ಉಡುಪಿ: ಗುರುವಾರ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿಯವರ ಕಛೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯದ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಇವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಕೋವಿಡ್ 19 ವೈರಸ್ ತಡೆಗಟ್ಟುವಿಕೆಯ ಬಗ್ಗೆ ಕೈಗೊಂಡ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಆರೋಪಿಗಳಿಗೆ ಜಾಮೀನು ಕೊಡಬಾರದೆಂಬ ವಿಚಾರ ಇದೆ ಆದ್ದರಿಂದ ಕೇಂದ್ರ ರಾಜ್ಯದ ಸುಗ್ರೀವಾಜ್ಞೆ ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಕೋವಿಡ್ 19 ನೋಡಲ್ ಅಧಿಕಾರಿಯಾದ ಪ್ರಶಾಂತ್ ಭಟ್ ಇವರು ಕೋವಿಡ್-19 ಬಗ್ಗೆ ಕೈಗೊಂಡ ಮುಂಜಾಗ್ರತ ಕ್ರಮ ಕ್ರಮಗಳ ಬಗ್ಗೆ ವಿವರಿಸಿದರು. ಇದರಲ್ಲಿ ವೈದ್ಯಕೀಯ ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ದತ್ತಾಂಶಗಳ ಬಗ್ಗೆ ವಿವರಣೆಯನ್ನು ನೀಡಿದರು. ಉಡುಪಿಯಲ್ಲಿ ಇಲ್ಲಿಯವರೆಗೆ 3105 ಜನರಿಗೆ ಕ್ವಾರಂಟೈನ್ ಮಾಡಲಾಗಿದ್ದು, ಪ್ರಸ್ತುತ 619 ಜನ ಕ್ವಾರಂಟೈನ್ ಅಲ್ಲಿರುತ್ತಾರೆ. ಹಾಗೂ 993 ಜನರಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಿರುವ ಬಗ್ಗೆ ವಿವರಣೆಯನ್ನು ನೀಡಿದರು. ಹಾಗೂ ಉಡುಪಿಯ ಟಿ.ಎಂ.ಎ ಪೈ ಆಸ್ಪತ್ರೆಯನ್ನು ಕೋವಿಡ್ 19 ಪಾಸಿಟಿವ್ ಎಂಬ ಆಸ್ಪತ್ರೆಯನ್ನಾಗಿ ಘೋಷಣೆ ಮಾಡಿದ್ದು, ನೂರು ಬೆಡ್ ಗಳ ವ್ಯವಸ್ಥೆ ಇರುವ ಬಗ್ಗೆ ಮಾಹಿಯನ್ನು ನೀಡಿದರು.
ನಂತರ ಮಾನ್ಯ ಉಸ್ತುವಾರಿ ಸಚಿವರು ಕೋವಿಡ್ 19 ಪಾಸಿಟಿವ್ ಇರುವ ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ಸೆಂಟ್ರಲೈಸಡ್ ಆಕ್ಸಿಜನ್ ಬೆಡ್ ಪೂರೈಸುವ ಬಗ್ಗೆ ಹಾಗೂ ಪಾಸಿಟಿವ್ ಬಂದ ಮೇಲೆ ಚಿಕಿತ್ಸೆಗೆ ಪ್ರತ್ಯೇಕ ಪ್ರೋಟೊಕಾಲ್ ಮಾಡಬೇಕು ಎಂಬುದಾಗಿ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಠ10 ಬೆಡ್ ಗಳಿರುವ ವಿಶೇಷ ವೈದ್ಯಕೀಯ ಸವಲತ್ತುಗಳನ್ನು ಪೂರೈಸುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡಿದರು. ಅಲ್ಲದೆ ಉತ್ತಮ ಕೋವಿಡ್ ಪಿ. ಪಿ ಕಿಟ್ ಗಳ ಬಗ್ಗೆ ಸಾಕಷ್ಟು ಸಂಗ್ರಹಣೆಯನ್ನು ಇರಿಸುವ ಬಗ್ಗೆ ಜಿಲ್ಲಾಡಳಿತಕ್ಕೆ ಸೂಚಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಟೆಸ್ಟಿಂಗ್ ಲ್ಯಾಬ್ ತೆರೆಯುವ ಬಗ್ಗೆ ಡಿ.ಎಚ್.ಓ ರವರಲ್ಲಿ ಕ್ರಮ ವಹಿಸುವಂತೆ ಸೂಚಿಸಿದರು.
ಉಡುಪಿ ಜಿಲ್ಲೆಯನ್ನು ಗ್ರೀನ್ ಜೋನ್ ಎಂದು ಘೋಷಣೆಯಾದ ಬಳಿಕ ರಾಜ್ಯ ಮಾರ್ಗಸೂಚಿಗಳನ್ನು ಅನುಸಾರವಾಗಿ ಜಿಲ್ಲಾಡಳಿತವು ಕ್ರಮ ತೆಗೆದುಕೊಳ್ಳಬೇಕು ಎಂದರು. ನಂತರ ಐಎಂಎ ಪ್ರತಿನಿಧಿಯನ್ನು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿದರು. ಮಣಿಪಾಲ ಟಿಎಂಎ ಪೈ ಆಸ್ಪತ್ರೆ ರಾಜ್ಯದ ಪ್ರಥಮ ಕೋವಿಡ್ ಆಸ್ಪತ್ರೆಯಾಗಿ ಘೋಷಣೆಯಾಗಿದ್ದು ಸದ್ರಿ ಆಡಳಿತ ಮಂಡಳಿಯವರಿಗೆ ವಿಶೇಷವಾದ ಧನ್ಯವಾದಗಳನ್ನು ತಿಳಿಸಿರುತ್ತಾರೆ. ಹಾಗೂ ಅಲ್ಲಿನ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಗಳ ಕರ್ತವ್ಯಕ್ಕೆ ವಿಶೇಷವಾದ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಕೆಎಂಸಿ ವೈದ್ಯಕೀಯ ಅಧೀಕ್ಷಕರು ಮಾತನಾಡಿ ವೈದ್ಯಕೀಯ ಸೌಲಭ್ಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ನಂತರ ಸಭೆಯಲ್ಲಿ ಉಪಸ್ಥಿತರಿದ್ದ ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳನ್ನು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಲಾಕ್ಡೌನ್ ಸಡಿಲಿಕೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಸ್ತುವಾರಿ ಸಚಿವ ರಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅದರಲ್ಲಿ ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಇವರು ಮೇ ಮೂರರ ನಂತರ ನಗರ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟಲು ಕಾರ್ಮಿಕರಿಗೆ ಅವಕಾಶಮಾಡಿಕೊಡುವ ಹಾಗೂ ಬೀಡಿ ಕಾರ್ಮಿಕರಿಗೆ ತಮ್ಮ ಜೀವನದ ಉದ್ಯೋಗವನ್ನು ಮುಂದುವರೆಸಲು ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಇನ್ನಿತರ ಮೂಲಾಧಾರ ಉದ್ಯೋಗವನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆಸಲು ಅವಕಾಶ ನೀಡಬೇಕೆಂದು ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡರು
ಈ ಸಭೆಯಲ್ಲಿ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಶಾಸಕರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮಂಗಳೂರಿನ ಪಶ್ಚಿಮ ವಲಯದ ಪೋಲಿಸ್ ಇನ್ಸ್‌ಪೆಕ್ಟರ್ ಜನರಲ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.