ಕಹಿ ಸಂಜೀವಿನಿ ಎಂದೇ ಚಿರಪರಿಚಿತವಾದ ಬೇವು ನಮ್ಮ ದೇಶದ ಎಲ್ಲ ಕಡೆಯೂ ಕಂಡುಬರುತ್ತದೆ. ಸಂಸ್ಕೃತದಲ್ಲಿ ಬೇವನ್ನು `ಅರಿಷ್ಠ~ ಎಂದು ಕರೆಯುತ್ತಾರೆ. ಅರಿಷ್ಠ ಎಂದರೆ ರೋಗದಿಂದ ಬಿಡುಗಡೆ ಎಂದರ್ಥ.
ಬೇವು ಬಹೂಪಯೋಗಿ ಮರ. ಈ ಮರ ಅತ್ಯಧಿಕ ಪ್ರಮಾಣದಲ್ಲಿ ಔಷಧಿಗೆ ಬಳಕೆಯಾಗುತ್ತದೆ. ಬೇವಿನ ಮರದ ಗಾಳಿಯನ್ನು ಸೇವಿಸುವುದರಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕೆಲವು ಕಾಯಿಲೆಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ಈ ಮರದ ತೊಗಟೆ, ಗೋಂದು, ಎಲೆ, ಹೂವು, ಚಿಗುರು, ಬೀಜದ ಎಣ್ಣೆ, ಹಿಂಡಿಯಂತಹ ಎಲ್ಲ ಭಾಗಗಳೂ ಒಂದಲ್ಲ ಒಂದು ಉಪಯೋಗಕ್ಕೆ ಬರುತ್ತವೆ.
ಬೇವಿನ ಎಲೆ: ಬೇವಿನ ಚಿಗುರನ್ನು ಇತರ ತರಕಾರಿಗಳ ಜೊತೆ ಬೇಯಿಸಿ ತಿನ್ನುವುದರಿಂದ ಸಿಡುಬು ರೋಗವನ್ನು ತಡೆಗಟ್ಟಬಹುದೆಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಏಕೆಂದರೆ ಬೇವಿನಲ್ಲಿ ಇರುವ ಅಲ್ಕಲಾಯ್ಡ ಎಂಬ ರಾಸಾಯನಿಕವು ಸಿಡುಬು ರೋಗ ಹರಡುವ ಸೂಕ್ಷ್ಮ ಜೀವಿಗಳಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಅಲ್ಲದೆ ಬೇವಿನ ಎಲೆಗಳನ್ನು ಬಿಸಿ ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಹಲವಾರು ಚರ್ಮರೋಗಗಳನ್ನು ತಡೆಗಟ್ಟಬಹುದು.