ಕುಂದಾಪುರ: ತಾಲೂಕಿನ ಕಂಡ್ಲೂರು ಶ್ರೀ ಕನ್ನಿಕಾಪರಮೇಶ್ವರೀ ಮಾರಿ ಜಾತ್ರೆಯು ಆ. 14 ರಂದು ನಡೆಯಿತು. ಹಿಂದೂ, ಮುಸ್ಲಿಂ ಭಾವೈಕ್ಯತೆಯಿಂದ ನಡೆಯುವ ಈ ಮಾರಿಹಬ್ಬವು ಪ್ರತಿ ಆಷಾಡ ಮಾಸದ ಕೊನೆಯ ಮಂಗಳವಾರ ಸಂಜೆಯಿಂದ ಆರಂಭಗೊಂಡು ಬುಧವಾರ ಸಂಪನ್ನಗೊಂಡಿತು.
ಮಾರಿ ಹಬ್ಬದ ವಿಶೇಷತೆ: ಮಂಗಳವಾರ ರಾತ್ರಿ ದೇವಸ್ಥಾನದಲ್ಲಿ ವಿಜೃಂಭಣೆಯ ಪೂಜೆ ನಡೆಯುತ್ತದೆ. ನಂತರ ಶ್ರೀ ಮಾರಿ ಅಮ್ಮನ ಪೂಜೆ ಮಾಡಿ ಬೆಳಗ್ಗಿನ ಜಾವ ಐದು ಗಂಟೆಗೆ ಕನ್ನಿಕಾಪರಮೇಶ್ವರೀ ದೇವಸ್ಥಾನದಿಂದ ಮಾರಿ ಗದ್ದುಗೆ, ಅಂದರೆ ಕಂಡ್ಲೂರಿನ ಮಸೀದಿಯ ಮುಂಭಾಗದಲ್ಲಿ ಕೆಲವೇ ಮೀಟರ್ ಅಂತರದಲ್ಲಿರುವ ಗದ್ದುಗೆಗೆ ತಂದು ಪ್ರತಿಷ್ಠಾಪಿಸುವುದು ಬಹಳ ವಿಶೇಷವಾಗಿದ್ದು ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಈ ಹಬ್ಬಕ್ಕೆ ಸಮಾಜದ ಎಲ್ಲಾ ವರ್ಗದ ಜನರು ಒಗ್ಗೂಡುತ್ತಾರೆ. ನಾಥಪಂಥದ ಜೋಗಿಸಮುದಾಯದದವರು ಅರ್ಚಕರಾಗಿರುತ್ತಾರೆ. ಉಳಿದಂತೆ ಎಲ್ಲಾ ಹಿಂದೂ ಸಮುದಾಯದವರು ಭಕ್ತಿಯಿಂದ ಈ ಮಾರಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಹಲವು ಸಮಾಜದವರ ಸೇರುವಿಕೆಯಿಂದ ಬಹಳ ವಿಜೃಂಭಣೆಯಿಂದ ಮಾರಿಜಾತ್ರೆ ನಡೆಯುತ್ತದೆ ಎಂದು ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಧರ್ಮದರ್ಶಿ ಕೆ. ಎನ್. ಚಂದ್ರಶೇಖರ ಜೋಗಿ ತಿಳಿಸಿದ್ದಾರೆ.
ಉಡುಪಿ ಎಸ್ಪಿ ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ಜಯರಾಮ ಡಿ. ಗೌಡ ನೇತೃತ್ವದಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಭೀಮಾಶಂಕರ್, ನೂತನ್ ಗೌಡ ಹಾಗೂ ಸಿಬ್ಬಂದಿ ಸಹಿತ ವಿವಿಧ ಠಾಣೆ ಪೊಲೀಸರು ಬಂದೋಬಸ್ತ್ ನೆರವೇರಿಸಿದರು.
ಮುಸ್ಲೀಂ ಕೇರಿಯಲ್ಲಿ ಹಬ್ಬದ ರಂಗು: ಆದಿ ಕಾಲದಿಂದಲೂ ಪ್ರಸಿದ್ಧವಾದ ಮಾರಿ ಜಾತ್ರೆ ಹಿಂದೂ-ಮುಸ್ಲೀಂ ಭಾವೈಕ್ಯದ ಸಂಕೇತವಾಗಿದೆ. ಜಾತ್ರೆಯ ವೇಳೆ ಸಂಪೂರ್ಣ ಕಂಡ್ಲೂರು ಜಾಮೀಯಾ ಮಸೀದಿ ರಸ್ತೆಯ ಮುಸ್ಲೀಂ ಕೇರಿ ಹಬ್ಬದ ರಂಗು ಪಡೆಯುತ್ತದೆ. ದೂರದೂರುಗಳು, ಹೊರದೇಶದಲ್ಲಿರುವ ಸಮುದಾಯದ ಮಂದಿ ಅನುಕೂಲವಾದರೆ ಜಾತ್ರೆ ದಿನಕ್ಕೆ ಬಿಡುವು ಮಾಡಿಕೊಂಡು ಆಗಮಿಸುತ್ತಾರೆ. ಊರಿನ ಮುಸ್ಲೀಂ ಬಾಂಧವರೂ ಕೂಡ ತಮ್ಮದೇ ಹಬ್ಬವೆಂಬಂತೆ ಸಂಭ್ರಮಿಸುತ್ತಾರೆ. ಜಾತ್ರೆಯ ವ್ಯಾಪಾರ-ವಹಿವಾಟುಗಳಿಗೂ ಜೊತೆಯಾಗುತ್ತಾರೆ. ಪರಸ್ಪರ ಸಮನ್ವಯತೆ ಸಾಧಿಸಲು ಸಭೆ ಕರೆಯಲಾಗುತ್ತದೆ. ಹಬ್ಬಗಳ ನೈಜ್ಯ ಪರಿಕಲ್ಪನೆಯ ಸಮಾಜಕ್ಕೊಂದು ಉತ್ತಮ ಸಂದೇಶ ನೀಡಲು ಇದು ಸಹಕಾರಿಯಾಗಿದೆ.
ಹಿಂದೂ,ಮುಸ್ಲೀಂ ಐಕ್ಯತೆ ಹಬ್ಬ- ಮುನೀರ್ ಅಹ್ಮದ್
ಇದು ಮಳೆಗಾಲದಲ್ಲಿ ನಡೆಯುವ ನಮ್ಮ ಊರಿನ ನಮ್ಮ ಕೇರಿಯ ಹಬ್ಬ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಹಬ್ಬ ಕಂಡ್ಲೂರಿನ ಮಾರಿ ಜಾತ್ರೆ. ಇದು ಹಿಂದೂ ಬಾಂಧವರ ಹಬ್ಬವಾದರೂ ಕೂಡ ಮುಸ್ಲೀಂ ವಠಾರದಲ್ಲಿ ನಡೆಯುವುದು ಮಾತ್ರವಲ್ಲದೇ ಮುಸ್ಲೀಮರು ಇದರಲ್ಲಿ ತಮ್ಮ ಹಬ್ಬವೆಂಬಂತೆ ನೆರವೇರಿಸುತ್ತಾರೆ. ಹಿಂದಿನಿಂದಲೂ ಈ ಹಬ್ಬವನ್ನು ಒಂದಾಗಿ ನಡೆಸುತ್ತೇವೆ. ಈ ಹಬ್ಬ ಹಿಂದೂ-ಮುಸ್ಲೀಂ ಐಕ್ಯತೆಗೆ ದಿಕ್ಸೂಚಿಯಾಗುತ್ತದೆ.
– ಎಸ್. ಮುನೀರ್ ಅಹಮ್ಮದ್ ಕಂಡ್ಲೂರು (ಸ್ಥಳೀಯರು)
Comments are closed.