ಕ್ರೀಡೆ

ಪೊಲಾರ್ಡ್‌ ಸ್ಫೋಟಕ ಬ್ಯಾಟಿಂಗ್; ರೋಚಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್

Pinterest LinkedIn Tumblr

ಹೊಸದಿಲ್ಲಿ: ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗವಾಗಿರುವ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ಅಕ್ಷರಶಃ ಫೋರ್‌-ಸಿಕ್ಸರ್‌ಗಳ ಸುರಿಮಳೆಯಾಗಿ ರನ್‌ ಹೊಳೆ ಹರಿಯಿತು. ಹೈ ಸ್ಕೋರಿಂಗ್ ಪಂದ್ಯದಲ್ಲಿ ಕೀರನ್ ಪೊಲಾರ್ಡ್‌ ಅವರ ಪವರ್‌ ಹಿಟ್ಟಿಂಗ್ ಬಲದಿಂದ ಮಿಂಚಿದ ಮುಂಬೈ ಇಂಡಿಯನ್ಸ್‌ 4 ವಿಕೆಟ್‌ಗಳ ಸ್ಮರಣೀಯ ಜಯ ತನ್ನದಾಗಿಸಿಕೊಂಡಿತು.

ಗೆಲ್ಲಲು ಮುಂಬೈ ಇಂಡಿಯನ್ಸ್‌ ತಂಡಕ್ಕೆ 219 ರನ್‌ಗಳ ಅಸಾಧ್ಯದ ಗುರಿ ಲಭ್ಯವಾಗಿತ್ತು. ಐಪಿಎಲ್ ಇತಿಹಾಸದಲ್ಲಿ ಮುಂಬೈ ತಂಡ ಈವರೆಗೆ ಇಷ್ಟು ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಮೆಟ್ಟಿನಿಂತ ಉದಾಹರಣೆಯೇ ಇರಲಿಲ್ಲ.

ಆದರೆ, ವೆಸ್ಟ್‌ ಇಂಡೀಸ್‌ನ ದೈತ್ಯ ಆಲ್‌ರೌಂಡರ್‌ ಕೀರನ್ ಪೊಲಾರ್ಡ್‌ ರುದ್ರ ನರ್ತನ ಮಾಡಿದ್ದರು. ಸೂಪರ್‌ ಕಿಂಗ್ಸ್‌ ಬೌಲರ್‌ಗಳನ್ನು ಚೆಂಡಾಡಿದ ಪೊಲಾರ್ಡ್‌ ಕೇವಲ 34 ಎಸೆತಗಳಲ್ಲಿ 6 ಫೋರ್‌ ಮತ್ತು ಬರೋಬ್ಬರಿ 8 ಸಿಕ್ಸರ್‌ಗಳೊಂದಿಗೆ ಅಜೇಯ 87 ರನ್‌ಗಳನ್ನು ಸಿಡಿಸಿ ಕೊನೆಯ ಎಸೆತದಲ್ಲಿ ತಂಡವನ್ನು ಜಯದ ದಡ ಮುಟ್ಟಿಸಿದರು.

ಟಾಸ್‌ ಸೋತು ಬ್ಯಾಟ್‌ ಮಾಡುವಂತ್ತಾದ ಚೆನ್ನಯ ತಂಡಕ್ಕೆ ಕನಿಷ್ಠ 200 ರನ್‌ಗಳ ಅಗತ್ಯವಿತ್ತು. ಆರಂಭದಲ್ಲೇ (4) ಋತುರಾಜ್ ಗಾಯಕ್ವಾಡ್‌ ವಿಕೆಟ್‌ ಕಳೆದುಕೊಂಡರೂ ನಂತರ ಬಂದ ಬ್ಯಾಟ್ಸ್‌ಮನ್‌ಗಳ ಸ್ಫೋಟಕ ಆಟದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 218 ರನ್‌ಗಳ ಶಿಖರ ನಿರ್ಮಿಸಿತು. ಇದು ಮುಂಬೈ ಎದುರು ಚೆನ್ನೈ ದಾಖಲಿಸಿದ ಈವರೆಗಿನ ಗರಿಷ್ಠ ಮೊತ್ತವಾಗಿದೆ.

ಸೂಪರ್‌ ಕಿಂಗ್ಸ್‌ ಪರ ಗರ್ಜಿಸಿದ ಫಾಫ್ ಡು’ಪ್ಲೆಸಿಸ್‌ 28 ಎಸೆತಗಳಲ್ಲಿ 50 ರನ್‌ ಸಿಡಿಸಿದರೆ, ಮೊಯೀನ್ ಅಲಿ 36 ಎಸೆತಗಳಲ್ಲಿ 58 ರನ್‌ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಬೇಕಿದ್ದ ಭದ್ರ ಬುನಾದಿ ಹಾಕಿ ಕೊಟ್ಟಿತು. ಫಾಫ್-ಅಲಿ ಜೋಡಿ 2ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿತು.

ಐಪಿಎಲ್‌ನಲ್ಲಿ ಅತ್ಯಂತ ಬಲಿಷ್ಠ ಡೆತ್‌ ಬೌಲಿಂಗ್ ಹೊಂದಿರುವ ಮುಂಬೈ ಇಂಡಿಯನ್ಸ್‌ ಎದುರು ಇನಿಂಗ್ಸ್‌ ಅಂತ್ಯದ ಓವರ್‌ಗಳಲ್ಲಿ ಅಂಬಾಟಿ ರಾಯುಡು ಸವಾರಿ ನಡೆಸಿದರು. 266.67ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರಾಯುಡು ಕೇವಲ 27 ಎಸೆತಗಳಲ್ಲಿ 4 ಫೋರ್‌ ಮತ್ತು 7 ಸಿಕ್ಸರ್‌ಗಳೊಂದಿಗೆ ಅಜೇಯ 72 ರನ್‌ಗಳನ್ನು ಸಿಡಿಸಿದರು. ರಾಯುರು ಆರ್ಭಟಕ್ಕೆ ಸಿಕ್ಕಿ ನಲುಗಿದ ಜಸ್‌ಪ್ರೀತ್‌ ಬುಮ್ರಾ ತಮ್ಮ 4 ಓವರ್‌ಗಳಲ್ಲಿ 1 ವಿಕೆಟ್‌ಗೆ 56 ರನ್‌ ನೀಡಿದರು. ಇದು ಅವರ ಐಪಿಎಲ್‌ ವೃತ್ತಿಬದುಕಿನ ಅತ್ಯಂತ ಹೀನಾಯ ಬೌಲಿಂಗ್ ಪ್ರದರ್ಸನವಾಗಿದೆ.

ಟಾಸ್‌ ವೇಳೆ ಮಾತನಾಡಿದ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಆಡುವ ಹನ್ನೊಂದರ ಬಳಗದಲ್ಲಿ ಕೆಲ ತಾಂತ್ರಿಕ ಬದಲಾವಣೆ ಮಾಡಿರುವುದಾಗಿ ಹೇಳಿದ್ದಾರೆ. ನೇಥನ್ ಕೌಲ್ಟರ್‌ ನೈಲ್‌ ಸ್ಥಾನದಲ್ಲಿ ಜೇಮ್ಸ್‌ ನೀಶಮ್‌ ಮತ್ತು ಆಫ್‌ ಸ್ಪಿನ್ನರ್‌ ಜಯಂತ್‌ ಯಾದವ್‌ ಸ್ಥಾನದಲ್ಲಿ ಮಧ್ಯಮ ವೇಗಿ ಧವಳ್ ಕುಲಕರ್ಣಿ ಆಡುವ ಹನ್ನೊಂದರ ಬಳಗ ಸೇರಿದ್ದಾರೆ. ಮತ್ತೊಂದೆಡೆ ಸಿಎಸ್‌ಕೆ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದಿದೆ.

ಸಿಎಸ್‌ಕೆ ಪ್ಲೇಯಿಂಗ್ ಇಲೆವೆನ್
ಋತುರಾಜ್ ಗಾಯಕ್ವಾಡ್, ಫಾಫ್ ಡು’ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್ ಧೋನಿ (ವಿಕೆಟ್‌ಕೀಪರ್‌ / ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ಲುಂಗಿ ಎನ್ಗಿಡಿ, ದೀಪಕ್ ಚಹರ್.

ಎಂಐ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ’ಕಾಕ್ (ವಿಕೆಟ್‌ಕೀಪರ್‌), ಸೂರ್ಯಕುಮಾರ್ ಯಾದವ್, ಕೈರೊನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಜೇಮ್ಸ್ ನೀಶಮ್, ರಾಹುಲ್ ಚಹರ್, ಧವಳ್ ಕುಲಕರ್ಣಿ, ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.

Comments are closed.