ಧನದೇವತೆ ಲಕ್ಷ್ಮಿಯನ್ನು ಪೂಜಿಸದವರು ಅಪರೂಪ. ಧನವಿಲ್ಲದೆ ಜಗತ್ತೇ ಇಲ್ಲ ಅಲ್ಲವೇ? ಹಣವೇ ಎಲ್ಲವೂ ಅಲ್ಲವಾದರೂ, ಬದುಕಲು ಹಣ ಬೇಕೇ ಬೇಕು. ಹೀಗಾಗೆ ಎಲ್ಲರೂ ಧನಾರ್ಜನೆಗಾಗಿ ಹಗಲಿರುಳು ದುಡಿಯುತ್ತಾರೆ. ಧನದೇವತೆಯಾದ ಲಕ್ಷ್ಮೀ ಸದಾ ನಿನ್ನ ಕೃಪಾಕಟಾಕ್ಷ ನಮ್ಮ ಮೇಲಿರಲಿ ಎಂದು ಪೂಜಿಸುತ್ತಾರೆ.
ಬಹುತೇಕ ಎಲ್ಲ ಹಿಂದುಗಳ, ಜೈನರ ಅಂಗಡಿ, ಮನೆಗಳಲ್ಲೂ ಲಕ್ಷ್ಮೀಯ ಚಿತ್ರಪಟ ಇದ್ದೇ ಇರುತ್ತದೆ. ನಿತ್ಯವೂ ಭಕ್ತರು ಲಕ್ಷ್ಮಿಯನ್ನು ಪೂಜಿಸುತ್ತಾರಾದರೂ, ಲಕ್ಷ್ಮಿಯ ಪೂಜೆಗೆಂದೇ ಎರಡು ನಿರ್ದಿಷ್ಟ ದಿನಗಳಿವೆ. ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ಹಿಂದಿನ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮೀಯ ಹಬ್ಬದಂದು ಲಕ್ಷ್ಮೀಯನ್ನು ಭಕ್ತಿಭಾವದಿಂದ ಪೂಜಿಸಲು ವ್ರತ ಮಾಡಿದರೆ, ಆಶ್ವಯುಜ ಕೃಷ್ಣ ಅಮಾವಾಸ್ಯೆಯ ದಿನ ಅಂದರೆ ಕಾರ್ತೀಕ ಮಾಸದ ಬಲಿಪಾಡ್ಯಮಿಯ ಹಿಂದಿನ ದಿನ ಸಕಲೈಶ್ವರ್ಯ ಸಂಪತ್ತಿಗಾಗಿ ಧನ ಲಕ್ಷ್ಮೀಯನ್ನು ಪೂಜಿಸಲಾಗುತ್ತದೆ.
ಅಮಾವಾಸ್ಯೆಯಂದು ಲಕ್ಷ್ಮೀಯನ್ನು ಕಳಶ ರೂಪದಲ್ಲಿ ಪೂಜಿಸಿದರೆ ಅಷ್ಟ ಐಶ್ವರ್ಯ ಸಿದ್ಧಿಸುತ್ತದೆ ಎಂಬುದು ನಂಬಿಕೆ. ದೀಪಾವಳಿ ಅಮಾವಾಸ್ಯೆ ಎಂದೂ ಹೆಸರಾದ ಈ ದಿನ ಸಂಜೆ ಸೂರ್ಯಾಸ್ತವಾದ ಬಳಿಕ ಧನಲಕ್ಷ್ಮೀ ಪೂಜೆ ಮಾಡುತ್ತಾರೆ. ಮನೆಯನ್ನು ಶುಭ್ರಗೊಳಿಸಿ, ಮಂಟಪದ ಮೇಲೆ ಕಳಶವಿಟ್ಟು, ಧನದೇವತೆಯಾದ ಲಕ್ಷ್ಮೀಯ ವಿಗ್ರಹ ಅಥವಾ ಚಿತ್ರಪಟವನ್ನಿಟ್ಟು ಜೊತೆಗೆ ನೋಟು, ನಾಣ್ಯಗಳನ್ನು ಅಲಂಕಾರಿಕವಾಗಿ ಜೋಡಿಸಿಟ್ಟು ಪೂಜಿಸುತ್ತಾರೆ. ಮನೆಯ ಹೊಸ್ತಿಲ ಬಳಿ, ತುಳಸಿಕಟ್ಟೆಯ ಬಳಿ ಹಾಗೂ ಕಾಂಪೌಂಡ್ ಮೇಲೆ ಹಣತೆಗಳನ್ನು ಹಚ್ಚಿಡುತ್ತಾರೆ. ಜೈನರು, ರಾಜಸ್ಥಾನದ ವ್ಯಾಪಾರಿ ಜನಾಂಗದವರು ಈ ದಿನದಂದು ಹಳೆಯ ಲೆಕ್ಕವನ್ನೆಲ್ಲಾ ಚುಕ್ತಾ ಮಾಡಿ, ಹೊಸ ಲೆಕ್ಕ ಆರಂಭಿಸುತ್ತಾರೆ. ಅವರಿಗೆ ದೀಪಾವಳಿ ಅಮಾವಾಸ್ಯೆಯಿಂದ ಹೊಸ ವರ್ಷವೂ ಆರಂಭವಾಗುತ್ತದೆ.
ಅಂಗಡಿಗಳಲ್ಲಿ, ಮಳಿಗೆಗಳಲ್ಲಿ, ಹಣಕಾಸು ವಹಿವಾಟು ನಡೆಸುವ ಬ್ಯಾಂಕ್ ಇತ್ಯಾದಿ ವಾಣಿಜ್ಯ ಸಂಸ್ಥೆಗಳಲ್ಲಿ ಕೂಡ ಅಂದು ಧನಲಕ್ಷ್ಮೀ ಪೂಜೆ ಮಾಡುವ ಸಂಪ್ರದಾಯವಿದೆ.