UAE

ದುಬಾಯಿಯಲ್ಲಿ ಕರ್ನಾಟಕ ಅನಿವಾಸಿ ಕನ್ನಡಿಗ ಮುಖಂಡರ ಮಹತ್ವದ ಸಭೆ

Pinterest LinkedIn Tumblr

ದುಬೈ: ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಆಶ್ರಯದಲ್ಲಿ ದುಬಾಯಿಯ ಫಾರ್ಚೂನ್ ಆಟ್ರಿಯಂ ಹೋಟೆಲ್ ಸಭಾಂಗಣದಲ್ಲಿ ಯು.ಎ.ಇ.ಯಲ್ಲಿ ಕಾರ್ಯೊನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರ ವಿಶೇಷ ಸಭೆಯನ್ನು ಹಾಗೂ ಮಾಧ್ಯಮ ಗೋಷ್ಠಿಯನ್ನು ಆಯೋಜಿಸಲಾಗಿತ್ತು.

ಯು.ಎ. ಇ ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದ್ದು ಎಲ್ಲಾ ಸಂಘಟನೆಗಳು ಪರಸ್ಪರ ಸಹಕಾರ ಮತ್ತು ಸಮನ್ವಯತೆಯಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಯು.ಎ.ಇ ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆಯು ಒಕ್ಕೊರಲಿನಿಂದ ತೀರ್ಮಾನಿಸಿದೆ.

ಕನ್ನಡ ಸಂಘಟನೆಗಳು ಒಂದೇ ದಿನ ಮತ್ತು ಒಂದೇ ಸಮಯದಲ್ಲಿ ಕಾರ್ಯಕ್ರಮ ನಡೆಸುವುದರಿಂದ ಭಾಗವಹಿಸುವ ಕನ್ನಡಿಗರಿಗೆ ಅನಾನುಕೂಲವಾಗುತ್ತದೆ ಹಾಗೂ ವೀಕ್ಷಕರನ್ನು ವಿಭಜಿಸಿದಂತಾಗುತ್ತದೆ. ಸೂಕ್ತ ಸಿದ್ಧತೆ ಮಾಡಿಕೊಳ್ಳದೆ ಬೆರಳೆಣಿಕೆಯ ವೀಕ್ಷಕರನಿಟ್ಟುಕೊಂಡು ಕಾರ್ಯಕ್ರಮ ನಡೆಸುವುದರಿಂದ ಅದು ಯು.ಎ.ಇ ಯಲ್ಲಿರುವ ಎಲ್ಲಾ ಕನ್ನಡ ಸಂಘಟನೆಗಳ ವಿಶ್ವಾಸಾರ್ಹತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಯು.ಎ.ಇ.ಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಇಲ್ಲಿ ನಡೆಯುವ ಎಲ್ಲಾ ಕನ್ನಡ ಪರ ಚಟುವಟಿಕೆಗಳನ್ನು ಒಗ್ಗೂಡಿ ಸಂಭ್ರಮದಿಂದ ಆಚರಿಸಬೇಕು. ಎಲ್ಲಾ ಸಂಘಟನೆಗಳು ಒಟ್ಟು ಸೇರಿ ಭಾವೈಕತೆಯನ್ನು ಎತ್ತಿ ಹಿಡಿದು ಸಂಘಟನಾ ಶಕ್ತಿಯನ್ನು ಬಲಗೊಳಿಸುವಂತೆ ತೀರ್ಮಾನಿಸಲಾಯಿತು.

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ.ಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆ.ಎನ್ ಆರ್.ಐ. ಉಪಾಧ್ಯಕ್ಷ ಹರೀಶ್ ಶೇರಿಗಾರ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ದುಬಾಯಿ ಕರ್ನಾಟಕ ಸಂಘದ ನೂತನ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ವೀರಶೈವ ಲಿಂಗಾಯುತ ಸಮಾಜ ದುಬಾಯಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಗಮ್ಮತ್ ಕಲಾವಿದರು ದುಬಾಯಿ ಪೋಷಕ ಹರೀಶ್ ಬಂಗೇರಾ, ಬ್ಯಾರೀಸ್ ಕಲ್ಟರಲ್ ಫೋರಂ ಅಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ, ಮೊಗವೀರ್ಸ್ ಯು.ಎ.ಇ ಉಪಾಧ್ಯಕ್ಷ ಬಾಲಕೃಷ್ಣ ಸಾಲಿಯಾನ್, ಕನ್ನಡ ಪಾಠಶಾಲೆಯ ಪದಾಧಿಕಾರಿಗಳು, ಹೆಮ್ಮೆಯ ಕನ್ನಡಿಗರು ಯು.ಎ.ಇ., ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರುಗಳು ಹಾಗೂ ಇತರ ಹಲವು ಸಂಘಟನೆಗಳ ಮುಖ್ಯಸ್ಥರುಗಳು ಸಭೆಯಲ್ಲಿ ಭಾಗವಹಿಸಿದ್ದರು.

 

 

Comments are closed.