ಬೆಂಗಳೂರು: ʼಆಪರೇಷನ್ ಸಿಂಧೂರʼ ಹೆಸರಿನಲ್ಲಿ ಭಾರತೀಯ ಸೇನಾಪಡೆ ಬುಧವಾರ (ಮೇ7)ರಂದು ಮುಂಜಾನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಯೋತ್ಪಾದಕರ ಒಂಬತ್ತು ಅಡಗುತಾಣಗಳನ್ನು ನಾಶಪಡಿಸಲಾಗಿತ್ತು.
ಇದರಿಂದ ದೇಶಾದ್ಯಂತ ಸೈನಿಕರ ಪರಾಕ್ರಮವನ್ನು ಸಾರ್ವಜನಿಕರು ಕೊಂಡಾಡಿದ್ದರು. ಇದೀಗ ಸೇನಾಪಡೆಗಳಿಗೆ ಶಕ್ತಿ ತುಂಬಲು ಹಾಗೂ ಅವರ ಶ್ರೇಯಸ್ಸಿಗಾಗಿ ರಾಜ್ಯದ ಎಲ್ಲಾ ವಕ್ಫ್‌ಗೆ ಸೇರಿದ ಹಾಗೂ ಇತರೆ ಮಸೀದಿಗಳಲ್ಲಿ ಪ್ರಾರ್ಥಿಸುವಂತೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಸೂಚಿಸಿದ್ದಾರೆ.
ವಕ್ಫ್ ಬೋರ್ಡ್ ವ್ಯಾಪ್ತಿಯ ಮಸೀದಿಗಳು ಸೇರಿದಂತೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ದೇಶದ ಸೈನಿಕರ ಶ್ರೇಯಸ್ಸಿಗೆ ಹಾಗೂ ಶಕ್ತಿ ತುಂಬಲು ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು ಎಂದು ಬೋರ್ಡ್ ಮುಖ್ಯ ಕಾರ್ಯನಿರ್ವಹಾಧಿಕಾರಿಗೆ ಸಚಿವ ಜಮೀರ್ ಅಹಮದ್ ಖಾನ್ ಅವರು ಪತ್ರ ಬರೆದು ಸೂಚನೆ ನೀಡಿದ್ದಾರೆ.
ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಮಂದಿ ಮೃತಪಟ್ಟಿದ್ದರು. ಈ ಘಟನೆಗೆ ಪ್ರತಿಕಾರ ತೀರಿಸಿಕೊಳ್ಳಲು ಭಾರತೀಯ ಸೇನಾಪಡೆ ಪಾಕ್ ಆಕ್ರಮಿತ ಪ್ರದೇಶದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ನೂರಾರು ಉಗ್ರರರನ್ನು ಸದೆಬಡಿದಿತ್ತು. ಆದರೆ ಪಾಕ್ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಉಗ್ರರ ನೆಲೆಗಳನ್ನಷ್ಟೇ ಗುರಿಯಾಗಿಸಿ ನಿಖರವಾಗಿ ದಾಳಿ ನಡೆಸಲಾಗಿತ್ತು.
ʼಆಪರೇಷನ್ ಸಿಂಧೂರ್ʼ ಯಶಸ್ವಿಯಾದ ಹಿನ್ನಲೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಪಕ್ಷದ ಹಾಗೂ ವಿಪಕ್ಷಗಳ ನಾಯಕರು ಮೆಚ್ಚುಗೆ ಸೂಚಿಸಿದ್ದರು.
Comments are closed.