ಕ್ರೀಡೆ

ಗಬ್ಬಾ ಐತಿಹಾಸಿಕ ಗೆಲುವಿನ ಬಗ್ಗೆ ಆಟಗಾರರಿಗೆ ಡ್ರೆಸ್ಸಿಂಗ್ ರೂಂನಲ್ಲಿ ರವಿಶಾಸ್ತ್ರಿ ಹೇಳಿದ ವಿಡಿಯೊ ವೈರಲ್ !

Pinterest LinkedIn Tumblr

ಬ್ರಿಸ್ಬೇನ್: ಅಲ್ಲಿ ಪ್ರತಿ ಮಾತಿಗೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯಾಯ್ತು, ಸಂತೋಷದ ಕೇಕೆ ಕೇಳಿಬಂತು, ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ತಂಡದ ಆಟಗಾರರನ್ನು ಹೊಗಳುತ್ತಿದ್ದಂತೆ ಆಟಗಾರರು ಖುಷಿಯಿಂದ ಕುಣಿದು ಕುಪ್ಪಳಿಸಿದರು.

ನೀವು ಯೋಧರಂತೆ ಧೈರ್ಯ, ಉತ್ಸಾಹ ತೋರಿಸಿ ಆಟವಾಡಿದ್ದೀರಿ, ನಿಮಗೆ ಹ್ಯಾಟ್ಸಾಫ್ ಎಂದು ರವಿ ಶಾಸ್ತ್ರಿಯವರು ಹೇಳಿದಾಗ ಆಟಗಾರರಲ್ಲಿ ಸಾರ್ಥ್ಯಕತೆ, ಹೆಮ್ಮೆ ಕಂಡುಬಂತು. ಭಾರತ ತಂಡದ ಆಟಗಾರರು ಪ್ರದರ್ಶಿಸಿದ ಸಮಯೋಚಿತ ಆಟದಿಂದ ಸ್ಬೇನ್ ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಟೀಂ ಇಂಡಿಯಾ 32 ವರ್ಷಗಳ ನಂತರ ಐತಿಹಾಸಿಕ ಗೆಲುವು ದಾಖಲಿಸಿತು.

ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಸುಮಾರು 3 ನಿಮಿಷಕ್ಕೂ ಅಧಿಕ ಕಾಲ ಮಾತನಾಡಿದ ರವಿಶಾಸ್ತ್ರಿ, ನೀವು ತೋರಿಸಿದ ಧೈರ್ಯ, ಸಂಕಲ್ಪ, ಉತ್ಸಾಹ ಅದ್ವಿತೀಯ. ಮೊದಲ ಟೆಸ್ಟ್ ನಲ್ಲಿ 36ಕ್ಕೆ ಆಲ್ ಔಟ್ ಆದರೂ, ಪಂದ್ಯದಲ್ಲಿ ಹಲವರು ಗಾಯಗೊಂಡರೂ ನಿಮ್ಮಲ್ಲಿ ನಿಮಗೆ ನಂಬಿಕೆಯಿತ್ತು, ಅದರಿಂದ ಅಂತಿಮ ಟೆಸ್ಟ್ ನಲ್ಲಿ ವೀರೋಚಿತ ಜಯ ಕಂಡಿರಿ ಎಂದು ಅಜಂಕ್ಯ ರಹಾನೆ ನಾಯಕತ್ವದ ತಂಡಕ್ಕೆ ಬೆನ್ನುತಟ್ಟಿದರು.

ನಿಮ್ಮ ಈ ಸಾಧನೆ ರಾತ್ರಿ ಕಳೆದು ಹಗಲಾಗುವುದರೊಳಗೆ ಏಕಾಏಕಿ ಸಿಕ್ಕಿರುವುದಲ್ಲ. ನಿಮ್ಮಲ್ಲಿ ನೀವು ನಂಬಿಕೆಯಿಟ್ಟು, ಒಟ್ಟು ತಂಡವಾಗಿ ಒಗ್ಗಟ್ಟಿನಿಂದ ಆಟವಾಡಿ ಮುನ್ನಡೆಸಿದ್ದರಿಂದ ಸಾಧ್ಯವಾಯಿತು, ನಿಮ್ಮ ಈ ಗೆಲುವಿಗೆ ಭಾರತ ಅಲ್ಲ, ಇಡೀ ಜಗತ್ತು ಎದ್ದು ನಿಂತು ನಿಮಗೆ ಸೆಲ್ಯೂಟ್ ಹೇಳುತ್ತದೆ ಎಂದು ರವಿಶಾಸ್ತ್ರಿ ಆಟಗಾರರಿಗೆ ಡ್ರೆಸ್ಸಿಂಗ್ ರೂಂನಲ್ಲಿ ಹಾಡಿ ಹೊಗಳಿರುವ ವಿಡಿಯೊ ವೈರಲ್ ಆಗಿದೆ.

ಇಂದು ನೀವು ಮೆರೆದ ಸಾಧನೆಯನ್ನು ಇಲ್ಲಿಗೆ ಮರೆಯಬೇಡಿ, ಈ ಕ್ಷಣವನ್ನು ನೀವು ಖುಷಿಯಿಂದ ಅನುಭವಿಸಬೇಕು. ಈ ಕ್ಷಣ ಹಾಗೆ ಹೋಗಲು ಬಿಡಬೇಡಿ ಎಂದು ಯುವ ತಂಡವನ್ನು ರವಿಶಾಸ್ತ್ರಿ ಹುರಿದುಂಬಿಸಿದರು.

ಬ್ರಿಸ್ಬೇನ್ ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲುವ ಸಾಧಿಸುವ ಮೂಲಕ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡದ 32 ವರ್ಷಗಳ ಗರ್ವವನ್ನು ಭಂಗ ಮಾಡಿದೆ.ಬ್ರಿಸ್ಬೇನ್ ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3 ವಿಕೆಟ್‌ಗಳ ಅಂತರದಲ್ಲಿ ಮಣಿಸುವ ಮೂಲಕ ಭಾರತ ತಂಡ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ಕೈ ವಶ ಮಾಡಿಕೊಂಡಿದೆ. ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಗುರಿಯನ್ನು ಭಾರತ ತಂಡ 7 ವಿಕೆಟ್ ಕಳೆದುಕೊಂಡು ಮೆಟ್ಟಿ ನಿಂತು ಗೆದ್ದು ಬೀಗಿತು.

ಭಾರತ ಮುಂದಿನ ತಿಂಗಳು ಫೆಬ್ರವರಿ 5ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ.

Comments are closed.