ಆರೋಗ್ಯ

ಜಿಲ್ಲೆಗೆ ಕೋವಿಡ್ ಮಾರ್ಗಸೂಚಿ ಪ್ರಕಟಿಸಿದ ಉಡುಪಿ ಡಿಸಿ: ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ..!

Pinterest LinkedIn Tumblr

ಉಡುಪಿ: ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಆರೊಗ್ಯ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಕೋವಿಡ್ 19 ಪರಿಸ್ಥಿತಿಯನ್ನು ಅವಲೋಕಿಸಿ ಹೊಸವರ್ಷದ ಆಚರಣೆ ಹಾಗೂ ಇತರೆ ಸಾಂದರ್ಭಿಕ ಸಮಾರಂಭಗಳಲ್ಲಿ ಸಾರ್ವಜನಿಕರು ಗುಂಪು-ಗುಂಪಾಗಿ ಸೇರುವುದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೇ, ಕೋವಿಡ್-19 ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುವ ಸಾಧ್ಯತೆಗಳು ಹೆಚ್ಚಾಗಿದ್ದು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕೋವಿಡ್-19 ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೆಲವು ನಿಬಂಧನೆಗಳನ್ನು ವಿಧಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವೆಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಉಡುಪಿ ಜಿಲ್ಲೆಯಾದ್ಯಂತ ಒಂದಷ್ಟು ನಿಬಂಧನೆಗಳನ್ನು ವಿಧಿಸಿ ಆದೇಶಿಸಿದ್ದಾರೆ.

ಪಾಲಿಸಬೇಕಾದ ಮಾರ್ಗಸೂಚಿಗಳು:
ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಡಿ. 31, ಜ.1ಮತ್ತು ಜ.2ರಂದು ಆಚರಿಸಲಾಗುವ ಎಲ್ಲಾ ಸಮಾರಂಭಗಳನ್ನು ಮಧ್ಯರಾತ್ರಿ 1 ಗಂಟೆ ಒಳಗಾಗಿ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು.

ದೊಡ್ಡ ಪ್ರಮಾಣದಲ್ಲಿ ನಡೆಸುವ ಸಮಾರಂಭಗಳನ್ನು ಕಡ್ಡಾಯವಾಗಿ ಹೊರಾಂಗಣದಲ್ಲಿ ಬೆಳಗಿನ ಹೊತ್ತಿನಲ್ಲಿ ನಡೆಸಬೇಕು. ಸಾಧ್ಯವಾದಷ್ಟು ಮುಂಜಾನೆ ಹಾಗೂ ತಡರಾತ್ರಿಯ ಸಮಯದಲ್ಲಿ ಆಚರಣೆ ಮಾಡುವುದನ್ನು ತಪ್ಪಿಸಬೇಕು.

ಸಾರ್ವಜನಿಕರು ಸೇರುವ ಪ್ರದೇಶಗಳಲ್ಲಿ ಆಸನ ಸಾಮರ್ಥ್ಯ ಮೀರದಂತೆ ಮುಖ್ಯವಾಗಿ ಒಳಾಂಗಣ ಪ್ರದೇಶ, ಸ್ಥಳಗಳಾದ ಹೋಟೆಲ್ಸ್, ಬಾರ್ ಅಂಡ್ ರೆಸ್ಟೋರೆಂಟ್ಸ್, ರೆಸಾರ್ಟ್ಸ್, ಪಬ್, ಕ್ಲಬ್ ಮೊದಲಾದೆಡೆಗಳಲ್ಲಿ ಆಸನ ಸಾಮರ್ಥ್ಯ ಮೀರದಂತೆ ಸಂಬಂಧಪಟ್ಟ ಮಾಲೀಕರು ಹಾಗೂ ವ್ಯವಸ್ಥಾಪಕರುಗಳು ಕ್ರಮಕೈಗೊಳ್ಳಬೇಕು.ಆಯೋಜಕರು ಹಾಗೂ ವ್ಯವಸ್ಥಾಪಕರು, ಸೇವಾ ಸಿಬ್ಬಂದಿಗಳು ಆದ್ಯತೆ ಮೇರೆಗೆ ಬೂಸ್ಟರ್ ಡೋಸ್ ಪಡೆಯುವ ಹಾಗೂ ಕನಿಷ್ಠ ಎರಡು ಡೋಸ್ ಲಸಿಕೆಗಳನ್ನು ಪಡೆಯುವುದನ್ನು ನಿರೀಕ್ಷಿಸಲಾಗಿದೆ.

ಎಲ್ಲಾ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಛೇರಿಗಳು, ಬಸ್ ನಿಲ್ದಾಣಗಳು, ಪ್ರಾರ್ಥನಾ ಮಂದಿರ, ಪೂಜಾ ಮಂದಿರ,ದೇವಸ್ಥಾನಗಳು, ಅಂಗಡಿ ಮುಂಗಟ್ಟುಗಳು, ಕೈಗಾರಿಕೆ ಹಾಗೂ ಇತರೆ ಕಾರ್ಖಾನೆಗಳು ಇತ್ಯಾದಿ ಪ್ರದೇಶ ಗಳಲ್ಲಿ ಮುಖಗವಸವನ್ನು (ಮಾಸ್ಕ್) ಕಡ್ಡಾಯವಾಗಿ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡಬೇಕು.

ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಹಾಗೂ ಇತ್ಯಾದಿ ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಸ್ವಯಂ ಪ್ರೇರಿತರಾಗಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
60 ವರ್ಷ ಮೇಲ್ಪಟ್ಟ ವಯಸ್ಕರರು, ಅನಾರೋಗ್ಯದಿಂದ ಬಳಲುತ್ತಿರುವವರು, ಗರ್ಭಿಣಿಯರು ಮತ್ತು ಬಾಣಂತಿಯರು ಇಂತಹ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದರಿಂದ ದೂರವಿರುವುದು.

ಪ್ರವೇಶ ದ್ವಾರದಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳು:
ಮೇಲ್ಕಂಡ ಪ್ರದೇಶ, ಸ್ಥಳಗಳ ಪುವೇಶ ದ್ವಾರದಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಸೇರುವುದನ್ನು
ತಪ್ಪಿಸಲು ಒಂದಕ್ಕಿಂತ ಹೆಚ್ಚಿನ ಪುವೇಶ ದ್ವಾರಗಳನ್ನು ನಿರ್ಮಿಸುವುದು.
ಒಳಾಂಗಣ ಪ್ರದೇಶಗಳಲ್ಲಿ ಸಮಾರಂಭಗಳು ನಡೆಯುವ ಎಲ್ಲಾ ಸಂದರ್ಭಗಳಲ್ಲೂ ಕಡ್ಡಾಯವಾಗಿ
ಮುಖಗವಸನ್ನು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಬೇಕು. ಪ್ರವೇಶ ದ್ವಾರದಲ್ಲಿ ‘ಮಾಸ್ಕ್ ಇಲ್ಲದೆ ಪ್ರವೇಶ ಇಲ್ಲ’ ಎಂಬ ಫಲಕವನ್ನು ಅಳವಡಿಸಬೇಕು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು.
ಒಳಾಂಗಣ ಸಮಾರಂಭಗಳಲ್ಲಿ ಪ್ರತಿಯೊಬ್ಬರು ಹ್ಯಾಂಡ್ ಸ್ಯಾನಿಟೈಸರ್ ಬಳಸಲು ಅರಿವು ಮೂಡಿಸುವುದು.
ಬಹುದೊಡ್ಡ ಸಮಾರಂಭಗಳನ್ನು ನಡೆಸಲು ಉದ್ದೇಶಿಸುವ ಆಯೋಜಕರು ಸಮಾರಂಭಗಳಲ್ಲಿ ಭಾಗವಹಿಸುವಂತಹ ವ್ಯಕ್ತಿಯು ಅಸ್ವಸ್ಥಗೊಂಡಲ್ಲಿ ಅಂತವರನ್ನು ಹತ್ತಿರದ ವಿಶೇಷ ಸೌಲಭ್ಯವುಳ್ಳ, ಆಸ್ಪತ್ರೆಗೆ ಆಂಬ್ಯುಲೆನ್ಸ್ ಸೇವೆಯ ಮೂಲಕ ದಾಖಲಿಸಲು ಮುಂಚಿತವಾಗಿ ವ್ಯವಸ್ಥೆ ಮಾಡಿಕೊಳ್ಳತಕ್ಕದು.
ಸಿನಿಮಾ ಮಂದಿರಗಳಿಗೆ ಚಲನಚಿತ್ರಗಳನ್ನು ವೀಕ್ಷಿಸಲು ಹೋಗುವ ಪ್ರತಿಯೊಬ್ಬ ಪ್ರೇಕ್ಷಕರು ಎನ್-95 ಮಾಸ್ಕ್ ಕಡ್ಡಾಯವಾಗಿ ಧರಿಸತಕ್ಕದ್ದು. ಈ ಬಗ್ಗೆ ಪವೇಶ ದ್ವಾರದಲ್ಲಿರುವ ಸಿಬ್ಬಂದಿಗಳು ಪ್ರೇಕ್ಷಕರಿಗೆ ತಿಳಿ ಹೇಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.