ಆರೋಗ್ಯ

ಈ ಅಂಗಗಳು ಆಂತರಿಕ ಮತ್ತು ಬಾಹ್ಯ ಪ್ರಭಾವಗಳಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚು.

Pinterest LinkedIn Tumblr

ನಮ್ಮ ಧ್ವನಿಪೆಟ್ಟಿಗೆ ಅಥವಾ ಕಂಠಕುಹರದಲ್ಲಿನ ಧ್ವನಿ-ತಂತುಗಳು ಕಂಪಿಸುವ ಕಾರಣದಿಂದಾಗಿ ಧ್ವನಿಯು ಹುಟ್ಟುತ್ತದೆ. ಕಂಠಕುಹರದ ಈ ಸಂರಚನೆಗಳು ಬಹಳ ನಾಜೂಕಾಗಿದ್ದು, ಇವು ಹಾನಿಗೊಳಗಾಗುವ ಸಾಧ್ಯತೆ ಬಹಳ ಹೆಚ್ಚು. ಧ್ವನಿತಂತುಗಳು ನಮ್ಮ ಶರೀರದ ಬಹಳ ಸಣ್ಣ ಭಾಗವಾಗಿದ್ದರೂ ಸಹ ದಿನವಿಡೀ ಇವು ನಿರ್ವಹಿಸುವ ಚಟುವಟಿಕೆ ಬಹಳ ವಿಶೇಷವಾಗಿದ್ದು, ಈ ಅಂಗಗಳು ಆಂತರಿಕ ಮತ್ತು ಬಾಹ್ಯ ಪ್ರಭಾವಗಳಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚು.

ಹಾಗಾಗಿ ಧ್ವನಿಯನ್ನು ಅತಿ ಬಳಕೆ ಮಾಡದೆ, ದುರ್ಬಳಕೆ ಮಾಡದೆ ಅಥವಾ ತಪ್ಪು ಬಳಕೆ ಮಾಡದೆ ನಮ್ಮ ಧ್ವನಿ ಪೆಟ್ಟಿಗೆಯನ್ನು ಕಾಪಾಡಿಕೊಳ್ಳುವುದು ಬಹಳ ಆವಶ್ಯಕ. ಈ ಕಾಲಮಾನದಲ್ಲಿ ವ್ಯಾಟ್ಸಪ್ ಮತ್ತು ಫೇಸ್ಬುಕ್ ಸಂವಹನ ತಂತ್ರಜ್ಞಾನಗಳ ಬಳಕೆಯ ವಿಶೇಷವಾಗಿದ್ದರೂ ಸಹ ಒಂದು ಪರಿಣಾಮಕಾರಿ ಸಂವಹನ ಸಾಧ್ಯವಾಗಬೇಕಾದರೆ ನಮಗೆ ಧ್ವನಿ ಬೇಕೇ ಬೇಕು.

ನಮ್ಮ ಆವಶ್ಯಕತೆಗಳನ್ನು ವ್ಯಕ್ತಪಡಿಸಲು ಧ್ವನಿ ಬೇಕು, ಸಮಾಜದ ಜತೆಗೆ ಸಂವಹನ ನಡೆಸಲು ಧ್ವನಿ ಬೇಕು ಮತ್ತು ನಮ್ಮ ಉಪಸ್ಥಿತಿಯನ್ನು ವ್ಯಕ್ತಪಡಿಸಲು ನಮಗೆ ಧ್ವನಿ ಬೇಕು. ಅಂಗೀಕಾರವನ್ನು ಸ್ವೀಕರಿಸಲು, ನಮ್ಮ ಅಲೋಚನೆಗಳನ್ನು ವ್ಯಕ್ತಪಡಿಸಲು ಮತ್ತು ಅವುಗಳನ್ನು ರುಜುವಾತುಗೊಳಿಸಲು ಸ್ವತ: ನಾವೇ ಧ್ವನಿಯೆತ್ತುವುದು ಆವಶ್ಯಕವಾಗುತ್ತದೆ.

ಧ್ವನಿ ಇಲ್ಲದೆಯೇ ನಮ್ಮ ಆವಶ್ಯಕತೆಯನ್ನು ವ್ಯಕ್ತಪಡಿಸುವುದು ಎಂಬ ವಿಚಾರವನ್ನು ಕಲ್ಪಿಸುವುದೂ ಅಸಾಧ್ಯ. ತಮ್ಮ ಧ್ವನಿಯ ಮೇಲೆ ಹೆಚ್ಚು ಅವಲಂಬಿತವಾಗಿರುವವರಿಗೆ ಅವರ ಧ್ವನಿಯು ಇನ್ನಷ್ಟು ಮುಖ್ಯ ಎನಿಸಿಕೊಳ್ಳುತ್ತದೆ. ಇಂತಹ ವ್ಯಕ್ತಿಗಳನ್ನು “ವೃತ್ತಿಪರ ಧ್ವನಿ ಬಳಕೆದಾರರು’ ಎಂಬುದಾಗಿ ಕರೆಯಲಾಗುತ್ತದೆ. ಪ್ರಸ್ತುತ ಕಾಲಮಾನದಲ್ಲಿ “ವೃತ್ತಿಪರ ಧ್ವನಿ ಬಳಕೆದಾರರು’ ಎಂಬ ಶಬ್ದವು ಹಿಂದೆಂದಿಗಿಂತಲೂ ಹೆಚ್ಚು ವ್ಯಾಪ್ತಿಯನ್ನು ಪಡೆದಿದೆ, ಯಾಕೆಂದರೆ ಈ ಹಿಂದೆ ಕೇವಲ ಸಂಗೀತಗಾರರಿಗೆ ಮಾತ್ರವೇ ಈ ಪದವನ್ನು ಬಳಕೆ ಮಾಡಲಾಗುತ್ತಿತ್ತು. ತನ್ನ ಉದ್ಯೋಗದ ನಿಮಿತ್ತ ತನ್ನ ಧ್ವನಿಯ ಮೇಲೆ ಅವಲಂಬಿತರಾಗಿರುವ ಯಾರು ಬೇಕಾದರೂ “ವೃತ್ತಿಪರ ಧ್ವನಿ ಬಳಕೆದಾರರು’ ಅನ್ನಿಸಿಕೊಳ್ಳಬಹುದು.

ಅಧ್ಯಾಪಕರು ಅಥವಾ ಬೋಧಕರೂ ಸಹ ಸಂಗೀತಗಾರರಷ್ಟೆ ಧ್ವನಿಯನ್ನು ಬಳಸುತ್ತಾರೆ. ಆದರೆ ವ್ಯತ್ಯಾಸ ಏನು ಅಂದರೆ ಸಂಗೀತಗಾರರು, ಸ್ವರಗಳ ತರಬೇತಿಯನ್ನು ಪಡೆದಿರುವ ಕಾರಣ ತಮ್ಮ ಧ್ವನಿಯಲ್ಲಿ ಸಣ್ಣ ಬದಲಾವಣೆ ಆದರೂ ಅದರಿಂದ ತಮ್ಮ ವೃತ್ತಿ ಅಥವಾ ಸಂಗೀತದ ನಿರ್ವಹಣೆಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಅವರು ಹೆಚ್ಚು ಕಾಳಜಿ ವಹಿಸುತ್ತಾರೆ ಆದರೆ ಅಧ್ಯಾಪಕರು ತಮ್ಮ ಧ್ವನಿಯಲ್ಲಿನ ಬದಲಾವಣೆಯನ್ನು ನಿರ್ಲಕ್ಷಿಸುತ್ತಾರೆ ಮಾತ್ರವಲ್ಲ ತಮ್ಮ ಧ್ವನಿ ಸಂಪೂರ್ಣವಾಗಿ ಅಡಗುವವರೆಗೂ ಧ್ವನಿಯನ್ನು ಬಳಸುತ್ತಲೇ ಇರುತ್ತಾರೆ.

ಅನೇಕ ಸಂದರ್ಭಗಳಲ್ಲಿ ಅಧ್ಯಾಪಕರಿಗೆ ತಮ್ಮ ಧ್ವನಿಯಲ್ಲಿ ಬದಲಾವಣೆ ಆಗುತ್ತಿರುವುದು-ಅಂದರೆ ಆಗಾಗ ಗಂಟಲನ್ನು ಸರಿಪಡಿಸಬೇಕಾಗುವುದು, ಬಹಳ ದೀರ್ಘ ಸಮಯ ಮಾತನಾಡುವುದರಿಂದ ಗಂಟಲಿನಲ್ಲಿ ಆಯಾಸ ಉಂಟಾಗುವುದು,ಅದರಲ್ಲೂ ವಿಶೇಷವಾಗಿ ತರಗತಿಯ ಕೊನೆಯಲ್ಲಿ ಧ್ವನಿ ಬಳಲುವುದು ಗಮನಕ್ಕೆ ಬಂದಿರುತ್ತದೆ, ಆದರೆ ಅದರ ಬಗ್ಗೆ ಹೆಚ್ಚು ಲಕ್ಷ್ಯ ವಹಿಸದೆ ಇರುವ ಕಾರಣದಿಂದಾಗಿ ಕೆಲವು ಅಧ್ಯಾಪಕರು ಭಾಗಶ: ಮತ್ತು ಇನ್ನು ಕೆಲವರು ಸಂಪೂರ್ಣವಾಗಿ ತಮ್ಮ ಧ್ವನಿಯನ್ನು ಕಳೆದುಕೊಳ್ಳುತ್ತಾರೆ.

ಧ್ವನಿಯ ಅತಿ ಬಳಕೆ ಅಥವಾ ತಪ್ಪು ಬಳಕೆಯ ಕಾರಣದಿಂದಾಗಿ ಕೆಲವು ಪ್ರಕರಣಗಳು ತೀವ್ರ ಅಥವಾ ದೀರ್ಘಕಾಲಿಕ ಧ್ವನಿ ಸಮಸ್ಯೆಗಳ ಮೂಲಕ ಕೊನೆಗೊಳ್ಳುತ್ತವೆ. ಅತಿ ಬಳಕೆಯ ಕಾರಣದಿಂದಾಗಿ ಅವರ ಒಂದು ಧ್ವನಿ ತಂತುವಿನಲ್ಲಿ ಅಥವಾ ಎರಡೂ ಧ್ವನಿ ತಂತುಗಳಲ್ಲಿ ಸಣ್ಣ ಮಾಂಸಲ ಅಂಗಾಂಶವು ಬೆಳೆದು, ಒಂದು ಸಣ್ಣ ಅವಧಿಯಲ್ಲಿ ತಮ್ಮ ಸಹಜ ಧ್ವನಿಯನ್ನು ಮತ್ತೆ ಹಿಂದಕ್ಕೆ ಪಡೆಯುವುದು ಅವರಿಗೆ ಸಾಧ್ಯ ಆಗುವುದಿಲ್ಲ.
ತಾನು ಬೋಧಿಸುವ ವಿಷಯದಲ್ಲಿ ತಾನು ಉತ್ತಮ ಟೀಚರ್ ಅನ್ನಿಸಿಕೊಳ್ಳಬೇಕು ಅನ್ನುವ ಭಾವನೆಯನ್ನು ಸಾಮಾನ್ಯವಾಗಿ ಪ್ರತಿಯೊಬ್ಬ ಅಧ್ಯಾಪಕನೂ ಇಟ್ಟುಕೊಂಡಿರುತ್ತಾರೆ. ಎಲ್ಲ ಅಧ್ಯಾಪಕರು ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಉತ್ತಮವಾಗಿ ಕಲಿಸಲು ಬಯಸುತ್ತಾರೆ. ಅದರೆ ಇದೇ ಸಂದರ್ಭದಲ್ಲಿ, 80 ಅಥವಾ 100ರಷ್ಟು ವಿದ್ಯಾರ್ಥಿಗಳಿಗೆ ಒಬ್ಬರೆ ಅಧ್ಯಾಪಕರು ಇರುವ ಸಂದರ್ಭದಲ್ಲಿ ನಿಮ್ಮ ಧ್ವನಿಯು ಕಡೆಯ ಬೆಂಚಿನವರೆಗೂ ತಲುಪಬೇಕು ಎನ್ನುವುದಷ್ಟೆ ಅವರ ಆದ್ಯತೆಯಾಗಿರುತ್ತದೆ. ವಿದ್ಯಾರ್ಥಿಗಳನ್ನು ಜಾಗೃತರಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರ ಹೆಸರು ಹಿಡಿದು ಕರೆಯುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಯಾವ ಧ್ವನಿವರ್ಧಕ, ಸಾಧನದ ಸಹಾಯವೂ ಇಲ್ಲದೆ, ತಮ್ಮಿಂದ ಆದಷ್ಟು ಗಟ್ಟಿಯಾದ ಸ್ವರದಲ್ಲಿ ಕೂಗಿ ಅವರು ಈ ಕೆಲಸವನ್ನು ಮಾಡುತ್ತಿರುತ್ತಾರೆ.

ಅಧ್ಯಾಪಕರು ತರಗತಿಯಲ್ಲಿ, ವಿಷಯವನ್ನು ಒಂದು ಬಾರಿ ಓದಿ, ಮತ್ತೆ ಅದನ್ನೇ ಇನ್ನೊಮ್ಮೆ ಓದಿ ಮತ್ತು ಇನ್ನಷ್ಟು ವಿವರಣೆಗಳ ಮೂಲಕ ಅದನ್ನು ಮತ್ತೆ ಪುನರಾವರ್ತಿಸುವ ಸಾಮಾನ್ಯ ಕ್ರಮವನ್ನು ಅನುಸರಿಸುತ್ತಾರೆ. ಅವರು ಬೋಧಿಸುವ ವಿಷಯವನ್ನು ಆಧರಿಸಿಕೊಂಡ ಧ್ವನಿಯ ಬಳಕೆಯಲ್ಲಿಯೂ ಸಹ ವ್ಯತ್ಯಾಸವಾಗುತ್ತದೆ. ಅಂದರೆ ಇದರ ಅರ್ಥ ಗಣಿತವನ್ನು ಬೋಧಿಸುವ ಅಧ್ಯಾಪಕರಿಗೆ ಧ್ವನಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇಲ್ಲ ಎಂದಲ್ಲ. ಗಣಿತದ ಸಮಸ್ಯೆಯನ್ನು ಓದುವಾಗ ಮತ್ತು ಅದನ್ನು ಕರಿಹಲಗೆಯ ಮೇಲೆ ಬರೆದು ಆ ಸಮಸ್ಯೆಯನ್ನು ಬಿಡಿಸುವ ಸಂದರ್ಭದಲ್ಲಿ ಅವರ ಚಾಕ್ಪೀಸ್ ನಿಂದ ಬರುವ ಸುಣ್ಣದ ಪುಡಿಯ ಧೂಳು ಬಾಯಿಯ ಮೂಲಕ ಶರೀರದ ಒಳ ಸೇರುತ್ತದೆ ಮತ್ತು ಅವರ ಗಂಟಲಿಗೆ ಕಿರಿ ಕಿರಿ ಉಂಟು ಮಾಡುತ್ತದೆ; ಹಾಗಾಗಿ ಇತರ ಅಧ್ಯಾಪಕರ ಹಾಗೆಯೇ, ಗಣಿತ ಬೋಧಕರ ಧ್ವನಿಗೂ ಸಹ ತೊಂದರೆ ಆಗುವ ಸಮಾನ ಸಾಧ್ಯತೆ ಇದೆ.
ಅಧ್ಯಾಪಕರು ಸತತವಾಗಿ ತರಗತಿಗಳನ್ನು ತೆಗೆದುಕೊಳ್ಳುವುದರಿಂದ ಅಥವಾ ಪಾಠ ಮಾಡುವುದರಿಂದ ಧ್ವನಿ ಆಯಾಸಗೊಳ್ಳುತ್ತದೆ. ಮತ್ತು ಗಂಟಲಿನ ತೇವಾಂಶ ಕಡಿಮೆಯಾಗುತ್ತದೆ. (ಗಂಟಲು ಒಣಗುವುದು); ಇದರ ಪರಿಣಾಮವಾಗಿ ಗಂಟಲಿನಲ್ಲಿ ಗಂಟುಗಳು ಅಥವಾ ಪಾಲಿಪ್ (ಧ್ವನಿ ಹೊರಡುವಿಕೆಗೆ ಕಾರಣವಾಗುವ ಧ್ವನಿತಂತುವಿನಲ್ಲಿ ಒಂದು ಸಣ್ಣ ಮಾಂಸಲ ಬೆಳವಣಿಗೆ) ರೀತಿಯ ಗಂಟಲಿನ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಅಧ್ಯಾಪಕರು ತಮ್ಮ ತರಗತಿ ಮುಗಿಸಿದ ಅನಂತರ ಮತ್ತೆ ಸಹ ಅಧ್ಯಾಪಕರ ಜತೆಗೆ ಮಾತುಕತೆಯಲ್ಲಿ ತೊಡಗುವುದಕ್ಕಿಂತಲು, ತರಗತಿಯನ್ನು ತೆಗೆದುಕೊಳ್ಳುವುದಕ್ಕೆ ಮೊದಲು ಮತ್ತು ತರಗತಿ ಮುಗಿಸಿದ ಅನಂತರ ಸಾಕಷ್ಟು ನೀರು ಕುಡಿದು, ಗಂಟಲಿಗೆ ಒಂದಷ್ಟು ವಿಶ್ರಾಂತಿ ನೀಡುವುದರಿಂದಲೂ (5 ರಿಂದ 10 ನಿಮಿಷ) ಸಹ ಪ್ರಯೋಜನ ಆಗಬಹುದು. ಇಷ್ಟೇ ಅಲ್ಲದೆ, ಹೆಚ್ಚಿನ ಅಧ್ಯಾಪಕರು, ತರಗತಿ ಮುಗಿಸಿದ ಅನಂತರವೂ ಶಾಲೆ ಅಥವಾ ಇನ್ನಿತರ ಕಡೆಗಳಲ್ಲಿ ಹೆಚ್ಚುವರಿ ಕೋಚಿಂಗ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಇದರಿಂದಾಗಿ ಧ್ವನಿ ಮೆಲೆ ಹೆಚ್ಚುವರಿ ಪರಿಣಾಮ ಬೀಳುತ್ತದೆ. ಇಷ್ಟೇ ಅಲ್ಲದೆ, ಕಂಠಕುಹರ ಅಥವಾ ಧ್ವನಿತಂತುಗಳು ಹೆಚ್ಚಾಗಿ ಹಾರ್ಮೋನ್ ಉದ್ದೇಶಿತವಾಗಿರುವ ಅಂಗಗಳು. ಹಾಗಾಗಿ ಅಧ್ಯಾಪನ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರು ಅಂದರೆ ಅಧ್ಯಾಪಕಿಯರು ತಮ್ಮ ಮಾಸಿಕ ಋತುಚಕ್ರದ ಸಂದರ್ಭಗಳಲ್ಲಿ ಧ್ವನಿಯ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಕೊಂಡರೆ ಉತ್ತಮ.

ಮಾಸಿಕ ಋತುಚಕ್ರದ ಅವಧಿಯಲ್ಲಿ ಧ್ವನಿ ತಂತುಗಳು ಹೆಚ್ಚು ನಾಜೂಕಾಗಿರುತ್ತವೆ ಎಂಬ ಭಾವನೆ ಇದ್ದು, ಈ ಅವಧಿಯಲ್ಲಿ ಧ್ವನಿಯಲ್ಲಿ ಸಣ್ಣ ಮಟ್ಟಿಗೆ ಕರ್ಕಶತೆ ಇರುವುದನ್ನು ಗಮನಿಸಬಹುದು. ಈ ಅವಧಿಯಲ್ಲಿ ಹೆಚ್ಚುವರಿ ಕ್ಲಾಸ್ ತೆಗೆದುಕೊಳ್ಳುವುದನ್ನು ಮತ್ತು ಧ್ವನಿಯ ಅತಿಬಳಕೆಯನ್ನು ತಪ್ಪಿಸಿಕೊಳ್ಳುವುದು ಆವಶ್ಯಕ. ಅಧ್ಯಾಪಕಿಯರು ಅಂದರೆ ಅವರು ಗೃಹಿಣಿಯರೂ ಹೌದು, ಶಾಲೆಯಲ್ಲಿ ಮಾತ್ರ ಅಲ್ಲ – ಮಾತುಕತೆ ನಡೆಸಲು, ಪಾಠ ಮಾಡಲು, ಬಯ್ಯಲು ಧ್ವನಿ ಅವರಿಗೆ ಮನೆಯಲ್ಲಿಯೂ ಬೇಕು, ಪ್ರಾಯಶ: ಶಾಲೆಗಿಂತಲೂ ಮನೆಯಲ್ಲಿ ಅವರಿಗೆ ಧ್ವನಿಯ ಆವಶ್ಯಕತೆ ಹೆಚ್ಚು ಇರುತ್ತದೆ!

( ಒಂದು ದೃಶ್ಯವನ್ನು ಕಲ್ಪನೆ ಮಾಡಿಕೊಳ್ಳಿ, ನೀವು ಅಡುಗೆ ಮನೆಯಲ್ಲಿ ಇದ್ದೀರಿ, ಮಿಕ್ಸರ್ ರನ್ ಆಗ್ತಾ ಇದೆ, ಯಾರೋ ಬಂದು ನಿಮ್ಮನ್ನು ಮಾತನಾಡಿಸುತ್ತಾರೆ…. ನೀವು ಉತ್ತರಿಸುತ್ತೀರಿ ಮತ್ತು ನಿಮ್ಮ ಉತ್ತರವು ಎದುರಿನವರನ್ನು ತಲುಪಲಿ ಎಂಬ ಕಾರಣಕ್ಕಾಗಿ ನಿಮ್ಮ ಧ್ವನಿಯನ್ನು ಎತ್ತರಿಸಿ ಮಾತನಾಡುತ್ತೀರಿ….. ನಿಮ್ಮ ಧ್ವನಿಯು ಎಷ್ಟು ಏರಿರುತ್ತದೆ ಎಂಬುದು ನಿಮಗೆ ಗೊತ್ತೇ ಇರುವುದಿಲ್ಲ’)

ಸಾಮಾನ್ಯವಾಗಿ ನಾವು ನಮ್ಮ ಧ್ವನಿಯನ್ನು ದಿನದ ಉದ್ದಕ್ಕೂ ಬಳಸುತ್ತಿರುತ್ತೇವೆ ಮತ್ತು ನಿದ್ದೆ ಮಾಡುವಾಗ ಮಾತ್ರ ನಮ್ಮ ಧ್ವನಿಗೆ ವಿಶ್ರಾಂತಿ. ಆದರೆ ನಮ್ಮ ಧ್ವನಿಗೆ ನಿಯಮಿತ ಅವಧಿಗಳಲ್ಲಿ ಸಣ್ಣ ಸಣ್ಣ ವಿಶ್ರಾಂತಿಯನ್ನು ನೀಡಿ, ನಿಯಮಿತ ಕ್ರಮದಲ್ಲಿ ನೀರನ್ನು ಸೇವಿಸಿ, ನಮ್ಮ ಬೋಧನೆಯ ವಿಧಾನ/ಶೈಲಿಯಲ್ಲಿ (ಉದಾ: ಅಗತ್ಯ ಬಿದ್ದರೆ ತರಗತಿಯ ಕೋಣೆಯಲ್ಲಿ ಮೈಕ್ರೋಫೋನ್ ಬಳಸುವ ಮೂಲಕ, ಧೂಳು ರಹಿತ ಚಾಕ್ಪೀಸ್ ಅಥವಾ ಬಿಳಿ ಹಲಗೆಯನ್ನು ಬಳಸುವ ಮೂಲಕ, ಸತತವಾಗಿ ಕರಿಹಲಗೆಯಲ್ಲಿ ಬರೆಯುವುದಕ್ಕೆ ಬದಲಾಗಿ, ಬರೆಯುವ ಮತ್ತು ವಿವರಿಸುವ ಕೆಲಸವನ್ನು ಒಂದರ ಅನಂತರ ಒಂದು ಮಾಡುವ ಮೂಲಕ) ಬದಲಾವಣೆ ಮಾಡಿಕೊಳ್ಳುವ ಮೂಲಕ ನಮ್ಮ ಧ್ವನಿಯ ಮೇಲಾಗುವ ಶ್ರಮವನ್ನು ತಗ್ಗಿಸಿಕೊಳ್ಳುವ ಪ್ರಯತ್ನವನ್ನು ಮಾಡಬಹುದು.

ಹೀಗೆ ಮಾಡುವುದರಿಂದ ಧ್ವನಿ ಪೆಟ್ಟಿಗೆಯ ಮೇಲೆ ಬೀಳುವ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಉದ್ಯೋಗ ಮತ್ತು ಇತರ ಚಟುವಟಿಕೆಗಳ ನಡುವೆ ( ಸಂಗೀತ, ಕ್ರೀಡೆ, ಯಕ್ಷಗಾನ ಇತ್ಯಾದಿ ಹವ್ಯಾಸಗಳು, ಪಠಣ, ಸಭೆಯನ್ನು ಉದ್ದೇಶಿಸಿ ಮಾಡುವ ಭಾಷಣಗಳು ಅಥವಾ ಇನ್ನಿತರ ಯಾವುದೇ ರೀತಿಯ ಧ್ವನಿಯ ಬಳಕೆಗಳು) ಸಮತೋಲನ ಕಾಪಾಡಿಕೊಳ್ಳುವ ಮೂಲಕ ನಮ್ಮ ಧ್ವನಿಯನ್ನು ಕಾಪಾಡಿಕೊಳ್ಳಬಹುದು.

ಧ್ವನಿಯ ರೋಗ ಪರಿಸ್ಥಿತಿಗೆ ಕಾರಣ ಆಗಬಹುದಾದ ಇನ್ನಿತರ ಅಂಶಗಳು ಅಂದರೆ, ತಂಬಾಕು ಸೇವನೆ, ಧೂಮಪಾನ ಮತ್ತು ಗ್ಯಾಸ್ಟ್ರೈಟಿಸ್, ಒತ್ತಡ ಅಥವಾ ಥೈರಾಯಿಡ್ ಅಸ್ವಸ್ಥತೆಯಂತಹ ಇನ್ನಿತರ ಯಾವುದೇ ರೀತಿಯ ಪರಿಸ್ಥಿತಿಗಳು ಸಹ ಧ್ವನಿಯ ಅನಾರೋಗ್ಯಕ್ಕೆ ಕಾರಣ ಆಗಬಹುದು. ನಮ್ಮಲ್ಲಿ ಧ್ವನಿಯ ಅನಾರೋಗ್ಯಕ್ಕೆ ಸಂಬಂಧಿಸಿದ ಹಾಗೆ ಕೆಟ್ಟ ಅಭ್ಯಾಸಗಳು ಇದ್ದರೆ, ಅದನ್ನು ಗುರುತಿಸಿ, ಧ್ವನಿಯನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡಬೇಕು ಮತ್ತು ನಿರ್ವಹಿಸಬೇಕು ಮತ್ತು ಆ ಮೂಲಕ ಇನ್ನಷ್ಟು ತೊಂದರೆಗಳು ಆಗುವುದನ್ನು ತಪ್ಪಿಸಿಕೊಳ್ಳಬಹುದು.

Comments are closed.