Mumbai

39 ವರ್ಷ ಹಿಂದಿನ ಹಲ್ಲೆ ಕೇಸ್: ಹೆಸರು ಬದಲಿಸಿಕೊಂಡು ಮುಂಬೈನಲ್ಲಿದ್ದ ಆರೋಪಿಯನ್ನು ಬಂಧಿಸಿದ ಕುಂದಾಪುರ ಪೊಲೀಸರು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕಳೆದ 39 ವರ್ಷಗಳ ಹಿಂದೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಗುಜ್ಜಾಡಿ ಮೂಲದ ಪ್ರಕಾಶ್ (62) ಎನ್ನುವರನ್ನು 39 ವರ್ಷಗಳ ಬಳಿಕ ಮುಂಬೈನ ಅಂಧೇರಿ ಈಸ್ಟ್‌ ಪರಿಸರದ ಸಾಕಿನಾಕ ಎಂಬಲ್ಲಿ ಬಂಧಿಸಿದ ಕುಂದಾಪುರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನಾಲ್ಕು ದಿನ ನ್ಯಾಯಾಂಗ ಬಂಧನ ವಿಧಿಸಿದೆ.

ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ವಿಚಾರವಾಗಿ ಪ್ರಕಾಶ್ ಎನ್ನುವರ ಮೇಲೆ ಕುಂದಾಪುರ ಠಾಣೆಯಲ್ಲಿ 1984 ರಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಈವರೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಸುಮಾರು 39 ವರ್ಷಗಳ ಹಳೆಯ ಪ್ರಕರಣ ಪತ್ತೆ ಕಾರ್ಯಚರಣೆಯನ್ನು ಕುಂದಾಪುರ ಪೊಲೀಸ್ ಠಾಣೆ ನಿರೀಕ್ಷಕ ನಂದಕುಮಾರ್‌ ಯು.ಬಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಐ ವಿನಯ ಎಂ.ಕೊರ್ಲಹಳ್ಳಿ ನೇತೃತ್ವದಲ್ಲಿ ಠಾಣಾ ಕ್ರೈಂ ಸಿಬ್ಬಂದಿಗಳಾದ ಶ್ರೀಧರ್, ರಾಮ ಪೂಜಾರಿ ಮತ್ತು ಹೆಡ್ ಕಾನ್ಸ್‌ಟೇಬಲ್ ಸಂತೋಷ್, ಗಂಗೊಳ್ಳಿ ಠಾಣಾ ಕ್ರೈಂ ಸಿಬ್ಬಂದಿ ಹೆಡ್ ಕಾನ್ಸ್‌ಟೇಬಲ್ ಚಂದ್ರಶೇಖರ್ ನಡೆಸಿದ್ದರು.

ಹೆಸರು ಬದಲು: ಆರೋಪಿಯು ತನ್ನ ಮೂಲ ಹೆಸರಾದ ಪ್ರಕಾಶ ಎನ್ನುವುದನ್ನು ಮರೆಮಾಚಿ ಗಣೇಶ್‌ ಎಂದು ಬದಲಿಸಿಕೊಂಡಿದ್ದು, ಹಲವಾರು ವರ್ಷದಿಂದ ಊರಿಗೆ ಬಂದಿರಲಿಲ್ಲ. ಪೊಲೀಸರಿಗೆ ಈತನ‌ ಜಾಡು ಹಿಡಿಯುವುದು ತಲೆನೋವಾಗಿತ್ತು. ಇತ್ತೀಚೆಗೆ ಆತ ಕಾರ್ಯಕ್ರಮಕ್ಕೆ ಊರಿಗೆ ಬಂದಿದ್ದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಆರೋಪಿ ಪತ್ನಿ ಉಡುಪಿಯಲ್ಲಿ ನೆಲೆಸಿರುವುದು ಮತ್ತು ಈತನೊಂದಿಗೆ ಸಂಪರ್ಕದಲ್ಲಿರುವುದು ತಿಳಿದುಬಂದಿತ್ತು. ನ್ಯಾಯಾಲಯದಲ್ಲಿ ದೀರ್ಘಾವಧಿಯ ಪ್ರಕರಣವಾಗಿದ್ದ (ಎಲ್.ಪಿ.ಸಿ) 39 ವರ್ಷದ ಹಿಂದಿನ ಕೇಸನ್ನು ಬೆನ್ನತ್ತಿದ ಪೊಲೀಸರು‌ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿದ್ದಾರೆ.

Comments are closed.