿಯಾದರು. ವೆಬ್ಲೆರ್ ಪಂದ್ಯದಿಂದ ಹೊರ ನಡೆದ ಕಾರಣ ಶ್ರೀಕಾಂತ್ ಫೈನಲ್‌ಗೆ ತೇರ್ಗಡೆಯಾದರು. ವಿಶ್ವದ ನಂ.16ನೆ ಆಟಗಾರ ಶ್ರೀಕಾಂತ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಹಾಗೂ ಐದು ಬಾರಿಯ ವಿಶ್ವ ಚಾಂಪಿಯನ್ ಲಿನ್ ಡಾನ್‌ರನ್ನು ಎದುರಿಸಲಿದ್ದಾರೆ. ಈ ವರ್ಷಾರಂಭದಲ್ಲಿ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಗ್ರಾನ್‌ಪ್ರಿ ಗೋಲ್ಡ್ ಟೂರ್ನಿಯನ್ನು ಜಯಿಸಿದ್ದ ಶ್ರೀಕಾಂತ್, ಜರ್ಮನಿಯ ಮಾರ್ಕ್ ವಿರುದ್ಧ 1-1 ದಾಖಲೆಯನ್ನು ಹೊಂದಿದ್ದಾರೆ. ಇಂದು ಆರಂಭದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಶ್ರೀಕಾಂತ್ ಜರ್ಮನಿ ಆಟಗಾರ ಯಾವ ಹಂತದಲ್ಲೂ ತಿರುಗೇಟು ನೀಡದಂತೆ ನೋಡಿಕೊಂಡರು. 21ರ ಹರೆಯದ ಶ್ರೀಕಾಂತ್ 2013ರಲ್ಲಿ ಥಾಯ್ಲೆಂಡ್ ಗ್ರಾನ್ ಪ್ರಿ ಗೋಲ್ಡ್ ಪ್ರಶಸ್ತಿಯನ್ನು ಜಯಿಸಿದ್ದರು. 2014ರಲ್ಲಿ ಲಕ್ನೋದಲ್ಲಿ ಇಂಡಿಯಾ ಓಪನ್ ಗ್ರಾಂಡ್ ಪ್ರಿ ಗೋಲ್ಡ್ ಟೂರ್ನಿಯನ್ನು ಗೆದ್ದುಕೊಂಡಿದ್ದರು. ಈ ವರ್ಷ ನಡೆದ ಮಲೇಷ್ಯಾ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಬ್ಯಾಡ್ಮಿಂಟನ್ ತಂಡ ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್ ತಲುಪಲು ಶ್ರೀಕಾಂತ್ ನೆರವಾಗಿದ್ದರು.

http://vbnewsonline.com

Write A Comment