ಆರೋಗ್ಯ

ಮಾರುತಿ ಓಮ್ನಿ ಕಾರಿನಲ್ಲೇ ಕೋವಿಡ್-19 ಗಂಟಲು ದ್ರವ ಮಾದರಿ ಸಂಗ್ರಹ! (Video)

Pinterest LinkedIn Tumblr

ಕುಂದಾಪುರ: ಕೋವಿಡ್ ಪರೀಕ್ಷೆಯಲ್ಲಿ ಹಾಗೂ ಕೊರೋನಾ ನಿಯಂತ್ರಣದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿರೋದು ಎಲ್ಲರಿಗೆ ಹೆಮ್ಮೆಯ ವಿಚಾರ. ಇತ್ತೀಚೆಗಷ್ಟೇ ಗ್ರೀನ್ ಝೋನ್‌ಗೆ ಬಂದ ಉಡುಪಿ ಜಿಲ್ಲೆ ಕೋವಿಡ್ ಮಾದರಿ ಸಂಗ್ರಹಕ್ಕೆ ಸಂಚಾರಿ ಘಟಕ ಸಿದ್ದಪಡಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಸಾಹಸಕ್ಕೆ ಮುಂದಾಗಿದೆ. ಓಮ್ನಿ ಕಾರನ್ನು ಹೈಟೆಕ್ ಮೆಡಿಕಲ್ ವ್ಯವಸ್ಥೆಯೊಂದಿಗೆ ಸಿದ್ದಪಡಿಸಿ ಅದರ ಮೂಲಕ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಸರಕಾರಿ ಪ್ರಾಥಮಿಕಾ ಅರೋಗ್ಯಕೇಂದ್ರಗಳಿಗೆ ತೆರಳಿ ಅಲ್ಲಿಯೇ ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ಅಗತ್ಯವುಳ್ಳವರಿಗೆ ಕೋವಿಡ್ ಮಾದರಿ ಸಂಗ್ರಹಕ್ಕೆ ಮುಂದಾಗಲಿದೆ. ಈ ಘಟಕದಲ್ಲಿ ಓರ್ವ ಲ್ಯಾಬ್ ಟೆಕ್ನಿಶಿಯನ್ ಹಾಗೂ ಓರ್ವ ಡ್ರೈವರ್ ಇರುತ್ತಾರೆ. ಗಂಟಲು ದ್ರವ ಮತ್ತು ಮೂಗು ದ್ರವ ಪರೀಕ್ಷೆ ನಡೆಯುತ್ತೆ. ಪರೀಕ್ಷೆ ನಡೆದ ಬಳಿಕ ಸಂಪೂರ್ಣ ಕಾರನ್ನು ಸ್ಯಾನಿಟೈಸ್ ಮಾಡಲಾಗುತ್ತೆ.

ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ ಅವರ ಪರಿಕಲ್ಪನೆಯಲ್ಲಿ ಕೋವಿಡ್ ಮಾದರಿ ಸಂಗ್ರಹ ಕಾರು ಸಿದ್ದಗೊಂಡಿದ್ದು ಇದಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಕುಂದಾಪುರದ ಅಧ್ಯಕ್ಷ ದಿನಕರ ಶೆಟ್ಟಿ ನೇತೃತ್ವದಲ್ಲಿ ಸಹಕಾರ ನೀಡಲಾಗಿದೆ. ಉಡುಪಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೊತ್, ಆರೋಗ್ಯಾಧಿಕಾರಿ ಡಾ. ಸುದೀರ್ ಚಂದ್ರ ಸೂಡಾ, ಜಿಲ್ಲಾ ಕೊರೋನಾ ನಿಯಂತ್ರಣದ ನೋಡೆಲ್ ಅಧಿಕಾರಿ  ಡಾ. ಪ್ರಶಾಂತ್ ಭಟ್ ಸಂಪೂರ್ಣ ಸಹಕಾರವೂ ಇದೆ. ಕಾರು ನಿರ್ವಹಣೆ ಮತ್ತು ಚಾಲಕನ ಸಂಬಳವನ್ನು ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ಭರಿಸಲಾಗುತ್ತೆ. ನಿತ್ಯ ಐದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗುತ್ತೆ.

ಸಂಪೂರ್ಣ ವೈಜ್ಞಾನಿಕ ವ್ಯವಸ್ಥೆಯಲ್ಲಿ ಅಚ್ಚುಕಟ್ಟಾಗಿ ಈ ಕೋವಿಡ್ ಮಾದರಿ ಸಂಗ್ರಹದ ಮೊಬೈಲ್ ಘಟಕ ಸಿದ್ಧಗೊಂಡಿದೆ. ಸ್ಯಾನಿಟೈಸರ್ ವ್ಯವಸ್ಥೆ, ಕೈ ತೊಳೆಯಲು ನೀರಿನ ವ್ಯವಸ್ಥೆ, ಟೆಕ್ನಿಶಿಯನ್ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಚಾಲಕನಿಗೆ ಪಿಪಿ‌ಇ ಕಿಟ್ ನೀಡಲಾಗುತ್ತೆ. ಅಲ್ಲದೇ ಕಾರಿನಲ್ಲಿರುವ ಮೈಕ್ ಮೂಲಕ ಕೊರೋನಾ ಜಾಗೃತಿ ಸಾರುವ ಕೆಲಸವೂ ಆಗುತ್ತಿದೆ ಎನ್ನುತ್ತಾರೆ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ.

ಒಟ್ಟಿನಲ್ಲಿ ಕೋವಿಡ್ ಕೊರೋನಾ ತಡೆ ಹಾಗೂ ಮುಂಜಾಗೃತೆ ವಿಚಾರದಲ್ಲಿ ಸದಾ ಮಾದರಿಯಾಗಿ ಗುರುತಿಸಿಕೊಂಡ ಜಿಲ್ಲೆ ಇದೀಗಾ ಕೋವಿಡ್ ಟೆಸ್ಟಿಂಗ್ ಮೊಬೈಲ್ ವ್ಯವಸ್ಥೆ ಮೂಲಕ ಮತ್ತೊಂದು ಹೊಸ ಹೆಜ್ಜೆ ಅನ್ವೇಷಿಸಿದ್ದು ಇದು ರಾಜ್ಯಕ್ಕೆ ಮಾದರಿಯಾಗಲಿ ಅನ್ನೋದು ನಮ್ಮ ಹಾರೈಕೆ..

(ವರದಿ -ಯೋಗೀಶ್ ಕುಂಭಾಸಿ)

Comments are closed.