ಆರೋಗ್ಯ

ವಾಯುಬಾಧೆಯಂತಹ ಅನೇಕ ತೊಂದರೆಗಳು ಆಡಿನ ಹಾಲಿನ ನಿತ್ಯ ಬಳಕೆಯಿಂದ ದೂರ

Pinterest LinkedIn Tumblr

ಆಡುಮುಟ್ಟದ ಸೊಪಿಲ್ಲ…ಇಳೆಯ ಕಸವನೆಲ್ಲ ಮೇದು ಕಸುವು ನೀಡುವ ಹಾಲಿಯುವ, ಸರಿಸುಮಾರು ಹತ್ತು ಸಾವಿರ ವರ್ಷಗಳ ಪುರಾತನ ಸಾಕು ಪ್ರಾಣಿ ಆಡು. ಭಾರತದ ಪುರಾತನ ಶಿಶುರಕ್ಷಣಾ ಗ್ರಂಥ ಕಾಶಪ್ಯ ಸಂಹಿತೆ ಪ್ರಕಾರ ಮಗುವಿಗೆ ತಾಯಿಯ ಹಾಲು ದೊರಕದಿದ್ದರೆ ದಾಯಿಯ ಹಾಲು, ಅದೂ ಲಭಿಸದಿದ್ದರೆ ಆಡಿನ ಹಾಲನ್ನು ಸೂಚಿಸಲಾಗಿದೆ. ಹೊಟ್ಟೆಯ ತೊಂದರೆ, ಕೆಮ್ಮು, ದಮ್ಮು, ಕ್ಷಯ, ಮತ್ತು ಕ್ಯಾನ್ಸರ್‍ನಂತಹ ವ್ಯಾಧಿಗಳಿಗೆ ಆಡಿನ ಹಾಲು ಪಥ್ಯತಮ ಎನ್ನುವರು.

ಆಡಿನ ಹಾಲು ಅತ್ಯಂತ ಲಘು ಅಂದರೆ ಬೇಗನೆ ಜೀರ್ಣವಾಗುತ್ತದೆ. ಹಾಲುಣಿಸುವ ಮಾತೆಯರಿಗೆ ಹಾಲು ಹೆಚ್ಚಿಸಲು ಆಡಿನ ಹಾಲಿನ ಸೇವನೆ ಅತಿ ಉತ್ತಮ.

ರಕ್ತಸ್ರಾವ, ದುರ್ಬಲ ಅಗ್ನಿಯವರಿಗೆ, ಕೃಶರಿಗೆ ಆಡಿನ ಹಾಲು ಯೋಗ್ಯ. ಅತಿಮೂತ್ರ ಸಂಗ್ರಾಹಿ ಮದ್ದು ಸೋಮನಾಥ ರಸ, ಮೆದುಳಿನ ಪ್ರಕ್ರಿಯೆ ಹೆಚ್ಚಿಸಲು ಬಳಸುವ ಸಾರಸ್ವತಘೃತ. ನೋವು ಪರಿಹಾರಿ ಪಿಂಡತೈಲ, ಮುಖಕಾಂತಿ ವರ್ಧಕ, ಕುಂಕುಮಾದಿ ತೈಲಗಳಲ್ಲಿ ಆಡಿನ ಹಾಲು ಅತ್ಯಗತ್ಯ. ವಿಶ್ವದ ಹಾಲು ಉತ್ಪನ್ನದ ಶೇಕಡ ಎರಡರಷ್ಟು ಹಾಲು ಆಡಿನ ಹಾಲಿನದು.

ಪ್ರತಿ 100 ಗ್ರಾಂ ಆಡಿನ ಹಾಲಿನಲ್ಲಿರುವ ತಲಾ ಗಾಂ ಲೆಕ್ಕದಲ್ಲಿ ಇರುವ ಪೋಷಕಾಂಶಗಳು : ನೀರಂಶ-ಶೇ.84, ಸಸಾರಜನಕ-ಶೇ.3.1, ಕೊಬ್ಬು-ಶೇ.3.9, ಶರ್ಕರ ಪಿಷ್ಟ-ಶೇ.4.8, ಸಕ್ಕರೆ ಅಥವಾ ಲ್ಯಾಕ್ಟೋಸ್-ಶೇ.4.4, ಕ್ಯಾಲ್ಷಿಯಂ-ಶೇ.100 ಹಾಗೂ ಕಿಲೋ ಕ್ಯಾಲರಿ-60.

ಹಸುವಿನ ಹಾಲು ಅಮೃತ ಎಂಬ ನಂಬಿಕೆ ಇದೆ. ಆದರೆ ಆಯುರ್ವೇದ ಗ್ರಂಥಗಳು ಹಸುವಿನ ಹಾಲು ಅಮೃತ, ಆದರೆ ಕರುವಿಗೆ ಹೊರತು ಮನುಷ್ಯರಿಗಲ್ಲ ಎನ್ನುತ್ತವೆ. ವೈದ್ಯಲೋಕದ ವಿಜ್ಞಾನ ಹಸುವಿನ ಹಾಲಿಗಿಂತ ಆಡಿನ ಹಾಲು ಬಲು ಶ್ರೇಷ್ಠವಾದುದು ಎಂದು ಹೇಳಿವೆ. ಮಹಾತ್ಮಗಾಂಧಿ ಕೂಡ ಅದನ್ನೇ ಬಳಸುತ್ತಿದ್ದರು. ಹಸುವಿನ ಹಾಲು ಅನೇಕರ ಪಾಲಿಗೆ ಒಗ್ಗದ ಆಹಾರವಾಗುತ್ತಿದೆ. ಕಾರಣ ಅದರಲ್ಲಿರುವ ಸಕ್ಕರೆಯ ಲ್ಯಾಕ್ಟೋಸ್ ಅಂಶ ಜೀರ್ಣವಾಗುವುದಿಲ್ಲ. ಆದರೆ ಅಡಿನ ಹಾಲಿನ ಲ್ಯಾಕ್ಟೋಸ್ ಬಹು ಸುಲಭವಾಗಿ ಜೀರ್ಣವಾಗುತ್ತದೆ.

ಆಡಿನ ಹಾಲು ಎಲ್ಲ ವಯಸ್ಸಿನವರಿಗೂ ಆರೋಗ್ಯಕ್ಕೆ ಸಹಕಾರಿ. ಅದರಲ್ಲಿರುವ ಸುಣ್ಣದ ಅಂಶ ಮೂಳೆಗಳಿಗೆ ಸಂಬಂಧಿಸಿದ ಅಸ್ಪಿಯೋಪೊರೊಸಿಸ್ ಸಮಸ್ಯೆಯ ವಿರುದ್ಧ ಸೆಣಸಲು ಶಕ್ತವಾಗಿದೆ. ಜೊತೆಗಿರುವ ಕೊಬ್ಬು ದೇಹದ ತೂಕವನ್ನು ನಿಯಂತ್ರಿಸುತ್ತದೆ. ರಕ್ತದ ಒತ್ತಡ ನಿಯಮಿತಗೊಳಿಸಬಲ್ಲ ಪೊಟಾಷಿಯಂ ಸಹ ಇದೆ. ಇದರಿಂದ ತಯಾರಿಸುವ ಮೊಸರು ರಕ್ತದೊತ್ತಡ ನಿಯಂತ್ರಣದಲ್ಲಿಯೂ ಸಮರ್ಥವಾಗಿದೆ. ನಮ್ಮ ದೇಹದ ಜೀರ್ಣಾಂಗದ ಆರೋಗ್ಯಕ್ಕೂ ಸಹಕಾರಿ. ಕರುಳಿನಲ್ಲಿ ಆಮ್ಲಿಯತೆ ಉಂಟು ಮಾಡುವುದಿಲ್ಲ. ರಕ್ತಕ್ಕೆ ಬೇಗನೆ ಸೇರುತ್ತದೆ. ವಾಂತಿ, ಉದರಶೂಲೆ, ಅತಿಸಾರ, ಮಲಬದ್ಧತೆ, ವೃಣಗಳು, ಊಟವಾದ ಬಳಿಕೆ ಉಂಟಾಗುವ ಜಠರದ ಸಮಸ್ಯೆಗಳು, ಗ್ಯಾಸ್ಟ್ರಿಕ್, ವಾಯುಬಾಧೆ ಮುಂತಾದ ಅನೇಕ ತೊಂದರೆಗಳು ಆಡಿನ ಹಾಲಿನ ನಿತ್ಯ ಬಳಕೆಯಿಂದ ದೂರವಾಗುತ್ತವೆ.

ಎಳೆಯ ಮಕ್ಕಳಿಗೆ ಅನಿವಾರ್ಯವಾದಾಗ ಹಸುವಿನ ಹಾಲಿಗಿಂತ ಆಡಿನ ಹಾಲು ಕುಡಿಸುವುದು ಉತ್ತಮ ಎನ್ನಲಾಗಿದೆ. ಅದು ಊಟದಷ್ಟೇ ಪೂರ್ಣ ಆಹಾರ ಎನಿಸುತ್ತದೆ. ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಮತ್ತು ಬಿಳಿ ಕಣಗಳನ್ನು ವೃದ್ಧಿಸುತ್ತದೆ. ಉಸಿರಾಟದ ಸಮಸ್ಯೆ ಇರುವವರಿಗೂ ಅದು ಉತ್ತಮ ಪಥ್ಯಾಹಾರ. ಕರುಳಿನಲ್ಲಿರುವ ಆತಂಕಕಾರಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ಪ್ರಯೋಜನಕರವಾದ ಸೂಕ್ಷ್ಮಾಣುಗಳನ್ನು ಹೆಚ್ಚಿಸುವ ಕೊಬ್ಬಿನಾಮ್ಲಗಳು ಅದರಿಂದ ಲಭಿಸುತ್ತದೆ.

ದೈನಂದಿನ ಅಗತ್ಯಕ್ಕೆ ಬೇಕಾದಷ್ಟು ಆಯೋಡಿನ್ ಅದರಲ್ಲಿರುವುದರಿಂದ ಥೈರಾಯ್ಡ್ ಗ್ರಂಥಿಯನ್ನು ಸುಸ್ಥಿತಿಯಲ್ಲಿಡುತ್ತದೆ. ಬಿ ವರ್ಗದ 5 ಜೀವಸತ್ವಗಳು ಸೇರಿ 8 ಜೀವಸತ್ವಗಳು ಕೂಡಿವೆ. ಡಿ ಜೀವಸತ್ವವೂ ಇದ್ದು, ಅದು ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಪಿತ್ತಕೋಶದ ಕಲ್ಲು, ಅಪಸ್ಮಾರ, ಫೈಬ್ರೋಸಿಸ್ ಇದನ್ನೆಲ್ಲ ನಿವಾರಿಸಲು ಆಡಿನ ಹಾಲು ಸಮರ್ಥವಾಗಿದೆ. ಹಾರ್ಮೋನುಗಳ ಬೆಳವಣಿಗೆಗೂ ಅದು ಸಹಕಾರಿಯಾಗುತ್ತದೆ.
ಮಾರುಕಟ್ಟೆಯಲ್ಲಿ ಲಭಿಸುವ ಹಸುವಿನ ಪ್ಯಾಕೆಟ್ ಹಾಲಿನಿಂದ ಕೆನೆಯನ್ನು ಬೇರ್ಪಡಿಸಿದ್ದು ಪೋಷಕವಲ್ಲದ ಹಾಲನ್ನು ನಾವು ಬಳಸುತ್ತೇವೆ. ಆಡಿನ ಹಾಲಿನಲ್ಲಿ ಕೊಬ್ಬು ಸೂಕ್ಷ್ಮವಾದ ಗುಳಿಗೆಗಳ ರೂಪದಲ್ಲಿ ಬೆರೆತಿರುವುದರಿಂದ ಆದರಿಂದ ಕೊಬ್ಬನ್ನು ಬೇರ್ಪಡಿಸಲು ಸಾಧ್ಯವಿಲ್ಲ. ರೋಗ ನಿರೋಧಕ ಶಕ್ತಿಯನ್ನು ಅಧಿಕಗೊಳಿಸುವ ಆಡಿನ ಹಾಲು ಕೊಂಚ ಒಗ್ಗದ ವಾಸನೆಯಿದ್ದರೂ ಆಡು ಎಲ್ಲ ಗಿಡಗಳನ್ನು ತಿನ್ನುವ ಕಾರಣ ಅದೊಂದು ವನ ಔಷಧಿ ಎಂಬುದು ದೃಢಪಟ್ಟಿದೆ.

ಡೆಂಘೀ ನಿವಾರಕ ಆಡಿನ ಹಾಲು:
ಡೆಂಘೀ ಹಾವಳಿಯಿಂದ ತತ್ತರಿಸುತ್ತಿರುವ ರಾಜಧಾನಿ ದೆಹಲಿಯಲ್ಲಿ ಆಡಿನ ಹಾಲಿಗೆ ಈಗ ಭಾರೀ ಬೇಡಿಕೆ. ಇದು ಮಾರಕ ಡೆಂಘಿ ರೋಗ ನಿವಾರಣೆಗೆ ರಾಮಬಾಣ ಎಂಬ ಸುದ್ದಿ ಹಬ್ಬಿದ್ದೇ ತಡ ಜನ ಇದನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಇದರ ಪರಿಣಾಮವಾಗಿ ಲೀಟರ್‍ಗೆ 40 ರೂ.ಗೆ ಲಭಿಸುತ್ತಿದ್ದ ಮೇಕೆ ಹಾಲಿನ ಬೆಲೆ 1,000 ರೂ.ಗಳವರೆಗೂ ತಲುಪಿದ ನಿದರ್ಶನವಿದೆ.

ದೆಹಲಿಯ ಕೆಲವು ಭಾಗಗಳಲ್ಲಿ ಜನರು 2000 ರೂ. ನೀಡಿ ಆಡಿನ ಹಾಲು ಖರೀದಿಸಿದ್ದಾರೆಂದು ಸುದ್ಧಿವಾಹಿನಿಗಳು ವರದಿ ಮಾಡಿವೆ. ಆಡಿನ ಹಾಲು ಮಾರುವವರನ್ನು ಜನರು ಹುಡುಕಿಕೊಂಡು ಹೋಗಿ ದುಬಾರಿ ಬೆಲೆ ತೆತ್ತು ಖರೀದಿಸುತ್ತಿದ್ದಾರೆ. ತಕ್ಷಣ ಲಭಿಸದಿದ್ದರೆ ಮುಂಗಡ ಹಣ ನೀಡಿ ಕಾದಿರಿಸುತ್ತಿದ್ದಾರೆ.

ಡೆಂಘೀ ಹಾವಳಿಯಿಂದ ದೆಹಲಿ ತತ್ತರಿಸುತ್ತಿದ್ದು, ಎಲ್ಲ ಆಸ್ಪತ್ರೆಗೆಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ವೈದ್ಯರ ಮದ್ದಿನಿಂದ ಗುಣವಾಗದ ಕಾಯಿಲೆಗೆ ಜನರು ಪರ್ಯಾಯ ಔಷಧಿ ಹುಡುಕುತ್ತಿದ್ದಾರೆ. ಹಸಿ ಆಡಿನ ಹಾಲಿನಲ್ಲಿರುವ ಔಷಧೀಯ ಗುಣಗಳು ರೋಗ ಗುಣಪಡಿಸುತ್ತದೆ ಎಂದು ಮಾತು ದಿಟವಾಗಿದ್ದು, ಜನರು ಅದನ್ನು ಹೇಳಿದ ಬೆಲೆ ಕೊಟ್ಟು ಖರೀದಿಸುತ್ತಿರುವುದು ಆಡಿನ ಹಾಲಿನ ಮಹತ್ವಕ್ಕೆ ಪುರಾವೆಯಾಗಿದೆ.

ಆಡಿನ ಹಾಲು ಪರಿಪೂರ್ಣ:
ಹಸು ಹಾಲಿಗಿಂತ ಆಡಿನ ಹಾಲು ಪರಿಪೂರ್ಣ ಎಂಬುದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ. ಇದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯವರ್ಧಕವಾಗಿದೆ. ಪ್ರತಿದಿನ ಆಡಿನ ಹಾಲನ್ನು ಸೇವಿಸುವುದರಿಂದ ಶರೀರ ಹೆಚ್ಚು ಬಲಯುತವಾಗುತ್ತದೆ. ಇದರಲ್ಲಿ ರೋಗ ಪ್ರತಿರೋಧಕ ಅಂಶಗಳು ಹೇರಳವಾಗಿರುವುದರಿಂದ ಕಾಯಿಲೆಗಳನ್ನು ದೂರು ಮಾಡುತ್ತವೆ. ಈ ಕೆಳಕಂಡ ಐದು ಕಾರಣಗಳಿಂದ ಆಡು ಹಾಲು ಹಸು ಕ್ಷೀರಕ್ಕಿಂತ ಪರಿಪೂರ್ಣ ಎಂಬುದು ಸಾಬೀತಾಗಿದೆ. ಸುಲಭವಾಗಿ ಜೀರ್ಣವಾಗುತ್ತದೆ. ಸ್ವಾಭಾವಿಕವಾಗಿ ಏಕರೂಪ ಸ್ಥಿರತೆ. ಕಡಿಮೆ ಅಲರ್ಜಿ. ಲ್ಯಾಕ್ಟೋಸ್ ಅಸಹಿಷ್ಣುತೆ. ಹೇರಳ ಪೌಷ್ಠಿಕಾಂಶಗಳು ಈ ಹಾಲಿನಿಂದ ದೊರೆಯುತ್ತದೆ.

Comments are closed.