ಕ್ರೀಡೆ

ಅಥ್ಲೀಟ್‌ ಹಿಮಾ ದಾಸ್‌ ಈಗ ಅಸ್ಸಾಂ ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ

Pinterest LinkedIn Tumblr

ನವದೆಹಲಿ: ತನ್ನ ಓಟದ ಮೂಲಕವೇ ಇಂದು ಇಡೀ ದೇಶದ ಮನೆಮಗಳಾಗಿ ಗುರುತಿಸಿಕೊಂಡಿರುವ ಖ್ಯಾತ ಅಥ್ಲೀಟ್‌ ಹಿಮಾ ದಾಸ್‌ ಈಗ ಅಸ್ಸಾಂ ಪೊಲೀಸ್‌ ಇಲಾಖೆಯಲ್ಲಿ ಉಪ ಪೊಲೀಸ್‌ ವರಿಷ್ಠಾಧಿಕಾರಿ(ಡಿಎಸ್‌ಪಿ)ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಹಿಮಾ ದಾಸ್‌ ಬಾಲ್ಯದಲ್ಲಿ ಕಂಡಂತಹ ಕನಸು ನನಸಾಗಿದೆ. ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ ದೇಶದ ಹೆಮ್ಮೆಯ ಕ್ರೀಡಾಪಟುವಿಗೆ ನೇಮಕಾತಿ ಪತ್ರ ನೀಡುವ ಮೂಲಕ ಸನ್ಮಾನಿಸಿದ್ದಾರೆ.

ದೇಶದ ಅತ್ಯಂತ ಪ್ರಮುಖ ಅಥ್ಲೀಟ್‌ ಹಿಮಾ ದಾಸ್‌ ಕೊನೆಗೂ ಬಾಲ್ಯದಲ್ಲಿ ತಾವು ಕಂಡಂತಹ ಕನಸನ್ನು ಕ್ರೀಡೆಯ ಮೂಲಕ ಡಿಎಸ್ಪಿ ಹುದ್ದೆಗೇರಿ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ.

ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಹಿಮಾ ದಾಸ್ ಶಾಲೆಯಲ್ಲಿ ಓದುತ್ತಿದ್ದಾಗಲೇ ಪೊಲೀಸ್‌ ಹುದ್ದೆಗೆ ಸೇರಬೇಕು ಎಂದು ಬಯಸಿದ್ದೆ, ನನ್ನ ಅಮ್ಮ ಸಹಾ ನಾನು ಪೊಲೀಸ್‌ ಆಗಲು ಹಾರೈಸಿದ್ದರು ಎಂದು ಹೇಳಿದ್ದಾರೆ. ರಾಜ್ಯದ ಸ್ಥಿತಿಗತಿ ಮತ್ತಷ್ಟು ಉತ್ತಮ ಪಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ, ಆದರೆ ಅದೆಲ್ಲದಕ್ಕಿಂತ ಹೆಚ್ಚಾಗಿ ನಾನು ಕ್ರೀಡೆಯಲ್ಲೇ ಮುಂದುವರೆಯುತ್ತೇನೆ. ಯಾಕೆಂದರೆ ಕ್ರೀಡೆಯಿಂದಲೇ ಇದೆಲ್ಲವೂ ಸಿಕ್ಕಿದೆ ಎಂದು ಹೇಳಿದ್ದಾರೆ.

ಹರ್ಯಾಣದಂತೆ ಅಸ್ಸಾಂ ರಾಜ್ಯದಲ್ಲೂ ಮತ್ತಷ್ಟು ಉತ್ತಮ ಕ್ರೀಡಾಪ್ರತಿಭೆಗಳನ್ನು ಗುರುತಿಸಿ, ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸುವಂತೆ ಮಾಡಲು ಪ್ರಯತ್ನಿಸುವುದಾಗಿ ಹಿಮಾ ದಾಸ್ ಹೇಳಿದ್ದಾರೆ.

ಹಿಮಾ ದಾಸ್‌ ರನ್ನು ಡಿಎಸ್‌ಪಿಯಾಗಿ ನೇಮಿಸಿದ್ದು ಹಲವು ಯುವ ಜನತೆಗೆ ಕ್ರೀಡೆಯಲ್ಲಿ ಶ್ರೇಷ್ಠ ಸಾಧನೆ ಮಾಡಲು ಸ್ಪೂರ್ತಿ ನೀಡುವ ವಿಶ್ವಾಸವಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ ಹೇಳಿದ್ದಾರೆ. ಹಿಮಾ ದಾಸ್‌ 2018ರಲ್ಲಿ ನಡೆದ ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ ಓಟದಲ್ಲಿ ಪಾಲ್ಗೊಂಡು ಚಾಂಪಿಯನ್‌ ಆಗುವ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು.ಇದಾದ ಬಳಿಕ ಹಿಮಾ ಜಕಾರ್ತಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನ ಮಹಿಳೆಯರ 4*400 ಮೀಟರ್‌ ರಿಲೇ, ಮಿಶ್ರ ರಿಲೇಯಲ್ಲಿ ಚಿನ್ನದ ಪದಕ ಗೆದ್ದ ತಂಡದ ಸದಸ್ಯೆಯಾಗಿದ್ದರು.

Comments are closed.