UAE

ಸಚಿವ ಡಾ. ಅಶ್ವತ್ಥನಾರಾಯಣ್ ಅವರಿಗೆ ದುಬೈಯಲ್ಲಿ ಸನ್ಮಾನ | ಅನಿವಾಸಿ ಕನ್ನಡಿಗರ ಸಮಸ್ಯೆ‌ ಆಲಿಸಿದ ಸಚಿವರು

Pinterest LinkedIn Tumblr

ದುಬೈ: ಅರಬ್ ಸಂಯುಕ್ತ ಸಂಸ್ಥಾನಕ್ಕೆ ಕರ್ತವ್ಯ ನಿಮಿತ್ತ ಭೇಟಿ ನೀಡಿದ ಕರ್ನಾಟಕ‌ ಸರ್ಕಾರದ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಅಬುಧಾಬಿ ಕರ್ನಾಟಕ ಸಂಘ, ಕರ್ನಾಟಕ ಸಂಘ ಶಾರ್ಜಾ, ಕನ್ನಡಿಗರು ದುಬಾಯಿ, ಕನ್ನಡ ಸಂಘ ಅಲ್ಐನ್, ಕನ್ನಡ ಪಾಠ ಶಾಲೆ, ಅಂತರಾಷ್ಟ್ರೀಯ ಕನ್ನಡಿಗರ ಒಕ್ಕೂಟ ಕಾರ್ಯಕ್ರಮ 2021 ಅಕ್ಟೋಬರ್ 15ರಂದು ಸಂಜೆ 5.00 ಗಂಟೆಗೆ ದುಬಾಯಿಯಲ್ಲಿರುವ ಫಾರಚೂನ್ ಅಟ್ರಿಯಂ ಹೋಟೆಲ್ ಸಭಾಂಗಣದಲ್ಲಿ ಸಮಸ್ಥ ಅನಿವಾಸಿ ಕನ್ನಡಿಗರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಯು.ಎ.ಇ. ರಾಷ್ಟ್ರಗೀತೆ ಹಾಗೂ ಭಾರತದ ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು.

ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿಯವರು ಪ್ರಾಸ್ತಾವಿಕ ಭಾಷಣದಲ್ಲಿ ಅನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪೂರ್ಣ ಮಾಹಿತಿ ನೀಡಿದರು.

ವಿವಿಧ ಸಂಘಟನೆಗಳ ಮುಖ್ಯಸ್ಥರುಗಳಾದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ‌ ಶೆಟ್ಟಿ, ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷ ಎಂ.ಇ. ಮೂಳೂರ್, ಕನ್ನಡಿಗರು ದುಬಾಯಿ ಅಧ್ಯಕ್ಷೆ ಉಮಾದೇವಿ, ಅಂತರಾಷ್ಟ್ರೀಯ ಕನ್ನಡಿಗರ ಒಕ್ಕೂಟದ ಮುಖ್ಯಸ್ಥರಾದ ಹಿದಾಯತ್ಅಡೂರು ಯುಎ.ಇ. ಅನಿವಾಸಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ಅನಿವಾಸಿ ಭಾರತೀಯ ಸಮಿತಿಯ‌ ಉಪಾಧ್ಯಕ್ಷ ಬಿ. ಕೆ. ಗಣೇಶ್ ರೈ ಅವರು ಅನಿವಾಸಿ ಕನ್ನಡಿಗರ‌ ವಿವಿಧ ಕುಂದುಕೊರತೆಗಳನ್ನು ಪರಿಹರಿಸಲು ಕರ್ನಾಟಕ ಸರಕಾರಕ್ಕೆ ನೀಡುವ‌ ಮನವಿ ಪತ್ರವನ್ನು ವಾಚಿಸಿದರು.
ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ವಿವಿಧ ಸಂಘಟನೆಯ ಮುಖ್ಯಸ್ಥರ ಸಮ್ಮುಖದಲ್ಲಿ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಇದೆ ವೇಳೆ‌ ಸಚಿವ ಡಾ|| ಅಶ್ವತ್ಥನಾರಾಯಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅತಿಥಿಯಾಗಿ ಆಗಮಿಸಿದ ಡಾ| ಬೇಳೂರು ರಾಘವೇಂದ್ರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಯು.ಎ.ಇ.ಯಲ್ಲಿ ನೆಲೆಸಿರುವ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರುಗಳಾದ ಮೋಹನ್, ಹರೀಶ್ ಶೇರಿಗಾರ್, ಸರ್ವೋತ್ತಮ ಶೆಟ್ಟಿ, ಪ್ರಭಾಕರ ಅಂಬಲ್ತೆರೆ, ಹಿದಾಯತ್ ಅಡೂರ್, ಜೋಸೆಫ್ ಮಥಾಯಸ್, ಡಾ|| ಬಿ.ಕೆ.ಯೂಸುಫ್ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನ ಪ್ರಕ್ರಿಯೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ಬೇಳೂರು ರಾಘವೇಂದ್ರ ಶೆಟ್ಟಿಯವರು ಕರ್ನಾಟಕ ಸರಕಾರ ಇತ್ತಿಚಿನ ವರ್ಷಗಳಲ್ಲಿ ಅನುಷ್ಠಾನಗೊಳಿಸಿರುವ ವಿವಿಧ‌ ಕ್ಷೇತ್ರಗಳ ಸಾಧನೆ ಹಾಗೂ ಸವಲತ್ತುಗಳ ಬಗ್ಗೆ ಪೂರ್ಣ‌ ಮಾಹಿತಿ ನೀಡಿದರು.

ಶಶಿಧರ್ ನಾಗರಾಜಪ್ಪ ಕಾರ್ಯಕ್ರಮ ನಿರೂಪಿಸಿದರು. ಕು|ರುಚಿಕಾ ಪಟ್ವಾನ್ ಪ್ರಾರ್ಥನೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಅಂಬಲ್ತೆರೆಯವರು ಸ್ವಾಗತಿಸಿದರು. ಮಲ್ಲಿಕಾರ್ಜುನ ಗೌಡ ಅವರು ವಂದಿಸಿದರು.

ವರದಿ: ಬಿ.ಕೆ.ಗಣೇಶ್ ರೈ ದುಬೈ

Comments are closed.