UAE

ದುಬೈ EXPO- 2020 ವೇದಿಕೆಯಲ್ಲಿ ಘರ್ಜಿಸಿದ ‘ಟೀಮ್ ಪಿಲಿ ನಲಿಕೆ ದುಬಾಯಿ’ ತಂಡದ ಹುಲಿಗಳು..!

Pinterest LinkedIn Tumblr

ದುಬೈ: ದುಬಾಯಿಯಲ್ಲಿ ನಡೆಯುತ್ತಿರುವ ಜಾಗತಿಕ ಮಟ್ಟದ ಪ್ರಪಂಚದ ಅತಿದೊಡ್ಡ ವಾಣಿಜ್ಯಮೇಳ ಎಕ್ಸ್ ಪೋ-2020 ಅದ್ದೂರಿಯಿಂದ ಚಾಲನೆಗೊಂಡು ದಿನೇ ದಿನೇ ಜನದಟ್ಟಣೆಯ ವೀಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅಲ್ಲದೆ ಈ ಮೇಳದ ಅಂಗವಾಗಿ ನಿತ್ಯವೂ ಸುಮಾರು 70 ರಷ್ಟು ವೇದಿಕೆಗಳಲ್ಲಿ ಮನೋರಂಜನಾ ಕಾರ್ಯಕ್ರಮಗಳೂ ಪ್ರದರ್ಶನಗೊಳ್ಳುತ್ತಿವೆ. ಜಾಗತಿಕ ಮಟ್ಟದ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಅದೃಷ್ಟ ಕೆಲವೇ ಕೆಲವು ಕಲೆ ಹಾಗೂ ಕಲಾವಿದರ ಪಾಲಿಗೆ ಲಭ್ಯವಾಗುತ್ತಿವೆ.

ಇತ್ತೀಚೆಗೆ ಅಂತಹ ಒಂದು ಅವಕಾಶ ಪಡೆದು ಕಲಾರಸಿಕರ ಮನಸೂರೆಗೊಂಡು ವಿಜೃಂಭಿಸಿದ್ದು ಕರಾವಳಿ ಕರ್ನಾಟಕದ ಪಕ್ಕಾ ದೇಸಿ ಕಲೆಯಾದ ಹುಲಿ ಕುಣಿತ.

ಚಿತ್ರ ಕಲಾವಿದರಾಗಿ, ಯಕ್ಷಗಾನ, ನಾಟಕ ಮೊದಲಾದ ರಂಗ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಗಿರೀಶ ನಾರಾಯಣ ಕಾಟಿಪಳ್ಳ ನೇತೃತ್ವದ ‘ಟೀಮ್ ಪಿಲಿ ನಲಿಕೆ’ ತಂಡ ಮತ್ತು ಸೋಲ್ ಅಂಡ್ ಬೀಟ್ಸ್ ಡ್ಯಾನ್ಸ್ ಅಕಾಡೆಮಿ ಸಹಯೋಗದಲ್ಲಿ ಇಂಡಿಯನ್ ಪವಿಲಿಯನ್ ವೇದಿಕೆಯಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಹೊಸ ದಾಖಲೆಯನ್ನೇ ನಿರ್ಮಿಸಿದ್ದಲ್ಲದೆ ಕಲಾಭಿಮಾನಿಗಳು, ಕರಾವಳಿಗರು ಹೆಮ್ಮೆ ಪಡುವಂತೆ ಮಾಡಿದೆ.

ಈ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ದುಬೈಯ ಕಲಾ ಪೋಷಕ, ಚಿತ್ರ ನಿರ್ಮಾಪಕ ಹರೀಶ ಶೇರಿಗಾರರ ಮಾಲಕತ್ವದ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ನಲ್ಲಿ ಹುಲಿ ಕುಣಿತದ ಪರಂಪರಾಗತ ಪದ್ಧತಿಯಂತೆ ‘ಊದು’ ಹಾಕುವ ಕ್ರಮದಂತೆ ಅಲ್ಲಿ ಸಂಪ್ರದಾಯಕ ಹುಲಿ ಕುಣಿತದ ಸೇವೆ ಗಣ್ಯರಾದ ದಿನೇಶ್ ಶೇರಿಗಾರ್, ನಾಟಕ ನಿರ್ದೇಶಕ ವಿಶ್ವನಾಥ ಶೆಟ್ಟಿ, ಸಮಾಜ ಸೇವಕ ರಾಜೇಶ್ ಕುತ್ತಾರ್, ವಾಸು ಕುಮಾರ್ ಶೆಟ್ಟಿ, ಗೌತಮ್ ಬಂಗೇರ, ಡೊನಾಲ್ಡ್ ಕೊರಿಯ ಮತ್ತು ಆಶಾ ಕೊರೆಯ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು.

ನಂತರ EXPO 2020- ಭಾರತ ಸಭಾಂಗಣದಲ್ಲಿ ಸಂಪ್ರದಾಯದಂತೆ ತೈಲವರ್ಣ (ಆಯಿಲ್ ಪೇಯಿಂಟ್ ) ದಲ್ಲಿ ಸುಮಾರು 6 ರಿಂದ 7 ಹುಲಿವೇಷ ಸಿದ್ಧವಾಗಿ, ಅದ್ದೂರಿಯ ಹುಲಿಕುಣಿತ ಪ್ರದರ್ಶಿಸಿದ್ದಾರೆ. ಕರ್ನಾಟಕ, ಭಾರತ ಮಾತ್ರವಲ್ಲದೆ ಜಾಗತಿಕವಲಯದ ಕಲಾರಸಿಕರ ಮನಸೂರೆಗೊಂಡು ಹುಲಿವೇಷದ ಕಲಾವಿದರಲ್ಲಿ ಧನ್ಯತೆಯ ಭಾವ ಮೂಡಿಸಿದೆ.

Comments are closed.