Mumbai

ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

Pinterest LinkedIn Tumblr

ಮುಂಬಯಿ: ಯೋಗ ಋಷಿ ಮುನಿಗಳ ಕಾಲದಿಂದಲೇ ನಡೆದುಕೊಂಡು ಬಂದಿದೆ. ಅದೇಷ್ಟೋ ರೋಗಗಳ ನಿವಾರಣೆಗೆ ಯೋಗ ಪೂರಕವಾಗಿದೆ. ಇಂದಿನ ಜೀವನ ಶೈಲಿಯಲ್ಲಿ ಶಾರೀರಿಕವಾಗಿ ಉತ್ತಮ ಜೀವನವನ್ನು ಸಾಗಿಸಲು ಯೋಗ ಅತೀ ಅಗತ್ಯ ಎಂದು ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ ಮುಂಡಪ್ಪ ಪಯ್ಯಡೆಯವರು ನುಡಿದರು.

ಜೂ. 21ರಂದು ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಕಾಂದಿವಲಿ ಪಶ್ಚಿಮದ ಪವನ್ ಧಾಮ್ ಸಮೀಪದ ಮಹಿಳಾ ಆಧಾರ್ ಭವನದಲ್ಲಿ ನಡೆದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಂಡಪ್ಪ ಪಯ್ಯಡೆಯವರು, ಹಿಂದಿನ ಕಾಲದಲ್ಲಿ ಮಹಿಳೆಯರು ಮನೆಯ ಎಲ್ಲಾ ಕೆಲಸಗಳನ್ನು ಸ್ವತಃ ತಾವೇ ಮಾಡಿಕೊಂಡು ಬರುತ್ತಿದ್ದು ಅವರ ದೇಹಕ್ಕೆ ಹಾಗೂ ಮನಸ್ಸಿಗೆ ವ್ಯಾಯಾಮ ತಾನಾಗಿಯೇ ದೊರಕುತ್ತಿತ್ತು. ಆದರೆ ಈ ಆಧುನಿಕ ಯುಗದಲ್ಲಿ ಅದು ಇಲ್ಲದಾಗಿದೆ.ಆದುದರಿಂದ ಈಗಿನ ಕಾಲದಲ್ಲಿ ಮಹಿಳೆಯರಿಗೆ ಯೋಗ ಅತೀ ಅಗತ್ಯ. ಮನುಷ್ಯ ಗುಣ ಸಂಪಾದಿಸುವಾಗ ಹಣ ನಶಿಸಿ ಹೋದರೆ ಹಣ ಸಂಪಾದಿಸುವಾಗ ಗುಣ ನಶಿಸಿ ಹೋಗಲು ಸಾಧ್ಯ. ಆದರೆ ಯೋಗದಿಂದ ನಾವು ಶಾರೀರಿಕವಾಗಿ ಬಲಶಾಲಿಯಾದಲ್ಲಿ ಈ ಎರಡನ್ನೂ ಗಳಿಸಲು ಸಾಧ್ಯವಿದೆ. ಯೋಗದಿಂದ ನಮ್ಮ ಪ್ರತಿಯೊಂದು ಅಂಗಾಗಗಳಿಗೂ ಪ್ರಯೋಜನ ಸಿಗುತ್ತದೆ. ಯೋಗವನ್ನು ನಾವು ಜೀವನ ಪದ್ದತಿಯ ಒಂದು ಅಂಗವಾಗಿ ಸ್ವೀಕರಿಸೋಣ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ನಿಟ್ಟಿ ಎಂ. ಜಿ. ಶೆಟ್ಟಿಯವರು ಮಾತನಾಡಿ ಜೂನ್ 21 ನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು ಇಂದು 8ನೇ ವಾರ್ಷಿಕ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.  ಇದರಲ್ಲಿ ನಮ್ಮ ಸಮಾಜದ ಮಹಿಳೆಯರು ಬಹಳ ಆಶಕ್ತಿಯಿಂದ ಬಾಗವಹಿಸುತ್ತಿರುವುದು ಅಭಿಮಾನವಾಗುತ್ತಿದೆ ಎನ್ನುತ್ತಾ ಕಾರ್ಯಕ್ರಮಕ್ಕೆ ಆಗಮಿಸಿದ ಬಂಟರ ಸಂಘದ ಎಲ್ಲಾ ಗಣ್ಯರನ್ನು ಹಾಗೂ ತರಬೇತುದಾರರನ್ನು ಅಭಿನಂದಿಸಿದರು.

ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಶೈಲಜಾ ಅಮರ್ ನಾಥ್ ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸುತ್ತಾ ಮಹಿಳೆಯರು ಆರೋಗ್ಯವಂತರಾದರೆ ಇಡೀ ಪರಿವಾರದವರು ಆರೋಗ್ಯವಂತರಾಗುತ್ತಾರೆ. ನಮ್ಮ ಸಮಾಜದ ಯುವ ಜನಾಂಗಕ್ಕೆ ಅವಕಾಶ ನೀಡುದರೊಂದಿಗೆ ಅವರ ಪ್ರತಿಭೆಯನ್ನು ಸಮಾಜದಲ್ಲಿ ಗುರುತಿಸುವಂತಾಗಬೇಕು ಎಂಬ ಉದ್ದೇಶದಿಂದ ಇಂದು ನಮ್ಮ ಸಮಾಜದ್ದೇ ಇಬ್ಬರು ಯುವ ತರಬೇತುದಾರರನ್ನು ಆಮಂತ್ರಿಸಿದ್ದೇವೆ ಎನ್ನುತ್ತಾ ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಇಂದು ಈ ಶಿಭಿರಕ್ಕೆ ಬೆಳಿಗ್ಗಿನಿಂದಲೇ ಆಗಮಿಸಿದ ಎಲ್ಲರಿಗೂ ಹಾಗೂ ಮಹಿಳೆಯರಿಗೂ ಅಭಿನಂದನೆ ಸಲ್ಲಿಸಿದರು.

ಯೋಗ ತರಬೇತಿ ನಡೆಸಿಕೊಟ್ಟ ಚೈತ್ರ ಚಂದ್ರಶೇಖರ ಶೆಟ್ಟಿಯವರನ್ನು ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಸರಿತ ಮಹೇಶ್ ಶೆಟ್ಟಿಯವರು ಪರಿಚಯಿಸಿದರೆ ಜ಼ುಂಬಾ ತರಬೇತಿಯನ್ನು ನಡೆಸಿದ ಶುಭ ಆನಂದ ಶೆಟ್ಟಿಯವರನ್ನು ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ  ಸುನಿತಾ ಯನ್  ಹೆಗ್ಡೆಯವರು ಪರಿಚಯಿಸಿದರು.ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ ಯವರು ಪ್ರಾರಂಭದ ತನ್ನ ಪ್ರಾಸ್ತಾವಿಕ ನುಡಿಗಳಲ್ಲಿ, ಭಾರತದೇಶದಲ್ಲಿ ನಮ್ಮ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆಯೇ ಯೋಗದ ಬಗ್ಗೆ ತಿಳಿದುಕೊಂಡಿದ್ದು,ದೇಶವ್ಯಾಪಿ ಹಲವಾರು ಯೋಗಶಾಲೆಗಳಿಲ್ಲಿ ಯೋಗಶಿಕ್ಷಣ ದೊರಕುತ್ತಿತ್ತು.ಆದರೆ ಅದೆಲ್ಲವೂ ಬಹಳ ಕ್ಲಿಷ್ಟಕರವಾಗಿದ್ದು ಜನಸಾಮಾನ್ಯರಿಗೆ ಕಲಿಯಲು ಕಷ್ಟವಾಗುತ್ತಿತ್ತು. ಅದನ್ನು  ಸರಳೀಕರಣಗೊಳಿಸಿ ಆಧುನಿಕ ಜಗತ್ತಿಗೆ ಅಷ್ಟಾಂಗಯೋಗವನ್ನಾಗಿ ಪರಿಚಯಿಸಿದ ಕೀರ್ತಿ ಪತಾಂಜಲಿ ಮಹರ್ಷಿಗೆ ಸಲ್ಲುತ್ತದೆ.ನಾವು ಯೋಗದ ಈ ಎಂಟು ಅಂಗಗಳಲ್ಲಿ ಕನಿಷ್ಠ ಆರು ಅಂಗಗಳನ್ನಾದರೂ (ಷಷ್ಟಾಂಗ) ಅಭ್ಯಸಿಸಿ ಅದರ ಸದುಪಯೋಗವನ್ನು ಪಡೆದುಕೊಳ್ಳುವುದು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ  ಸಮಿತಿಯ ಹಿರಿಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ, ವಿವಿಧ ಉಪಸಮಿತಿಗಳ ಜಯ ಶೆಟ್ಚಿಯವರು, ಸಂಕೇಶ್ ಎಸ್ ಶೆಟ್ಟಿ, ಪ್ರವೀಣ್ ಜೆ ಶೆಟ್ಟಿ, ಚಂದ್ರಶೇಖರ  ಯಸ್ ಶೆಟ್ಟಿ ಬೆಳ್ಮಣ್, ಮಹಿಳಾ ವಿಭಾಗದ ಸಲಹೆಗಾರರಾದ ವಿನೋದಾ ಎ. ಶೆಟ್ಟಿ, ಕೋಶಾಧಿಕಾರಿ ಯೋಗಿನಿ ಎಸ್. ಶೆಟ್ಟಿ ಮಾಜಿ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿಯವರು, ಪ್ರಾದೇಶಿಕ ಸಮಿತಿಯ ಹಾಗೂ ಮಹಿಳಾ ವಿಭಾಗದ ಇತರ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ರಘುನಾಥ ಯನ್ ಶೆಟ್ಚಿಯವರು ನಿರೂಪಿಸಿದರೆ,ಮಹಿಳಾ ವಿಭಾಗದ ಜೊತೆ ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿಯವರು ಕೊನೆಯಲ್ಲಿ ವಂದಿಸಿದರು.

ವರದಿ : ಈಶ್ವರ ಎಂ. ಐಲ್

 

Comments are closed.