ಆರೋಗ್ಯ

ಪಾದಗಳ ನೋವಿಗೆ ಸೂಕ್ತ ಕಾರಣಗಳ ಮಾಹಿತಿ ಇಲ್ಲಿದೆ.?

Pinterest LinkedIn Tumblr

ನಿಮ್ಮ ಪಾದಗಳು ಆಗಾಗ್ಗೆ ನೋಯುತ್ತವೆಯೇ? ಇದಕ್ಕೆ ನಡಿಗೆ ಕಾರಣವೆಂದು ನೀವು ನಂಬಿರಬಹುದು. ಆದರೆ ಅದೊಂದೇ ಪಾದಗಳಲ್ಲಿ ನೋವಿಗೆ ಕಾರಣವಲ್ಲ,ಇತರ ಸುಪ್ತ ಕಾರಣಗಳೂ ಇವೆ. ಪಾದಗಳ ನೋವು ಸಾಮಾನ್ಯ ನಿಜ,ಆದರೆ ಕೆಲವೊಮ್ಮೆ ಈ ನೋವಿಗೆ ಕಾರಣ ಅಷ್ಟೊಂದು ಸಾಮಾನ್ಯವಾಗಿರುವುದಿಲ್ಲ. ಪಾದಗಳಲ್ಲಿ ನೋವಿಗೆ ಸಂಭಾವ್ಯ ಕಾರಣಗಳ ಮಾಹಿತಿಯಿಲ್ಲಿದೆ.

* ಸೂಕ್ತವಲ್ಲದ ಪಾದರಕ್ಷೆಗಳನ್ನು ಧರಿಸುವುದು
ಪಾದಗಳು ಮತ್ತು ಕಾಲುಗಳಲ್ಲಿ ಹೆಚ್ಚಿನ ಸಮಸ್ಯೆಗಳಿಗೆ ಸೂಕ್ತವಾಗಿ ಹೊಂದಿಕೊಳ್ಳದ ಪಾದರಕ್ಷೆ ಪ್ರಮುಖ ಕಾರಣವಾಗಿದೆ,ಹೀಗಾಗಿ ಸರಿಯಾದ ಅಳತೆಯ ಪಾದರಕ್ಷೆಯನ್ನು ಧರಿಸುವುದು ಅತ್ಯಂತ ಮುಖ್ಯವಾಗಿದೆ. ಕಣಕಾಲು ನೋವಿನಿಂದ ಹಿಡಿದು ಪಾದಗಳ ಊತದವರೆಗೆ ಎಲ್ಲ ಸಮಸ್ಯೆಗಳಿಗೆ ಅಸಮರ್ಪಕ ಪಾದರಕ್ಷೆ ನಾಂದಿ ಹಾಡುತ್ತದೆ. ನೀವು ಬಿಗಿಯಾದ ಶೂಗಳನ್ನು ಧರಿಸಿದಾಗ ನಿಮ್ಮ ಕಾಲ್ಬೆರಳುಗಳು ಅದನ್ನು ಘರ್ಷಿಸುತ್ತಿರುತ್ತವೆ ಮತ್ತು ಇದು ನೋವಿಗೆ ಕಾರಣವಾಗುತ್ತದೆ. ಸಡಿಲವಾದ ಶೂಗಳನ್ನು ಧರಿಸಿದರೆ ನಡೆಯುವುದೇ ಕಷ್ಟವಾಗುತ್ತದೆ. ಹೀಗಾಗಿ ಪಾದರಕ್ಷೆಗಳು ಸರಿಯಾದ ಗಾತ್ರದಲ್ಲಿರಬೇಕು.

* ತೂಕ ಗಳಿಕೆ ಅಥವಾ ತೂಕ ನಷ್ಟ
ಇದು ಕೆಲವರಿಗೆ ಅಚ್ಚರಿಯನ್ನುಂಟು ಮಾಡಬಹುದು,ಆದರೆ ಶರೀರದ ತೂಕದಲ್ಲಿ ಏರಿಳಿತಗಳು ಪಾದಗಳ ಮೇಲೂ ಪರಿಣಾಮವನ್ನುಂಟು ಮಾಡುತ್ತವೆ. ಶರೀರದ ತೂಕ ಹೆಚ್ಚಿದಾಗ ಅಥವಾ ಕಡಿಮೆಯಾದಾಗ ಸ್ನಾಯುಗಳ ಆಕುಂಚನ ಅಥವಾ ಸಂಕುಚನ ಇದಕ್ಕೆ ಕಾರಣ. ನಿಮ್ಮ ಕಾಲುಗಳು ಮತ್ತು ಪಾದಗಳಲ್ಲಿಯ ಸ್ನಾಯುಗಳು ಸಹ ಸಂಕುಚನ ಅಥವಾ ಆಕುಂಚನಗೊಳ್ಳುತ್ತವೆ ಮತ್ತು ಇದರಿಂದಾಗಿ ಹಳೆಯ ಶೂಗಳು ಪಾದಕ್ಕೆ ಹೊಂದಾಣಿಕೆಯಾಗದೆ ನೋವನ್ನುಂಟು ಮಾಡಬಹುದು.

* ಮಧುಮೇಹ
ನಿಮಗೆ ಆಗಾಗ್ಗೆ ಪಾದಗಳ ನೋವು ಕಾಡುತ್ತಿದ್ದರೆ ಮಧುಮೇಹ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟವು ನರದ ಹಾನಿಯಿಂದಾಗಿ ಶರೀರದ ಕೆಲವು ಭಾಗಗಳ ಮೇಲೆ ಋಣಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ಆಗಾಗ್ಗೆ ಪಾದಗಳು ನೋಯುತ್ತಿದ್ದರೆ ಕಡೆಗಣಿಸದೆ ವೈದ್ಯರ ಸಲಹೆ ಪಡೆದುಕೊಳ್ಳಿ.

* ಪಾದಗಳಿಗೆ ವ್ಯಾಯಾಮ
ಇಡೀ ಶರೀರದ ವ್ಯಾಯಾಮದಂತೆ ಪಾದಗಳಿಗೂ ವ್ಯಾಯಾಮ ನೀಡುವುದು ಮುಖ್ಯ. ಪಾದಗಳಲ್ಲಿ ನೋವು ನಿವಾರಿಸಲು ಅವುಗಳನ್ನು ಚಾಚುವ ವ್ಯಾಯಾಮ ಮಾಡಿದರೆ ಸಾಕು. ನೀವು ನಿಯಮಿತವಾಗಿ ಪಾದಗಳಿಗೆ ವ್ಯಾಯಾಮ ನೀಡದಿದ್ದರೆ ‘ಪ್ಲಾಂಟರ್ ಫ್ಯಾಸಿಟಿಸ್’ ಅಥವಾ ಅಂಗಾಂಶ ಉರಿಯೂತದ ಅಪಾಯವನ್ನು ಆಹ್ವಾನಿಸುತ್ತಿದ್ದೀರಿ ಎಂದೇ ಅರ್ಥ.

* ಚಪ್ಪಟೆ ಪಾದಗಳು
ಫ್ಲಾಟ್ ಫೀಟ್ ಅಥವಾ ಚಪ್ಪಟೆ ಪಾದಗಳೊಂದಿಗೆ ಜನಿಸಿದವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದೇ ರೀತಿ ಅಂಗಾಲುಗಳು ಒಳಗೆ ಹೆಚ್ಚು ಬಾಗಿರುವ ಪಾದಗಳಿರುವವರೂ ನೋವು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಗುರಿಯಾಗಿರುತ್ತಾರೆ. ಈ ಎರಡೂ ಪ್ರಕರಣಗಳಲ್ಲಿ ಕಣಕಾಲುಗಳ ಲಿಗಾಮೆಂಟ್ ಅಥವಾ ಅಸ್ಥಿರಜ್ಜು ಎಳೆತಕ್ಕೊಳಗಾಗುತ್ತದೆ ಮತ್ತು ನೋವನ್ನುಂಟು ಮಾಡುತ್ತದೆ.

* ಹೈಹೀಲ್ಡ್ ಪಾದರಕ್ಷೆಗಳ ಹೆಚ್ಚು ಬಳಕೆ
ಹೈಹೀಲ್ಡ್ ಪಾದರಕ್ಷೆಗಳನ್ನು ಪ್ರತಿದಿನ ಧರಿಸುವುದರಿಂದ ನೋವು,ಬಿಗಿತ ಮತ್ತು ಉರಿಯೂತ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ವೈದ್ಯರು ಹೇಳುವಂತೆ 2.5 ಇಂಚಿಗೂ ಎತ್ತರದ ಹೈಹೀಲ್ಡ್‌ಗಳನ್ನು ಧರಿಸುವುದು ಪಾದಗಳ ಮೇಲೆ ಏಳು ಪಟ್ಟು ಹೆಚ್ಚುವರಿ ಒತ್ತಡಕ್ಕೆ ಕಾರಣವಾಗುತ್ತದೆ.

* ನಿಂತು ಮಾಡುವ ಕೆಲಸ
ಪ್ರತಿದಿನ 10 ಗಂಟೆಗಳಿಗೂ ಹೆಚ್ಚಿನ ಸಮಯ ನಿಂತೇ ಇರುವ ಅನಿವಾರ್ಯತೆಯು ಪಾದಗಳ ನೋವಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಹೆಚ್ಚಿನ ಸಮಯ ನೀವು ನಿಂತೇ ಕೆಲಸ ಮಾಡುವ ಅನಿವಾರ್ಯತೆಯಿದ್ದರೆ ಹಾನಿಯನ್ನು ಕನಿಷ್ಠಗೊಳಿಸಲು ನಿಮ್ಮ ಪಾದಗಳು ಮತ್ತು ಕಾಲುಗಳಿಗೆ ನಿಯಮಿತವಾಗಿ ವ್ಯಾಯಾಮವನ್ನು ಮಾಡಿಸಬೇಕಾಗುತ್ತದೆ.

Comments are closed.