ಆರೋಗ್ಯ

ಮೀನಿನ ಯಾವ ಬಾಗದಲ್ಲಿ ಎಷ್ಟೊಂದು ಪೌಷ್ಟಿಕಾಂಶವಿದೆ ತಿಳಿಯಿರಿ.

Pinterest LinkedIn Tumblr

ನೀವು ಮೀನು ತಿನ್ನುವುದನ್ನು ಇಷ್ಟ ಪಡುತ್ತೀರಾ? ಹಾಗಿದ್ದರೆ ಮೀನು ಎಷ್ಟೊಂದು ಪೌಷ್ಟಿಕ ಆಹಾರ ಎನ್ನುವುದು ನಿಮಗೆ ಗೊತ್ತಿರಲೇಬೇಕು. ಸಾಮಾನ್ಯವಾಗಿ ಹೆಚ್ಚಿನವರು ಮೀನಿನ ದೇಹದ ಭಾಗವನ್ನು ತಿಂದು ತಲೆಯನ್ನು ಎಸೆಯುತ್ತಾರೆ. ವಾಸ್ತವದಲ್ಲಿ ಮೀನಿನ ದೇಹಕ್ಕಿಂತ ತಲೆಯು ಹೆಚ್ಚು ಪೌಷ್ಟಿಕವಾಗಿದೆ. ಮೀನಿನ ತಲೆಯು ಹಲವಾರು ವಿಟಾಮಿನ್‌ಗಳು,ಖನಿಜಗಳು ಮತ್ತು ಆರೋಗ್ಯಕರ ಕೊಬ್ಬನ್ನು ಒಳಗೊಂಡಿರುವುದರಿಂದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯ ಆಹಾರಗಳಲ್ಲೊಂದಾಗಿದೆ. ಮೀನಿನ ತಲೆಯ ಸೇವನೆಯು ಹಲವಾರು ಮಾರಣಾಂತಿಕ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಮೀನಿನ ತಲೆಯು ನೀಡುವ ಕೆಲವು ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ……

ಆರೋಗ್ಯಕರ ಪ್ರೋಟಿನ್‌ಗಳು
ಮೀನಿನ ತಲೆಯು ಆರೋಗ್ಯಕರ ಪ್ರೋಟಿನ್‌ಗಳ ಅತ್ಯುತ್ತಮ ಮೂಲವಾಗಿದೆ. ಮೀನಿನ ತಲೆಯಲ್ಲಿ ಸ್ಯಾಚ್ಯುರೇಟೆಡ್ ಫ್ಯಾಟ್ ಅಥವಾ ಪರಿಷ್ಕೃತ ಕೊಬ್ಬು ಇತರ ಎಲ್ಲ ಮಾಂಸ ಉತ್ಪನ್ನಗಳಿಗಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಅದನ್ನು ತಿನ್ನುವುದರಿಂದ ಕೊಲೆಸ್ಟ್ರಾಲ ಮಟ್ಟ ಹೆಚ್ಚುವುದಿಲ್ಲ. ನೀವು ಕೆಂಪು ಮಾಂಸದ ಬದಲಾಗಿ ಮೀನನ್ನು ಸೇವಿಸುತ್ತಿದ್ದರೆ ಹೃದಯಾಘಾತ ಅಥವಾ ಪಾರ್ಶ್ವವಾಯುಗಳಂತಹ ಹೃದಯನಾಳೀಯ ರೋಗಗಳಿಗೆ ತುತ್ತಾಗುವ ಅಪಾಯ ತೀರ ಕಡಿಮೆಯಾಗುತ್ತದೆ.

ಒಮೇಗಾ 3 ಫ್ಯಾಟಿ ಆಯಸಿಡ್‌ಗಳ ಉತ್ತಮ ಮೂಲ
ಮೀನಿನ ದೇಹಕ್ಕೆ ಹೋಲಿಸಿದರೆ ಅದರ ತಲೆಯಲ್ಲಿ ಒಮೇಗಾ 3 ಫ್ಯಾಟಿ ಆಯಸಿಡ್‌ಗಳು ಅಥವಾ ಮೇದಾಮ್ಲಗಳು ಗಣನೀಯ ಪ್ರಮಾಣದಲ್ಲಿರುತ್ತವೆ. ಒಮೇಗಾ 3 ಮೇದಾಮ್ಲಗಳು ಹೃದ್ರೋಗಗಳ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ಒಮೇಗಾ 3 ಮೇದಾಮ್ಲಗಳನ್ನು ಒಳಗೊಂಡಿರುವ ಆಹಾರಗಳು ನಮ್ಮ ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ತಗ್ಗಿಸುತ್ತವೆ.

ಕಣ್ಣು ಮತ್ತು ಮಿದುಳಿಗೆ ಒಳ್ಳೆಯದು
ಮೀನಿನ ತಲೆ ಮತ್ತು ಮಿದುಳಿನ ಭಾಗದಲ್ಲಿ ವಿಟಾಮಿನ್ ಎ ಗಣನೀಯ ಪ್ರಮಾಣದಲ್ಲಿರುತ್ತದೆ. ವಿಟಾಮಿನ್ ಎ ಸೇವನೆ ನಮ್ಮ ಕಣ್ಣುಗಳು ಮತ್ತು ಮಿದುಳಿನ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ವಿಟಾಮಿನ್ ಎ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲದವರೆಗೆ ಕಣ್ಣುಗಳನ್ನು ಆರೋಗ್ಯಯುತವಾಗಿರಿಸುತ್ತದೆ. ಅದು ದೇಹದ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿರುವ ವಿಟಾಮಿನ್ ಎ ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ ಮತ್ತು ಉತ್ಕರ್ಷಣ ಒತ್ತಡವನ್ನು ನಿವಾರಿಸುತ್ತದೆ.

ಒತ್ತಡ ಮತ್ತು ಮಾನಸಿಕ ಆರೋಗ್ಯ
ಒಮೇಗಾ 3 ಮೇದಾಮ್ಲಗಳು ಮತ್ತು ಡೊಕೊಸಾಹೆಕ್ಸಾನೊಯಿಕ್ ಆಯಸಿಡ್ (ಸಿಎಚ್‌ಎ)ಗಳನ್ನು ಒಳಗೊಂಡಿರುವ ಆಹಾರಗಳು ಮಿದುಳನ್ನು ಆರೋಗ್ಯಯುತವಾಗಿರಿಸುತ್ತವೆ ಮತ್ತು ಒತ್ತಡ,ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳ ವಿರುದ್ಧ ರಕ್ಷಣೆಯನ್ನು ನೀಡುತ್ತವೆ ಎನ್ನುವುದನ್ನು ಸಂಶೋಧನೆಯು ತೋರಿಸಿದೆ. ಒಮೇಗಾ 3 ಮೇದಾಮ್ಲಗಳನ್ನು ನಮ್ಮ ಶರೀರವು ತಯಾರಿಸುವುದಿಲ್ಲ,ಹೀಗಾಗಿ ಅವುಗಳನ್ನು ಆಹಾರದ ಮೂಲಕವೇ ಪಡೆಯಬೇಕಾಗುತ್ತದೆ. ಮೀನಿನ ತಲೆಯು ಸಾಕಷ್ಟು ಒಮೇಗಾ ಆಮ್ಲಗಳನ್ನು ಒಳಗೊಂಡಿದೆ.

ಮಧುಮೇಹ ಮತ್ತು ಸಂಧಿವಾತ
ಮೀನಿನ ತಲೆಯಲ್ಲಿ ಹಲವಾರು ಪೌಷ್ಟಿಕಾಂಶಗಳಿರುವುದರಿಂದ ಅದು ಮಧುಮೇಹ ಮತ್ತು ಸಂಧಿವಾತ ರೋಗಿಗಳಿಗೂ ಒಳ್ಳೆಯದು. ಅದರ ಸೇವನೆ ಶರೀರದ ಚಯಾಪಚಯವನ್ನು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೀನಿನ ತಲೆಯನ್ನು ತಿನ್ನುವುದರಿಂದ ಸ್ವರಕ್ಷಿತ ರೋಗಗಳ ಅಪಾಯವೂ ಕಡಿಮೆಯಾಗುತ್ತದೆ.

Comments are closed.