ಅಹ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಕೇವಲ ಎರಡೇ ದಿನದಲ್ಲಿ ಮುಕ್ತಾಯಗೊಂಡಿದ್ದು, ಇದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಪರೋಕ್ಷ ಅಸಮಾಧಾನಕ್ಕೆ ಕಾರಣವಾಗಿದೆ.
ಹೌದು… ಇಂಗ್ಲೆಂಡ್–ಭಾರತ ತಂಡಗಳ ನಡುವಣ ಟೆಸ್ಟ್ ಪಂದ್ಯ ಎರಡೇ ದಿನಗಳಲ್ಲಿ ಫಲಿತಾಂಶ ಕಂಡಿರುವುದಕ್ಕೆ ಕೆಲವು ಹಿರಿಯ ಆಟಗಾರರು ಅವರ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ. ಪ್ರಮುಖವಾಗಿ ಪಿಚ್ ವಿರುದ್ಧ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದು, ಟೆಸ್ಟ್ ಕ್ರಿಕೆಟ್ ನ ಹಿತದೃಷ್ಟಿಯಿಂದ ಇಂತಹ ಬೆಳವಣಿಗೆ ಸರಿಯೋ ತಪ್ಪೋ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಪಂದ್ಯದ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಎರಡೇ ದಿನಗಳಲ್ಲಿ ಫಲಿತಾಂಶ ಬಂದಿರುವುದು ಟೆಸ್ಟ್ ಕ್ರಿಕೆಟ್ನ ದೃಷ್ಟಿಯಿಂದ ಒಳ್ಳೆಯದೋ ಕೆಟ್ಟದ್ದೋ ತಿಳಿಯುತ್ತಿಲ್ಲ. ಇಂಥ ಪಿಚ್ನಲ್ಲಿ ಅನಿಲ್ ಕುಂಬ್ಳೆ ಅಥವಾ ಹರಭಜನ್ ಸಿಂಗ್ ಬೌಲಿಂಗ್ ಮಾಡಿದಿದ್ದರೆ ಅವರ ವಿಕೆಟ್ ಗಳಿಗೆ ಈಗ 1000 ಹಾಗೂ 800 ಆಗಿರುತ್ತಿತ್ತು ಎಂದು ಯೋಚಿಸುತ್ತಿದ್ದೇನೆ. ಆದಾಗ್ಯೂ ಉತ್ತಮ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್, ಅಶ್ವಿನ್ ಹಾಗೂ ಇಶಾಂತ್ಗೆ ಅಭಿನಂದನೆಗಳು’ ಎಂದು ಟ್ವೀಟ್ ಮಾಡಿದ್ದಾರೆ.