UAE

‘ಶಿವದೂತೆ ಗುಳಿಗೆ’ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರಿಗೆ ದುಬೈನಲ್ಲಿ ‘ತೌಳವ ರಂಗ ಚಾಣಕ್ಯ’ ಬಿರುದು ಪ್ರಧಾನ

Pinterest LinkedIn Tumblr

ದುಬೈ: ತುಳು ನಾಡಿನ ಮಣ್ಣಿನ ಮಗ ತುಳು ಕಲೆ ಭಾಷೆ ಸಂಸ್ಕೃತಿಯನ್ನು ತನ್ನ ಉಸಿರಾಗಿಸಿಕೊಂಡು ನಿತ್ಯ ನಿರಂತರವಾಗಿ ಸೇವೆ ಸಲ್ಲಿಸುತ್ತಾ ತುಳು ಕಲಾಭಿಮಾನಿಗಳಿಗೆ ಯಶಸ್ವಿ ನಾಟಕಗಳನ್ನು ಮತ್ತು ಚಲನಚಿತ್ರಗಳನ್ನು ಕಳೆದ ನಾಲ್ಕು ದಶಕಗಳಿಂದ ನೀಡುತ್ತಾ ತುಳುನಾಡಿನ ಜನತೆಯ ಕಣ್ಮಣಿಯಾಗಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರಿಗೆ ದುಬಾಯಿ ನಾಡಿನಲ್ಲಿ ಸಮಸ್ಥ ಅನಿವಾಸಿ ತುಳುವರು ಹಾಗೂ ಕನ್ನಡಿಗರ ಸಮ್ಮುಖದಲ್ಲಿ ಧರ್ಮಪತ್ನಿ ರೂಪಲಕ್ಷ್ಮೀ, ಪುತ್ರಿ ವಿಶಿಷ್ಠ, ಪುತ್ರ ತಸ್ಮಯ್ ರೊಂದಿಗೆ “ತೌಳವ ರಂಗ ಚಾಣಕ್ಯ” ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ದುಬಾಯಿ ಅಲ್ ನಾಸರ್ ಲೀಶಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯ ಅತಿಥಿಗಳಾಗಿ ಉದ್ಯಮಿಗಳಾದ ಹರೀಶ್ ಶೇರಿಗಾರ್, ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಅರುಣ್ ತೋಡರ್, ಸಂದೀಪ್ ರೈ ನಂಜೆ, ನಾಗರಾಜ್ ರಾವ್, ಪ್ರೇಮ ನಾಥ್ ಶೆಟ್ಟಿ, ಲ್ಯಾನ್ಸಿ ಡಿಸೋಜಾ, ತಾರನಾಥ್ ರೈ, ವಾಸು ಭಟ್, ಸರ್ವೋತ್ತಮ ಶೆಟ್ಟಿ ಹಾಗೂ ದುಬಾಯಿಯಲ್ಲಿ ಶಿವದೂತೆ ಗುಳಿಗೆ ನಾಟಕವನ್ನು ಬರಮಾಡಿಕೊಂಡು ಆಯೋಜನೆ ಮಾಡಿರುವ ಹರೀಶ್ ಬಂಗೆರಾ, ದಿನೇಶ್ ಶೆಟ್ಟಿ ಕೊಟ್ಟಿಂಜ, ರಾಜೇಶ್ ಕುತ್ತಾರ್, ಪ್ರಕಾಶ್ ಪಕ್ಕಳ ಗಿರೀಶ್ ನಾರಾಯಣ್, ಸ್ಯಾಮ್ ಪೂಜಾರಿ ಇವರುಗಳು ಸನ್ಮಾನ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಸುವರ್ಣ ಸತೀಶ್ ಸನ್ಮಾನ ಪತ್ರವನ್ನು ವಾಚಿಸಿದರು.

ಮಂಗಳೂರಿನಿಂದ ಆಗಮಿಸಿದ ಟಿ. ವಿ. ನಿರೂಪಕಿ ಡಾ. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.
ಎರಡು ಗಂಟೆಯ ಅವಧಿಯಲ್ಲಿ ಪ್ರೇಕ್ಷಕರು ಅತ್ಯಂತ ನಿಶಭ್ದರಾಗಿ ತನ್ಮಯತೆಯಿಂದ ರೋಮಾಂಚನಕಾರಿ ಮೂಡಿಬಂದ ಅದ್ಭುತ ಪ್ರದರ್ಶನ “ಶಿವದೂತೆ ಗುಳಿಗೆ” ತುಳು ನಾಟಕವನ್ನು ವೀಕ್ಷಿಸಿದರು. ನಾಟಕದ ಆಯೋಜನೆಯಲ್ಲಿ ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳು ನಾಟಕದ ಯಶಸ್ಸಿಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದರು.

ಮಂಗಳೂರಿನ ಪ್ರಖ್ಯಾತ ನಾಟಕ ಸಂಸ್ಥೆ “ಕಲಾ ಸಂಗಮ ಮಂಗಳೂರು” ಮೂವತ್ತೆರಡು ಕಲಾವಿದರು ತಂತ್ರಜ್ಞರು, ರಂಗಕರ್ಮಿಗಳು ಮಂಗಳೂರಿನಿಂದ ದುಬಾಯಿಗೆ ಆಗಮಿಸಿ ತಮ್ಮ ಕಲಾ ಚಾತುರ್ಯತೆಯನ್ನು ಮೆರೆದಿದ್ದರು. ನಾಟಕದ ಕೊನೆಯಲ್ಲಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ರವರು ತಮ್ಮ ತಂಡದವರನ್ನು ವೇದಿಕೆಗೆ ಬರಮಾಡಿಕೊಂಡು ತಂಡದವರ ಪ್ರತಿಭೆಯನ್ನು ಶ್ಲಾಘಿಸಿ ಪ್ರೇಕ್ಷಕರಿಗೆ ಪರಿಚಯಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ದುಬಾಯಿಯಲ್ಲಿ ಸರ್ಕಾರದ ಕಾನೂನು ಕಟ್ಟಲೆಯ ಚೌಕಟ್ಟಿನ ಒಳಗೆ ನಿಯಮಗಳನ್ನು ಪಾಲಿಸಿಕೊಂಡು ಅತ್ಯಂತ ಯಶಸ್ವೀಯಾಗಿ ಪ್ರದರ್ಶನ ಗೊಂಡ “ಶಿವದೂತೆ ಗುಳಿಗೆ” ತುಳು ನಾಟಕಕ್ಕೆ ಯು.ಎ.ಇ.ಯಲ್ಲಿ ನೆಲೆಸಿರುವ ಅನಿವಾಸಿ ತುಳುವರು ಕನ್ನಡಿಗರು ಹಾಗೂ ಇನ್ನಿತರ ಭಾಷಿಗರು ತಮ್ಮ ಬೆಂಬಲ ಪ್ರೋತ್ಸಾಹ ನೀಡಿದುದರ ಫಲವಾಗಿ ದುಬಾಯಿಯಲ್ಲಿ ಪೌರಾಣಿಕ ತುಳು ನಾಟಕ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿತು.

ವರದಿ- ಬಿ. ಕೆ. ಗಣೇಶ್ ರೈ

Comments are closed.