UAE

ಇಂದಿನಿಂದ IPL 2021: ಯುಎಇನಲ್ಲಿ ಐಪಿಎಲ್ ಪಂದ್ಯಾಟ

Pinterest LinkedIn Tumblr

ದುಬೈ: ಕೋವಿಡ್‌ನಿಂದಾಗಿ ಅರ್ಧದಲ್ಲೇ ನಿಂತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ದ್ವಿತೀಯಾರ್ಧದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಯಲಿವೆ.

ಇಂದು (ಸೆ.19ಭಾನುವಾರ) ಆರಂಭಗೊಳ್ಳಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಸೋಮವಾರದಂದು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಅಂತೆಯೇ ಫೈನಲ್ ಪಂದ್ಯವು ಅಕ್ಟೋಬರ್ 15 ಶುಕ್ರವಾರಕ್ಕೆ ನಿಗದಿಯಾಗಿದೆ.

ಈ ಹಿಂದೆ ಐಪಿಎಲ್ 2021 ಟೂರ್ನಿಯು ಎಪ್ರಿಲ್-ಮೇ ತಿಂಗಳಲ್ಲಿ ನಿಗದಿಯಾಗಿತ್ತು. ಆದರೆ ಜೀವಾ ಸುರಕ್ಷಾ ಬಯೋಬಬಲ್‌ನಲ್ಲಿದ್ದರೂ ಕೆಲವು ಫ್ರಾಂಚೈಸಿಯ ಆಟಗಾರರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದರಿಂದ ಮೇ 4ರಂದು ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ಯುಎಇಯಲ್ಲಿ‌ ಪಂದ್ಯ
ಕೋವಿಡ್ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಉಳಿದಿರುವ ಪಂದ್ಯಗಳನ್ನು ಯುಎಇಗೆ ಸ್ಥಳಾಂತರ ಮಾಡಲಾಗಿದೆ. ಭಾರತದಲ್ಲಿ ಇದುವರೆಗೆ 29 ಪಂದ್ಯಗಳು ಆಯೋಜನೆಯಾಗಿದ್ದು, ಪ್ಲೇ-ಆಫ್ ಹಾಗೂ ಫೈನಲ್ ಸೇರಿದಂತೆ ಉಳಿದಿರುವ 31 ಪಂದ್ಯಗಳು ಯುಎಇನಲ್ಲಿ ಆಯೋಜನೆಯಾಗಲಿವೆ.ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಶೇಖ್ ಜಾಯೆದ್ ಸ್ಟೇಡಿಯಂ, ಅಬುದಾಬಿ, ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆತಿಥೇಯ ಪಂದ್ಯ ನಡೆಯಲಿದೆ.

ಸ್ಟೇಡಿಯಂಗೆ ಪ್ರೇಕ್ಷಕರು…
ಐಪಿಎಲ್ ಮೊದಲಾರ್ಧದ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದರೆ ಯುಎಇನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಂದ್ಯವನ್ನು ಕಣ್ಣಾರೆ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಬ್ಸ್ ತಂಡಗಳನ್ನು ಹೊರತುಪಡಿಸಿ ಇತರೆಲ್ಲ ಆರು ತಂಡಗಳು ಇದುವರೆಗೆ ತಲಾ ಏಳು ಪಂದ್ಯಗಳನ್ನು ಪೂರ್ಣಗೊಳಿಸಿವೆ. ಡೆಲ್ಲಿ ಹಾಗೂ ಪಂಜಾಬ್ ತಲಾ ಎಂಟು ಪಂದ್ಯಗಳನ್ನು ಆಡಿವೆ.

ಆರು ಗೆಲುವು ಹಾಗೂ ಎರಡು ಸೋಲಿನೊಂದಿಗೆ ಒಟ್ಟು 12 ಅಂಕ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಏಳು ಪಂದ್ಯಗಳಲ್ಲಿ 10 ಅಂಕಗಳನ್ನು ಗಳಿಸಿವೆ. ಅಷ್ಟೇ ಅಂಕಗಳನ್ನು ಸಂಪಾದಿಸಿರುವ ಆರ್‌ಸಿಬಿ ‘ರನ್ ರೇಟ್’ ಲೆಕ್ಕಾಚಾರದಲ್ಲಿ ಮೂರನೇ ಸ್ಥಾನದಲ್ಲಿದೆ.

ಭಾರತೀಯ ಕಾಲಮಾನ ಸಂಜೆಯ ಪಂದ್ಯಗಳು 3.30ಕ್ಕೆ ಹಾಗೂ ರಾತ್ರಿಯ ಪಂದ್ಯಗಳು 7.30ಕ್ಕೆ ಸರಿಯಾಗಿ ಆರಂಭವಾಗಲಿವೆ.

Comments are closed.