ಆರೋಗ್ಯ

ಲಾಕ್‌ಡೌನ್‌ ನಡುವೆ ತನ್ನೂರ ಕುಡಿಯುವ ನೀರಿನ ಬವಣೆ ಹೋಗಲಾಡಿಸಿದ ಬೈಂದೂರು ಬಿಜೂರಿನ ಉದ್ಯಮಿ!

Pinterest LinkedIn Tumblr

ಕುಂದಾಪುರ: ಈ ಊರಿನ ಎಲ್ಲಾ ಮನೆಯಲ್ಲೂ ಬಾವಿ ಇದೆ. ಆದರೆ ಆ ಬಾವಿ ನೀರು ಮಾತ್ರ ಉಪಯೋಗಕ್ಕಿಲ್ಲ. ಬಾವಿಗಳ ನೀರೆಲ್ಲವೂ ಕೆಂಬಣ್ಣಕ್ಕೆ ತಿರುಗಿದ್ದು, ಶಾಶ್ವತ ಕುಡಿಯುವ ನೀರನ್ನು ಪೂರೈಸುತ್ತೇವೆಂಬುದು ಕೇವಲ ಭರವಸೆ ಮಾತ್ರವೇ ಆಗಿದೆ. ಈ ಲಾಕ್‌ಡೌನ್‌ನಂತಹ ಕಠಿಣ ಪರಿಸ್ಥಿತಿಯಲ್ಲಿ ತನ್ನೂರಿನ ಜನರ ‘ಜಲ ಬಾಧೆ’ ಯನ್ನು ತಣಿಸಲು ಉದ್ಯಮಿಯೋರ್ವರು ಮುಂದಾಗಿದ್ದಾರೆ.

ಕೊರೋನಾ ನಡುವೆ ನೀರಿಗೆ ಕೊರತೆ!
ಒಂದೆಡೆ ಕರೋನಾ ಮಹಾಮಾರಿ ಜನರನ್ನು ಭೀತಿಗೊಳಿಸಿದೆ. ತಿಂಗಳುಗಳಿಂದ ದೇಶಾದ್ಯಂತ ವಿಧಿಸಿದ ಲಾಕ್‌ಡೌನ್‌ನಿಂದಾಗಿ ಜನರು ವಿವಿಧ ಸಮಸ್ಯೆಗಳಿಂದ ಕಂಗೆಟ್ಟಿದ್ದಾರೆ. ಕೆಲವರಿಗೆ ಕೆಲಸದ ಸಮಸ್ಯೆ, ಇನ್ನು ಕೆಲವರಿಗೆ ಒಪ್ಪತ್ತಿನ ಊಟಕ್ಕೂ ತತ್ವಾರ.. ಆದರೆ ಬೈಂದೂರಿನ ಬಿಜೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮೂರು, ನಾಲ್ಕನೇ ವಾರ್ಡ್‌ನ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಈ ಲಾಕ್ ಡೌನ್ ಜಂಜಾಟದ ನಡುವೆಯೇ ಮತ್ತೊಂದು ಶಾಪವಾಗಿದೆ. ಬಿಜೂರು ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕವಾಗಿ ಮುಕ್ತಿ ನೀಡಿದ್ದು, ಅದೇ ಊರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಬಿಜೂರು.

 

ಊರಿನ ಕಷ್ಟ ಕಂಡು ಮರುಗಿದ ಉದ್ಯಮಿ!
ಬಡತನದಲ್ಲೇ ಬೆಳೆದು ಹಂತಹಂತವಾಗಿ ಯಶಸ್ಸು ಕಂಡು ಇದೀಗ ಬೆಂಗಳೂರು, ಮುಂಬೈಯಂತಹ ಮಹಾನಗರಿಯಲ್ಲಿ ಬಹುದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡ ಅವರಿಗೆ ಕಷ್ಟ ಏನೆನ್ನುವದನ್ನು ಸ್ವತಃ ಅನುಭವಿಸಿದ್ದರಿಂದ ಕುಡಿಯುವ ನೀರಿಗಾಗಿ ಮೈಲುಗಟ್ಟಲೇ ಅಲೆಯುವ ತನ್ನೂರ ಮಹಿಳೆಯರ ಸಂಕಷ್ಟ ಮನಗಂಡ ಸಮಾಜಸೇವೆಗಾಗಿಯೇ ಆರಂಭಿಸಿದ ತಮ್ಮ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಬಿಜೂರಿನ ಎರಡು ವಾರ್ಡ್‌ಗಳ ನಿವಾಸಿಗಳಿಗೆ ದಿನನಿತ್ಯ ಉಚಿತವಾಗಿ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದ್ದಾರೆ. ಬಿಜೂರು ಗ್ರಾ.ಪಂ ವ್ಯಾಪ್ತಿಯ ಕಳಿಸಾಲು, ಗರಡಿ, ನಿಸರ್ಗಕೇರಿ, ದೂಮ್ಳಿಕೇರಿಯ ಸುಮಾರು 60ಕ್ಕೂ ಅಧಿಕ ಕುಟುಂಬಗಳಿಗೆ ಬೆಳಿಗ್ಗೆಯಿಂದ ಸಂಜೆ ತನಕವೂ ನಿರಂತರವಾಗಿ ಪ್ರತೀ ಮನೆಗಳಿಗೆ ಟ್ರಸ್ಟ್ ವಾಹನದಲ್ಲೇ ಹೋಗಿ ಕಳೆದೊಂದು ವಾರದಿಂದ ನೀರನ್ನು ಪೂರೈಸುತ್ತಿದ್ದಾರೆ. ತನ್ನೂರಿನ ಕಷ್ಟದ ಬಗ್ಗೆ ಹಲವು ಬಾರಿ ಕೇಳಿದ್ದ ಗೋವಿಂದ ಬಾಬು ಪೂಜಾರಿಯವರು ಲಾಕ್ ಡೌನ್ ದಿನದಿಂದ ಊರಿನಲ್ಲೇ ಇದ್ದು ಕಣ್ಣಾರೆ ಜನರ ಸಮಸ್ಯೆಯನ್ನು ಕಂಡಿದ್ದಾರೆ. ಹೇಗಾದರೂ ಮಾಡಿ ಈ ವರ್ಷವಾದರೂ ಕುಡಿಯುವ ನೀರಿಗೆ ವ್ಯವಸ್ಥೆ ಕಲಿಸಬೇಕೆಂದು ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲು ಕ್ರಮಕೈಗೊಂಡಿದ್ದಾರೆ.

ಹಲವು ದಶಕಗಳ ಸಮಸ್ಯೆ..!
ಅಂದಹಾಗೆ….ಬಿಜೂರು ಕುಡಿಯುವ ನೀರಿನ ಸಮಸ್ಯೆ ಹಲವು ದಶಕಗಳಿಂದಲೂ ಇದೆ. ಅನೇಕ ಶಾಸಕ, ಜನಪ್ರತಿನಿಧಿಗಳನ್ನು ಕಂಡರೂ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ಬಿಜೂರಿನ ಸುತ್ತಲೂ ಸುಮನಾವತಿ ನದಿ ತುಂಬಿ ಹರಿಯುತ್ತಿದ್ದು ಉಪ್ಪು ನೀರಿನಿಂದ ಪ್ರತೀ ಬೇಸಿಗೆಯಲ್ಲಿಯೂ ಕುಡಿಯುವ ನೀರಿಗೆ ತತ್ವಾರವಿದೆ. ಪಂಚಾಯಿತಿಯಿಂದ ನಳ್ಳಿ ಸಂಪರ್ಕ ಇದ್ದರೂ ಅವೈಜ್ಙಾನಿಕ ಪೈಪ್‌ಲೈನ್ ಕಾಮಗಾರಿಯಿಂದ ನಳ್ಳಿಯಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸದ ಜನಪ್ರತಿನಿಧಿಗಳ ವಿರುದ್ದ ತಿರುಗಿಬಿದ್ದ ಇಲ್ಲಿನ ನಿವಾಸಿಗಳು ಚುನಾವಣಾ ಬಹಿಷ್ಕಾರಕ್ಕೂ ಮುಂದಾಗಿದ್ದರು. ತಹಸೀಲ್ದಾರ್ ಭರವಸೆ ನೀಡಿ ಮನವೊಲಿಸಿದ ಬಳಿಕ ಬಹಿಷ್ಕಾರವನ್ನು ಹಿಂಪಡೆದಿದ್ದರು. ಆದರೆ ಚುನಾವಣೆ ಕಳೆದು ವರುಷಗಳಾದರೂ ಇಲ್ಲಿನ ಜನರ ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿದೆ.

ನಿತ್ಯ 10 ಸಾವಿರ ಖರ್ಚು…
ಗೋವಿಂದ ಬಾಬು ಪೂಜಾರಿಯವರ ಈ ಮಾನವೀಯ ಕೈಂಕರ್ಯಕ್ಕೆ ಊರಿನ ಯುವಕರ ತಂಡವು ಸಾಥ್ ನೀಡಿದೆ. ಈ ಮಳೆಗಾಲದ ಆರಂಭದವರೆಗೂ ನೀರು ಪೂರೈಸಲು ಸಿದ್ದತೆಯನ್ನೂ ಮಾಡಿಕೊಂಡಿದೆ. ಇನ್ನು ನೀರು ಪೂರೈಸುವ ಜವಾಬ್ದಾರಿಯನ್ನು ಹೊತ್ತ ಈ ತಂಡ ದಿನನಿತ್ಯವೂ ಪ್ರಾಮಾಣಿಕ ಸೇವೆ ನೀಡುತ್ತಿದೆ. ಮಾತ್ರವಲ್ಲದೇ ವಾಹನ ಡಿಸೇಲ್, ನೀರು, ಚಾಲಕ, ನಿರ್ವಾಹಕರ ಸಂಬಳವೂ ಸೇರಿದಂತೆ ಶುದ್ಧ ನೀರು ಪೂರೈಕೆಗೆ ದಿನನಿತ್ಯಕ್ಕೆ ಸುಮಾರು ಹತ್ತು ಸಾವಿರ ಹಣ ಖರ್ಚಾಗುತ್ತಿದೆ. ಗೋವಿಂದ ಬಾಬು ಪೂಜಾರಿಯವರ ಶೆಫ್ ಟಾಕ್ ಸಂಸ್ಥೆ ಮೂಲಕ ನಡೆಯುತ್ತಿರುವ ಟ್ರಸ್ಟ್ ಈ ಮೊತ್ತ ಭರಿಸುತ್ತಿದೆ.

ನೀರು ಮಾತ್ರವಲ್ಲ…600ಕ್ಕೂ ಅಧಿಕ ಕಿಟ್ ವಿತರಣೆ…
ತನ್ನೂರ ಜನರಿಗೆ ನೀರು ಪೂರೈಸುತ್ತಿರುವುದು ಮಾತ್ರವಲ್ಲದೇ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹಾಗೂ ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಎರಡು ಗ್ರಾಮಗಳ 600ಕ್ಕೂ ಅಧಿಕ ಕುಟುಂಬಗಳಿಗೆ ದಿನಸಿ ವಸ್ತುಗಳ ಕಿಟ್ ವಿತರಿಸಿದ್ದಾರೆ. ಅಲ್ಲದೇ ಆಶಾ ಕಾರ್ಯಕರ್ತೆಯರಿಗೆ, ಆಸ್ಪತ್ರೆಯ ದಾದಿಯರಿಗೆ ಅಗತ್ಯ ದಿನಸಿ ವಸ್ತುಗಳ ಕಿಟ್ ಹಾಗೂ ಆರ್ಥಿಕ ಸಹಾಯ ಮಾಡಿದ್ದಾರೆ.

ಒಟ್ಟಿನಲ್ಲಿ ಜನಪ್ರತಿನಿಧಿಗಳು, ಸರಕಾರ ಮಾಡಬೇಕಿದ್ದ ಕೆಲಸವನ್ನು ತನ್ನ ದುಡಿಮೆಯ ಉಳಿತಾಯದ ಹಣದಲ್ಲಿ ತನ್ನೂರಿಗಾಗಿ ವ್ಯಯಿಸಿ ಜನರ ಜಲ ಸಂಕಷ್ಟವನ್ನು ನೀಗಿಸುತ್ತಿರುವ ಗೋವಿಂದ ಬಾಬು ಪೂಜಾರಿಯವರ ಈ ಮಾನವೀಯ ಕಳಕಳಿ ನಿಜಕ್ಕೂ ಪ್ರಶಂಸನೀಯವಾದದ್ದು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.