ಕರಾವಳಿ

ಕಂಬಳದಲ್ಲಿ ಬೈಂದೂರು ವಿಶ್ವನಾಥ್ ಹೊಸ ದಾಖಲೆ; 9.15 ಸೆಕೆಂಡಲ್ಲಿ 100 ಮೀ ಓಟ..!

Pinterest LinkedIn Tumblr

ಉಡುಪಿ: ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳದಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಶನಿವಾರ ಐಕಳದಲ್ಲಿ ನಡೆದ ಕಾಂತಾಂಬಾರೆ-ಬೂದಾಬಾರೆ ಕಂಬಳಲ್ಲಿ ವಿಶ್ವನಾಥ್‌ ಎಂಬವರು ಓಡಿಸಿದ ಕೋಣಗಳು 100 ಮೀಟರ್‌ ದೂರವನ್ನು ಕೇವಲ 9.15 ಸೆಕೆಂಡ್‌ನಲ್ಲಿ ತಲುಪುವ ಮೂಲಕ ಹೊಸ ದಾಖಲೆ ಸೃಷ್ಠಿಯಾಗಿದೆ.

ಆ ಮೂಲಕ ಕಂಬಳ ಕೆರೆಯ ಹುಸೇನ್‌ ಬೋಲ್ಟ್‌ ಎಂದೇ ಖ್ಯಾತಿ ಪಡೆದಿದ್ದ ಶ್ರೀನಿವಾಸ್‌ ಗೌಡ ಅವರು ಈ ಹಿಂದೆ ಮಾಡಿದ್ದ ದಾಖಲೆ ಮುರಿದು ಹೊಸದೊಂದು ದಾಖಲೆ ನಿರ್ಮಿಸಲಾಗಿದೆ. ಆ ಮೂಲಕ ಐಕಳದ ಕಾಂತಾಂಬಾರೆ-ಬೂದಾಬಾರೆ ಕಂಬಳದಲ್ಲಿ ಸತತ ಎರಡನೇ ವರ್ಷ ಮತ್ತೊಂದು ದಾಖಲೆ ನಿರ್ಮಾಣವಾಗಿದೆ.
ಈ ಹಿಂದೆ ಅಕ್ಕೇರಿ ಸುರೇಶ್‌ ಶೆಟ್ಟಿ 100 ಮೀಟರ್‌ ದೂರವನ್ನು 9.37 ಸೆಕೆಂಡ್‌, ಶ್ರೀನಿವಾಸ ಗೌಡ 9.55 ಸೆಕೆಂಡ್‌, ಆನಂದ್‌ 9.57 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ದಾಖಲೆ ಮಾಡಿದ್ದರು.

ಐಕಳದಲ್ಲಿ ನಡೆದ ಕಾಂತಂಬಾರೆ-ಬೂದಾಬಾರೆ ಕಂಬಳದ ಚಾನ್ಸ್‌ ಓಟದಲ್ಲಿ ಬೋಳದ ಗುತ್ತು ಸತೀಶ್‌ ಶೆಟ್ಟಿ ಅವರ ಬೊಳ್ಳ ಮತ್ತು ದೋನಿ ಕೋಣಗಳನ್ನು ಬೈಂದೂರಿನ ವಿಶ್ವನಾಥ್‌ ಓಡಿಸಿದ್ದು, 125 ಮೀಟರ್‌ ಓಟವನ್ನು 11.44 ಸೆಕೆಂಡ್‌ಗಳಲ್ಲಿ ಓಡಿಸಿದ್ದಾರೆ. ಇದನ್ನು 100 ಮೀಟರ್‌ಗೆ ತಾಳೆ ಮಾಡಿದರೆ 9.15 ಸೆಕೆಂಡ್‌ ಆಗುತ್ತದೆ. ಓಟದ ವೇಗವನ್ನು ಅಳೆಯಲು ಆಟೋ ಸ್ಟಾರ್ಟ್‌ ಹಾಗೂ ಸೆನ್ಸಾರ್‌ ಅಳವಡಿಸಿದ್ದು ಅದರಿಂದಲೇ ವೇಗವನ್ನು ನಿಖರವಾಗಿ ಅಳೆಯಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Comments are closed.