UAE

ದುಬೈ ಸರ್ಕಾರದ ಗೋಲ್ಡನ್ ವೀಸಾ ಪಡೆದ ಕೊಡಗಿನ ಖ್ಯಾತ ಚಿತ್ರ ಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈ

Pinterest LinkedIn Tumblr

ದುಬೈ: ಯು.ಎ.ಇ. ತನ್ನ 50ನೇ ವರ್ಷದ ನ್ಯಾಶನಲ್ ಡೇ, ಗೋಲ್ಡನ್ ಜುಬಿಲೀ ಸವಿ ನೆನಪಿಗಾಗಿ ಚಿತ್ರಕಲಾವಿದರು ಹಾಗೂ ಶಿಲ್ಪಕಲೆ ಕುಶಲಕರ್ಮಿಗಳಲ್ಲಿ ಸಾಧಕರನ್ನು ಗುರುತಿಸಿ ಹತ್ತು ವರ್ಷಗಳ ಗೋಲ್ಡನ್ ವೀಸಾ ನೀಡಿ ಗೌರವಿಸುವುದನ್ನು ಅನುಷ್ಠಾನಗೊಳಿಸಿದ್ದಾರೆ. ಗೋಲ್ಡನ್ ವೀಸಾ ಗೌರವ ಪ್ರತಿಭಾವಂತರಿಗೆ ದೇಶ ಸಲ್ಲಿಸುವ ವಿಶೇಷ ಗೌರವವಾಗಿದೆ. ವಿಶ್ವದಲ್ಲಿ ಪ್ರಥಮ ಬಾರಿಗೆ ಇಂತಹ ಗೌರವ ನೀಡುವ ಪ್ರಥಮ ದೇಶವಾಗಿದೆ.

ಯು.ಎ.ಇ. ಸರ್ಕಾರ ಗೋಲ್ಡನ್ ವೀಸಾ ನೀಡುವ ಪ್ರಥಮ ಹಂತದಲ್ಲೆ ಗೌರವ ಪಡೆದಿರುವ ಬಿ. ಕೆ. ಗಣೇಶ್ ರೈಯವರು ಕಳೆದ ಎರಡುವರೆ ದಶಕಗಳಿಂದ ದುಬಾಯಿಯಲ್ಲಿ ಜಾಹಿರಾತು ಸಂಸ್ಥೆಯಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ, ಕಂಪ್ಯೂಟರ್ ಗ್ರಾಫಿಕ್ಸ್ ವಿನ್ಯಾಸಕಾರರಾಗಿ, ಶಿಲ್ಪ ರಚನಕಾರರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿ ಅಪಾರ ಸೇವೆ ಸಲ್ಲಿಸಿರುವ ಮೂಲತ ಕರ್ನಾಟಕದ ಪ್ರಕೃತಿಯ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯ ಮಡಿಕೇರಿಯ ಬಿ. ಕೆ. ಗಣೇಶ್ ರೈಯವರ ಸಾಧನೆಗಳನ್ನು ಯು.ಎ.ಇ. ಸರ್ಕಾರ ಗುರುತಿಸಿರುವುದು ಅನಿವಾಸಿ ಭಾರತೀಯರಿಗೆ ಸಂದ ಗೌರವಾಗಿದೆ.

ವಿಶ್ವದ ಗಮನ ಸೆಳೆದಿರುವ ವಾಣಿಜ್ಯ ನಗರ ದುಬಾಯಿಯ ಸೌಂದರ್ಯದಲ್ಲಿ ದೇಶದ ಉದ್ದಗಲಗಳಲ್ಲಿ ಹಗಲು ಮತ್ತು ಜಗಜಗಿಸುವ ರಾತ್ರಿಯಲ್ಲಿನ ಕಂಗೊಳಿಸುತ್ತಿರುವ ಜಾಹಿರಾತು ಫಲಕಗಳು, ವಿವಿಧ ಅಂತರಾಷ್ಟ್ರೀಯ ಸಂಸ್ಥೆಗಳ ಆಕರ್ಷಕ ಜಾಹಿರಾತು ಪರಿಕಲ್ಪನೆ ವಿನ್ಯಾಸಗಳಲ್ಲಿ, ಕಲಾನಿರ್ದೇಶಕರಾಗಿರುವ ಗಣೇಶ್ ರೈಯವರ ಕೈಚಳಕವಿದೆ. ವಾರ್ತಾ ಪತ್ರಿಕೆ ಹಾಗೂ ಪ್ರಕಟವಾಗುವ ಮಾಸಿಕಗಳಲ್ಲಿ ವಾಣಿಜ್ಯ ಜಾಹಿರಾತುಗಳ ಆಕರ್ಷಕ ವಿನ್ಯಾಸ, ಸ್ಮರಣ ಸಂಚಿಕೆಗಳ ವಿನ್ಯಾಸ, ಲೇಸರ್ ಕಟ್ಟಿಂಗ್ ಮೆಶಿನ್, ರೋಟರ್‌ನಲ್ಲಿ ಎನ್‌ಗ್ರೆವ್ ಮಾಡುವ ವಿವಿಧ ಕಲಾಕೃತಿಗಳನ್ನು ಕಂಪ್ಯೂಟರ್ ನಲ್ಲಿ ಗ್ರಾಫಿಕ್ಸ್‌ನ ಮೂಲಕ ವಿನ್ಯಾಸಗೊಳಿಸುವ ಪರಿಣತಿಯಲ್ಲಿ ಅಪಾರ ಅನುಭವ ಪಡೆದವರಾಗಿದ್ದಾರೆ.

ಮಿನಿಯೆಚರ್ ಸೆಟ್ಟಿಂಗ್ಸ್‌ನಲ್ಲಿ ನೈಪುಣ್ಯತೆ ಪಡೆದಿರುವ ಗಣೇಶ್ ರೈಯವರ ಹಸ್ತ ಕೌಶಲ್ಯಕ್ಕೆ ಸಾಕ್ಷಿಯಾಗಿ ಗಲ್ಫ್ ನಾಡಿನ ಹವಾ ನಿಯಂತ್ರಿತ ಮಣ್ಣಿನ ಗಾಳಿ ಗೋಪುರ (ವಿಂಡ್ ಟವರ್), ಸಾಂಪ್ರದಾಯಿಕ ಕಟ್ಟಡಗಳ ಮಾದರಿ, ಭಾರತೀಯ ಸಾಂಪ್ರದಾಯಿಕ ಕಲಾಕೃತಿಗಳ ಮರು ನಿರ್ಮಾಣ, ತೈಲವರ್ಣ, ಜಲವರ್ಣ ಕಲಾಕೃತಿಗಳ ರಚನೆ, ಡಿಜಿಟಲ್ ಡಿಸ್ ಪ್ಲೇಗಳಲ್ಲಿ ಮೂಡಿಬರುವ ಗಲ್ಫ್ ಮತ್ತು ಭಾರತೀಯ ಕಲಾಪ್ರಕಾರಗಳ ಅನಾವರಣ ಕಂಪ್ಯೂಟರ್ ಗ್ರಾಫಿಕ್ಸ್‌ನಲ್ಲಿ ವಿನ್ಯಾಸಗಳು ನೋಡುಗರ ಮನಗೆದ್ದಿದೆ.

ಕೊಡಗಿನ ಪ್ರಖ್ಯಾತ ಚಿತ್ರ ಶಿಲ್ಪಕಲಾವಿದ ಬಿ. ಕೆ. ಗಣೇಶ್ ರೈ ಪ್ರಸ್ತುತ ದುಬಾಯಿಯಲ್ಲಿ ತಮ್ಮ ಮಕ್ಕಳ ಜೊತೆಗೆ ನೆಲೆಸಿದ್ದಾರೆ. ಇವರ ಜನ್ಮ ಭೂಮಿಯ ಸಾಧನೆಗಳನ್ನು ಅವಲೋಕಿಸಿದರೆ, ಮಡಿಕೇರಿ ಪುರಭವನದ ಎದುರಿನಲ್ಲಿರುವ ಕಾವೇರಿ ಮಾತೆಯ ವಿಗ್ರಹವನ್ನು ರಚಿಸಿರುವ ಶಿಲ್ಪಿ ಹಾಗೂ 1980-90 ರ ದಶಕದಲ್ಲಿ ಮಡಿಕೇರಿ ದಸರಾ ಉತ್ಸವದಲ್ಲಿ ವಿವಿಧ ದೇವಾಲಯಗಳ ದಸರಾ ಮಂಟ್ಪಗಳಿಗೆ ಬೃಹತ್ ದೇವತಾ ಮೂರ್ತಿಗಳನ್ನು ತಯಾರಿಸಿ ಕೊಡುತ್ತಿದ್ದರು. ಗಣಪತಿ ಉತ್ಸವಕ್ಕೆ ಗಣಪತಿ ಮೂರ್ತಿಗಳನ್ನು ರಚಿಸಿ ಕೊಡುತ್ತಿದ್ದ ಗಣೇಶ್ ರೈ ಯವರು ಕೊಡಗಿನಲ್ಲಿ ಪ್ರಥಮ ಬಾರಿಗೆ ತಲಕಾವೇರಿ ವರ್ಣ ಚಿತ್ರಗಳನ್ನು ಶಿವಕಾಶಿಯಲ್ಲಿ ಮುದ್ರಿಸಿ ಮಡಿಕೇರಿಯಲ್ಲಿ ಬಿಡುಗಡೆ ಮಾಡುತ್ತಿದ್ದರು. ಕಾವೇರಿ ಮಾತೆಯ ಚಿತ್ರವನ್ನು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪನವರಿಂದ ಮಡಿಕೇರಿ ಪುರಭವದಲ್ಲಿ ಲೋಕಾರ್ಪಣೆ ಮಾಡಿಸಿರುವ ಹೆಗ್ಗಳಿಕೆಯಾಗಿದೆ.

ಹಲವಾರು ಸಂಘ ಸಂಸ್ಥೆಗಳ ಲಾಂಚನ ವಿನ್ಯಾಸ ಮಾಡಿರುವ ಇವರ ಲಾಂಛನಗಳಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಕೊಡಗು ಜೇನು ಮತ್ತು ಮೇಣ ಸಹಕಾರ ಸಂಘದ ಲಾಂಚನಗಳು ಸೇರಿವೆ.

ಯೂಟ್ಯೂಬ್‌ನಲ್ಲಿ Ganesh Rai Kaleidoscope ಹೆಸರಿನಲ್ಲಿ ಸ್ವಂತ ಚಾನೇಲ್ ಹೊಂದಿರುವ ಇವರ ಹೆಚ್ಚಿನ ವೀಡಿಯೊಗಳು ಅರಬ್ ಸಂಸ್ಕೃತಿ, ಪ್ರವಾಸಿ ತಾಣ, ಗಿನ್ನೆಸ್ ದಾಖಲೆಯ ವಸ್ತು ವಿಶೇಷಗಳ ಜೊತೆಗೆ ಭಾರತೀಯ ಮತ್ತು ಗಲ್ಫ್ ನಾಡಿನ ಭಾಂದವ್ಯಕ್ಕೆ ಸಂಬಂಧಿಸಿದ್ದಾಗಿದೆ. ಹೆಚ್ಚಿನ ವೀಡಿಯೊಗಳು ಕನ್ನಡ ಭಾಷೆಯಲ್ಲಿದ್ದು ದುಬಾಯಿಯಲ್ಲಿ ಬಿಡುಗಡೆ ಮಾಡಿರುವ ತಮ್ಮ ತಾಯಿನಾಡಿನ ಕಲೆ ಭಾಷೆ ಸಂಸ್ಕೃತಿಯನ್ನು ಗಲ್ಫ್ ನಾಡಿನಲ್ಲಿ ಅನಾವರಣ ಗೊಳಿಸಿರುವ ಕೀರ್ತಿ ಗಣೇಶ್ ರೈ ಯವರಿಗೆ ಸಲ್ಲುತ್ತದೆ.

ಶಿಲ್ಪ ಕಲಾ ರತ್ನ, ಕಲಾ ಪ್ರವೀಣ, ಕಲಾಕಿರಣ, ಕರ್ನಾಟಕ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಆರ್ಯಭಟ ಅಂತರಾಷ್ತ್ರೀಯ ಪ್ರಶಸ್ತಿ, ಗ್ಲೋಬಲ್ ಮೆನ್ ಪ್ರಶಸ್ತಿ, ಕುವೆಂಪು ವಿಶ್ವಮಾನ್ಯ ಪ್ರಶಸ್ತಿ, ದಾ. ರಾ. ಬೇಂದ್ರೆ ಪ್ರಶಸ್ತಿ, ಕರ್ನಾಟ ಕಲಾ ಪೋಷಕ ಪ್ರಶಸ್ತಿ, ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ, ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ, ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳ ಸರಮಾಲೆಯನ್ನು ಧರಿಸಿರುವ ಬಿ. ಕೆ. ಗಣೇಶ್ ರೈಯರಿಗೆ ಅಬುಧಾಭಿಯಲ್ಲಿ ಯು.ಎ.ಇ. ಗೆ ಭಾರತೀಯ ರಾಯಭಾರಿ ಹಾಗೂ ದುಬಾಯಿ ಇಂಡಿಯನ್ ಕಾನ್ಸೋಲೆಟ್ ಜೆನರಲ್, ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿ, ಇಂಡಿಯನ್ ಅಸೋಸಿಯೇಶನ್ ಶಾರ್ಜಾ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳು ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.
ಲೇಖಕರಾಗಿರುವ ಗಣೇಶ ರೈಯವರು ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ ಅವುಗಳಲ್ಲಿ ಪ್ರಮುಖವಾಗಿರುವ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ, ಸರ್ ಎಂ ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂಗೊಂದು ಸಲಾಂ, ಭೀಮಸೆನ್ ಜೋಷಿ, ಅಟಲ್ ಬಿಹಾರಿ ವಾಜಪೇಯಿ ಇತ್ಯಾದಿ ಹಲವಾರು ಲೇಖನಗಳು ಲಕ್ಷಾಂತರ ವೀಕ್ಷಕರು ವೀಕ್ಷಿಸಿ ದಾಖಲೆಯನ್ನು ನಿರ್ಮಿಸಿದೆ.

ಕೊಡಗಿನಲ್ಲಿರುವ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಪ್ರಕಟಿಸುತ್ತಿದ್ದ ಇವರು ಇಂದು ಮಣಿಪಾಲದ ಉದಯವಾಣಿ ದಿನಪತ್ರಿಕೆಯ ದೇಸಿಸ್ವರ ಅಂತರಾಷ್ಟ್ರೀಯ ಸಂಚಿಕೆಯಲ್ಲಿ ಅಂಕಣಕಾರರಾಗಿದ್ದಾರೆ, ಮಂಗಳೂರಿನಲ್ಲಿ ಪ್ರಕಟವಾಗುವ ಅಮೃತ ಪ್ರಕಾಶ ಮಾಸಿಕದಲ್ಲಿ ಉಪಸಂಪಾದಕರಾಗಿ ಹಾಗೂ ಅಂಕಣಕಾರರಾಗಿ ಪ್ರತಿ ತಿಂಗಳು ಇವರ ಲೇಖನಗಳು ಪ್ರಕಟವಾಗುತ್ತಿದೆ. ನಮ್ಮ ತುಳುನಾಡ್ ಟ್ರಸ್ಟ್ (ರಿ.) ಮಂಗಳೂರು ಈ ಸಂಸ್ಥೆಯ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಗಣೇಶ್ ರೈ ಯವರು ತುಳು ಭಾಷೆಯ ಸಮಗ್ರ ದಾಖಲಿಕರಣ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಂದರ್ಶನವನ್ನು ಹಾಗೂ ಗಣ್ಯಾತಿ ಗಣ್ಯರ ಸಂದರ್ಶನ ಚಿತ್ರಿಕರಣ ಮುಗಿಸಿ ಮುಂದಿನ ಹಂತಕ್ಕೆ ತಯಾರಿ ನಡೆಸುತ್ತಿದ್ದಾರೆ

ಅಕ್ಟೊಬರ್ 17ನೇ ತಾರೀಕಿನಂದು ತಲಕಾವೇರಿಯಲ್ಲಿ ಜಲರೂಪಿಣಿಯಾಗಿ ದರ್ಶನ ನೀಡುವ ಶ್ರೀ ಕಾವೇರಿ ಮಾತೆಯ “ಕಾವೇರಿ ಅಸ್ಟಕಂ” ವೀಡಿಯೊವನ್ನು ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶಿರ್ವಾದದೊಂದಿಗೆ ಲೋಕಾರ್ಪಣೆಯಾಗಿ ಮನೆ ಮನೆಗಳಲ್ಲಿ ಭಕ್ತಿಪೂರ್ವಕವಾಗಿ ಆಲಿಸಲ್ಪಡುತಿದೆ.

ಗಣೇಶ್ ರೈಯವರ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ಸ್ ರಾಷ್ಟ್ರೀಯ ಪತ್ರಿಕೆ ಸೇರಿದಂತೆ ಹಲವಾರು ಹಾಗೂ ಜಿಲ್ಲೆ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸಂದರ್ಶನ ಲೇಖನ ಪ್ರಕಟವಾಗಿದೆ. ಮಡಿಕೇರಿ ಆಕಾಶವಾಣಿ, ಮಂಗಳೂರು ಆಕಾಶವಾಣಿ, ಗಲ್ಫಿನಲ್ಲಿ ಕನ್ನಡ ರೇಡಿಯೊ, ಹಾಗೂ ಉದಯ ಟಿ.ವಿ., ನಮ್ಮಟಿ.ವಿ., ನಮ್ಮಕುಡ್ಲ ಟಿವಿ.ಯಲ್ಲಿ ಸಂದರ್ಶನ ಪ್ರಸಾರವಾಗಿದೆ. ‘ಕನ್ನಡಿಗ ವರ್ಲ್ಡ್’ ಸುದ್ದಿ ಪೋರ್ಟಲ್ ಕೂಡ ಇವರ ಕಾರ್ಯವೈಖರಿ ಬೆಳಕು ಚೆಲ್ಲುವ ವರದಿ ಪ್ರಕಟಿಸಿತ್ತು.

ಬಹುಮುಖ ಪ್ರತಿಭೆಯ ಬಿ. ಕೆ. ಗಣೇಶ್ ರೈಯವರು ಚಿತ್ರ ಕಲಾವಿದರು, ಶಿಲ್ಪ ಕಲಾವಿದರು, ಲೇಖಕರು, ಬರಹಗಾರರು, ಗ್ರಾಫಿಕ್ಸ್ ವಿನ್ಯಾಸಕಾರರು, ಕಾರ್ಯಕ್ರಮ ನಿರೂಪಕರು, ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರ ಎಲ್ಲಾ ಕಾರ್ಯಗಳು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಲ್ಪಟ್ಟು ಇವರಿಗೆ ಗೋಲ್ಡನ್ ವೀಸಾ ನೀಡಿ ಗೌರವಿಸಲಾಗಿದೆ.

Comments are closed.