UAE

ಯಕ್ಷಗಾನ ಅಭ್ಯಾಸ ತರಗತಿ ದುಬೈ: ಗುರು ಪೂಜೆ-ಗುರು ವಂದನಾ, 2022-2023ನೇ ಸಾಲಿನ ನೂತನ ತರಗತಿಗಳ ಉದ್ಘಾಟನೆ

Pinterest LinkedIn Tumblr

ದುಬೈ: ಯಕ್ಷಗಾನ ಅಭ್ಯಾಸ ತರಗತಿ ದುಬೈ ವತಿಯಿಂದ ಗುರು ಪೂಜೆ-ಗುರು ವಂದನೆ ಹಾಗೂ 2022-2023ನೇ ಸಾಲಿನ ನೂತನ ತರಗತಿಗಳ ಉದ್ಘಾಟನಾ ಸಮಾರಂಭ ಜು. 17 ರವಿವಾರ ದುಬಾಯಿ ಗೀಸೈಸ್ ನ ಫಾರ್ಚೂನ್ ಪ್ಲಾಜದ ಬಾಂಕ್ವೆಟ್ ಹಾಲ್’ನಲ್ಲಿ ಅಭ್ಯಾಸ ತರಗತಿಯ ಸರ್ವ ಕಲಾವಿದರು, ವಿದ್ಯಾರ್ಥಿಗಳು, ಕಾರ್ಯಕರ್ತರು ಮತ್ತು ಹೆತ್ತವರ ಒಗ್ಗೂಡುವಿಕೆಯಿಂದ ಸಾಂಗವಾಗಿ ನೆರವೇರಿತು.

ತರಗತಿಯ ಹಿರಿಯ ಕಲಾವಿದರಾದ ಭವಾನಿ ಶಂಕರ ಶರ್ಮರ ಪೌರೋಹಿತ್ಯ ದಲ್ಲಿ ತರಗತಿಯ ಪ್ರಾರ್ಥನೆ, ಸಂಕಲ್ಪದೊಂದಿಗೆ ಗುರು ರಾಘವೇಂದ್ರ, ಗುರು ಸಾಯಿಭಗವಾನ್, ಗುರು ವ್ಯಾಸರು ಮತ್ತು ಭಗವಾನ್ ಮಹಾವಿಷ್ಣುವಿನ ಷೋಡಷೋಪಚಾರ ಪೂಜೆಗಳನ್ನು ವಿಧಿಪೂರ್ವಕ ನೆರವೇರಿ ಪ್ರಸಾದ ವಿತರಣೆ ಮಾಡಲಾಯಿತು. ತರಗತಿಯ ಸದಸ್ಯರಿಂದ ಮಹಿಳಾ ವಿಭಾಗದ ನೇತೃತ್ವದಲ್ಲಿ ಭಜನಾ ಸೇವೆ ನಡೆಯಿತು. ಗುರುಗಳಾದ ಗಣೇಶ ಕೊಲೆಕಾಡಿಯವರ ದೀರ್ಘಾಯುರಾರೋಗ್ಯ ಸಂಕಲ್ಪದಿಂದ ಕೈಗೊಂಡ ಮಂಡಲ ಪರಿಯಂತದ ಧನ್ವಂತರಿ , ಮಹಾಮೃತ್ಯುಂಜಯ ಜಪಯಜ್ಞಕ್ಕೆ ಕೃಷ್ಣಾರ್ಪಣ ಸಹಿತ ಸಮಾಪ್ತಿ ಮಾಡಲಾಯಿತು.

ಅತಿಥಿಗಳಾಗಿ ಆಗಮಿಸಿದ ಪ್ರಖ್ಯಾತ ತುಳು ಕನ್ನಡ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಖ್ಯಾತ ತುಳು ರಂಗ ಕಲಾವಿದ, ಚಲನಚಿತ್ರ-ನಾಟಕ ರಚನೆಕಾರ- ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ಅಭ್ಯಾಗತ ಮತ್ತು ಪ್ರಧಾನ ಭಾಷಣಕಾರ- ಗುರುಪೂಜೆ ಮತ್ತು ಗುರುವಿನ ಮಹತ್ವವನ್ನು ವಿವರಿಸಿದ ಗಣೇಶ ರೈ, ಗಮ್ಮತ್ ಕಲಾವಿದೆರ್ ತಂಡದ ಅಧ್ಯಕ್ಷ ರಾಜೇಶ್ ಕುತ್ತಾರ್, ತರಗತಿ ಹಿರಿಯರಾದ ಭವಾನಿ ಶಂಕರ ಶರ್ಮ, ವೆಂಕಟೇಶ ಶಾಸ್ತ್ರಿ ಪುತ್ತಿಗೆ, ಜಯಾನಂದ ಪಕ್ಕಳ, ವಾಸು ಶೆಟ್ಟಿ, ತರಗತಿ ಸಂಚಾಲಕರಾದ ಶ್ರೀಯುತ ಕೊಟ್ಟಿಂಜ ದಿನೇಶ್ ಶೆಟ್ಟಿ, ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಗಿರೀಶ್ ನಾರಾಯಣ ಕಾಟಿಪಳ್ಳರ, ಬಾಲಕೃಷ್ಣ ಶೆಟ್ಟಿ ಮಾಡೂರುರವರ ಉಪಸ್ಥಿತಿ ಯಲ್ಲಿ ದೀಪ ಬೆಳಗಿಸಿ – ನೂತನ ಯಕ್ಷಗಾನ ತರಗತಿಗಳ ಉದ್ಘಾಟನೆಯ ಮೂಲಕ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅತಿಥಿಗಳು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಗುರುವಂದನಾ ಕಾರ್ಯಕ್ರಮದಲ್ಲಿ ಮಯೂರ್ ನಾಯ್ಗ ರಚಿತ ಗಾನನಮನ ಮತ್ತು ಆನಂದ ಸಾಲ್ಯಾನ್ ರಚಿತ ಕವನಗಳನ್ನು ಯಕ್ಷಗಾನ ಶೈಲಿಯಲ್ಲಿ ಭಾಗವತರಾದ ಕೃಷ್ಣಪ್ರಸಾದ್ ಸುರತ್ಕಲ್ ರ ಪ್ರಸ್ತುತಪಡಿಸಿದರು. ಹಿಮ್ಮೇಳದ ಸಾಂಗತ್ಯ ಒದಗಿಸಿದವರು. ಸವಿನಯ ನೆಲ್ಲಿತೀರ್ಥ, ಭವಾನಿ ಶಂಕರ ಶರ್ಮ, ವೆಂಕಟೇಶ ಶಾಸ್ತ್ರಿ ಮತ್ತು ಆದಿತ್ಯ ದಿನೇಶ್ ಶೆಟ್ಟಿಯವರು
ದೀವಿತ್ ಕೋಟ್ಯಾನ್ ರಚಿತ ಗುರುವಿನ‌ ಮಹತ್ವ ವಿವರಿಸುವ ವಾಚಿಕನಮನವನ್ನು ವಿದ್ಯಾರ್ಥಿಗಳಾದ ಕುಮಾರಿ ಶ್ರೀಶ ಪ್ರಭಾಕರ ಪೂಜಾರಿ ಮತ್ತು ಕುಮಾರಿ ವೈಷ್ಣವಿ ಮನೋಹರ್ ಸಭೆಯ ಮುಂದೆ‌ ಪ್ರಸ್ತುತ ಪಡಿಸಿದರು. ಭವಾನಿಶಂಕರ ಶರ್ಮರು ಶ್ಲೋಕರೂಪದ ಆಶೀರ್ವಚನ ನೀಡಿದರು. ಶಿಷ್ಯರೆಲ್ಲರೊಂದಾಗಿ ಪಾದಪೂಜೆ ಸಹಿತ ಧನ- ಕನಕ-ವಸ್ತ್ರ- ಫಲಕಾಣಿಕೆ ಮೂಲಕ ಗುರುವಂದನೆ ಸಲ್ಲಿಸಿದರು. ನಾಟ್ಯಗುರುಗಳಾದ ಶರತ್ ಕುಡ್ಲರಿಗೂ ಧನ-ಕನಕ-ವಸ್ತ್ರ- ಫಲ ಕಾಣಿಕೆ ಮೂಲಕ ಗುರುವಂದನೆ ಸಲ್ಲಿಸಲಾಯಿತು.

ಗುರುವಂದನೆಯ ಭಾಗವಾಗಿ ನಾಟ್ಯನಮನದ ನೆಲೆಯಲ್ಲಿ ಶ್ರೀಕೃಷ್ಣ ಒಡ್ಡೋಲಗ ಮತ್ತು ಗುರುದಕ್ಷಿಣೆ ಎಂಬ ಕಿರು ಆಖ್ಯಾನಗಳ ಪ್ರದರ್ಶನ ನಡೆಯಿತು.
ಹಿಮ್ಮೇಳ – ಮುಮ್ಮೇಳಗಳಲ್ಲಿ ಯಕ್ಷಗಾನಭ್ಯಾಸ ತರಗತಿಯ ಸದಸ್ಯರೂ ವಿದ್ಯಾರ್ಥಿಗಳು ಭಾಗವಹಿಸಿದರು. ಭಾಗವತರಾಗಿ ಕೃಷ್ಣಪ್ರಸಾದ್ ರಾವ್ ಸುರತ್ಕಲ್, ಮದ್ದಲೆ ಯಲ್ಲಿ ವೆಂಕಟೇಶ್ ಶಾಸ್ತ್ರೀ ಪುತ್ತಿಗೆ, ಭವಾನಿಶಂಕರ್ ಶರ್ಮರು ಸಹಕರಿಸಿದರೆ, ಚೆಂಡೆಯಲ್ಲಿ ಶ್ರೀಸವಿನಯ ನೆಲ್ಲಿತೀರ್ಥ, ಚಕ್ರತಾಳದಲ್ಲಿ ಶ್ರೀಆದಿತ್ಯ ದಿನೇಶ್ ಶೆಟ್ಟಿ ಸಹಕರಿಸಿದರು. ತೆರೆಯಲ್ಲಿ ಭಾಸ್ಕರ್ ಪೂಜಾರಿ ನೀರ್ ಮಾರ್ಗ ಮತ್ತು ಆನಂದ್ ಸಾಲ್ಯಾನ್ ಕಿನ್ನಿಗೋಳಿ ಸಹಕರಿಸಿದರು. ಮುಮ್ಮೇಳದಲ್ಲಿ
ಶ್ರೀಕೃಷ್ಣ ಒಡ್ಡೋಲಗದ ಪ್ರಸ್ತುತಿಯಲ್ಲಿ ಶ್ರೀಕೃಷ್ಣ-ಅದಿತಿ ದಿನೇಶ್ ಶೆಟ್ಟಿ, ಅಷ್ಟಮಾಂಗನೆಯರಾಗಿ, ಕಾಳಿಂದಿ-ನಯೋಮಿ ಸಾಯಿನಾಥ್ ಶೆಟ್ಟಿ;ಲಕ್ಷಣೆ-ಶೈವಿ ಪ್ರಭಾಕರ್ ಪೂಜಾರಿ; ನೀಲೆ-ವೈಷ್ಣವಿ ಮನೋಹರ್ ಪದ್ಮಶಾಲಿ; ಭದ್ರೆ- ಶ್ರೀಶಾ ಪ್ರಭಾಕರ್ ಪೂಜಾರಿ; ಜಾಂಬವತಿ- ಯಶಸ್ವಿನಿ ಶೇಖರ್ ಪೂಜಾರಿ; ಮಿತ್ರವಿಂದೆ-ಸಾನ್ವಿ ಮೋಹನ್ ಗುಜರನ್; ಭಾಮೆ- ಶ್ರೀಮತಿ ಸಮಂತ ಗಿರೀಶ್ ನಾರಾಯಣ; ರುಕ್ಮಿಣಿ- ಶ್ರೀಮತಿ ಸ್ವಾತಿ ಶರತ್ ಸರಳಾಯ ಭಾಗವಹಿಸಿದರು.
ಗುರುದಕ್ಷಿಣೆ ಆಖ್ಯಾನದ ಪಾತ್ರವರ್ಗದಲ್ಲಿ ಸಾಂದೀಪನಿ-ರವೀಂದ್ರ ಕುಕ್ಯಾನ್; ಸದ್ಭೋದಿನಿ- ಶ್ರೀಮತಿ ಸ್ವಾತಿ ಸಂತೋಷ್ ಕಟೀಲು; ಶ್ರೀಕೃಷ್ಣ- ಶರತ್ ಕುಡ್ಲ; ಬಲರಾಮ-ಸತೀಶ್ ಶೆಟ್ಟಿಗಾರ್ ವಿಟ್ಲ ; ಮಣಿಕರ್ಣ- ಅಥರ್ವ ವಸಂತ ಶೆಟ್ಟಿ ಹಾಗೂ ಮಂಗಲ ಸ್ತ್ರೀವೇಷದಲ್ಲಿ ಸಮಂತ ಗಿರೀಶ್ ನಾರಾಯಣ ಮತ್ತು ಶ್ರೀಮತಿ ಸ್ವಾತಿ ಶರತ್ ಸರಳಾಯ ಜನ ಮನ ರಂಜಿಸಿದರು.

ತರಗತಿ ಸಂಚಾಲಕರಾದ ದಿನೇಶ ಶೆಟ್ಟಿ ಕೊಟ್ಟಿಂಜ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ತರಗತಿಯ ಬಹುಮುಖ ಪ್ರತಿಭೆ ಗಿರೀಶ್ ನಾರಾಯಣರು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರವನ್ನು ಸಭೆಯ ಮುಂದಿಟ್ಟು ಧನ್ಯವಾದ ಸಮರ್ಪಣೆ ಮಾಡಿದರು. ದ್ಯಾಟ್ ಯಕ್ಷ ಶ್ರೀರಕ್ಷಾ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಸುವರ್ಣ ಕರ್ನಿರೆಯವರ ಸೇವಾರ್ಥ ನೆರೆದ ಯಕ್ಷಾಭಿಮಾನಿಗಳನ್ನು ಅನ್ನಸಂತರ್ಪಣೆಯ ಮೂಲಕ ಸಂಪ್ರೀತಗೊಳಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ಹೆತ್ತವರ ಮತ್ತು ಕಾರ್ಯಕರ್ತರ ತಂಡ ವಿಶೇಷ ಮುತುವರ್ಜಿಯಿಂದ ಕಾರ್ಯಕ್ರಮದಲ್ಲಿ ಪಾಲುಪಡೆದು ಪೂರ್ಣ ಯಶಸ್ಸಿಗೆ ಕಾರಣರಾದರು.

Comments are closed.