ಕರಾವಳಿ

ದಿಲ್ಲಿಯಿಂದ ಹಳ್ಳಿಯವರೆಗೆ ಬಿಜೆಪಿ ಹೆಮ್ಮರವಾಗಿ ಬೆಳೆಯುತ್ತಿದೆ: ಸಂಸದ ಬಿ.ವೈ ರಾಘವೇಂದ್ರ

Pinterest LinkedIn Tumblr

ಕುಂದಾಪುರ: ಲೋಕಸಭೆಯಲ್ಲಿ ಎರಡೇ ಎರಡು ಸಂಸದರು ಮತ್ತು ವಿಧಾನ ಸಭೆಯಲ್ಲಿ ಇಬ್ಬರು ಶಾಸಕರನ್ನು ಹೊಂದಿದ್ದ ಬಿಜೆಪಿ ಇಂದು ಲೋಕಸಭೆ ಹಾಗೂ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಪ್ರಸಕ್ತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಅತೀಹೆಚ್ಚು ಗ್ರಾಮಗಳು ಬಿಜೆಪಿ ಬೆಂಬಲಿತರು ಆರಿಸಿ ಬರುವ ಮೂಲಕ ಗ್ರಾಮಗಳಲ್ಲೂ ಬಿಜೆಪಿ ಆಳ್ವಿಕೆ ಶಕೆ ಆರಂಭವಾಗಿದ್ದು ಬಿಜೆಪಿ ಹೆಮ್ಮರವಾಗಿ ಬೆಳೆಯುತ್ತಿದೆ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ನಡೆದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾವೇಶ ಉದ್ಘಾಟಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರ ಜವಾಬ್ದಾರಿ ಹೆಚ್ಚಿದ್ದು, ಗ್ರಾಮದ ಸಮಸ್ಯೆ ಅರಿತು ಗ್ರಾಮಕ್ಕೆ ಬರುವ ಅನುದಾನ ಸಮರ್ಥವಾಗಿ ಬಳಸಿಕೊಂಡು ಕೆಲಸ ಮಾಡಿ ಬಿಜೆಪಿ ಮತ್ತಷ್ಟು ಬಲ ಪಡಿಸುವಂತೆ ಕರೆಕೊಟ್ಟರು.

ರಾಜ್ಯದಲ್ಲಿ 76182 ಸಾವಿರ ಗ್ರಾಮ ಪಂಚಾಯಿತಿ ಸದಸ್ಯರ ಪೈಕಿ 42163 ಸಾವಿರ ಬಿಜೆಪಿ ಬೆಂಬಲಿತರು ಆಯ್ಕೆ ಆಗಿದ್ದಾರೆ. ಉಡುಪಿ ಜಿಲ್ಲೆಯ 2351 ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರು 1485 ಕ್ಷೇತ್ರದಲ್ಲಿ ಆಯ್ಕೆ ಆಗಿದ್ದು, ಬೈಂದೂರು ತಾಲೂಕಿನಲ್ಲಿ 562ಗ್ರಾಪಂ ಸದಸ್ಯರಲ್ಲಿ 324 ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದು, ಬೈಂದೂರು ಬಿಜೆಪಿ ಭದ್ರಕೋಟೆ ಎನ್ನುವುದ ಮತ್ತೊಮ್ಮೆ ಸಾಬೀತು ಮಾಡಿದೆ. ಈ ಗೆಲವು ಕಾರ್‍ಯಕರ್ತರ ಪರಿಶ್ರಮದಿಂದ ಸಿಕ್ಕಿದೆ ಎಂದು ಹೇಳಿದರು.

ಬಿಜೆಪಿ ಗೆಲುವಿನ ಒಟ ವಿಧಾನ ಪರಿಷತ್, 17 ಕ್ಷೇತ್ರದ ಉಪಚುನಾವಣೆಯಿಂದ ಗ್ರಾಪಂ ಚುನಾವಣೆ ತನಕ ಮುಂದುವರಿದಿದ್ದು, ಮುಂದೆ ಜಿಪಂ, ತಾಪಂ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ಓಟ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟ ಅವರು, ಗ್ರಾಪಂ ಸದಸ್ಯರು ಶ್ರದ್ಧೆ,ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಜನರ ವಿಶ್ವಾಸಗಳಿಸುವಂತೆ ಸಲಹೆ ಮಾಡಿದರು.

ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬೇರುಮಟ್ಟದಿಂದ ಗಟ್ಟಿಯಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗ್ರಾಮಗಳಿಗೆ 1 ಕೋಟಿ ಅನುದಾನ ನೀಡುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಒಂದು ಕುಟುಂಬದಂತೆ ಕೆಲಸ ಮಾಡಿಕೊಂಡು ಹೋಬೇಕು. ಗ್ರಾಮ ಪಂಚಾಯಿತಿ 95 ಸಾವಿರ ಸದಸ್ಯರಿಗೆ 2 ಸಾವಿರ ಗೌರವ ಧನ ಸರ್ಕಾರ ನೀಡುವಂತೆ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಹಾರ ಮತ್ತು ನಾಗರಿಕ ಪೂರೈಕೆ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಬು ಶೆಟ್ಟಿ ತಗ್ಗರ್ಸೆ, ಶೋಭಾ ಪುತ್ರನ್, ಸುರೇಶ್ ಬಟವಾಡಿ, ಶಂಕರ ಪೂಜಾರಿ ಯಡ್ತರೆ, ಕುಂದಾಪುರ ತಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲತಿ, ಬೈಂದೂರು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಕುಂದಾಪುರ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ಸಂತೋಷ ಮಡಿವಾಳ, ಭಾಗೀರತಿ, ಶರತ್ ಕುಮಾರ್ ಶೆಟ್ಟಿ, ಗೋಪಾಲ ಕಾಂಚನ್, ಬಾಲಕೃಷ್ಣ ಭಟ್, ಮಾಲತಿ ಜೈನ್, ಸಂತೋಷ ಪೂಜಾರಿ, ಆನಂದ ಖಾರ್ವಿ ಮುಂತಾದವರು ಇದ್ದರು.

ಇದೇ ಸಂದರ್ಭದಲ್ಲಿ ಹಕ್ಲಾಡಿ ಗ್ರಾಮ ಪಂಚಾಯಿತಿಗೆ ಐದು ಬಾರಿ ಆಯ್ಕೆಯಾಗಿದ್ದ ಹಕ್ಲಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸುಭಾಶ್ ಶೆಟ್ಟಿ ಹೊಳ್ಮಗೆ ಅಣ್ಣಪ್ಪ ನಾಯ್ಕ್ ತಮ್ಮ ಬೆಂಬಲಿಗರ ಜೊತೆ ಬಿಜೆಪಿ ಸೇರಿದರು.

ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯದರ್ಶಿನಿ ಬಿಜೂರು ನಿರೂಪಿಸಿ, ಪ್ರಕಾಶ್ ಪೂಜಾರಿ ಜಡ್ಡು ವಂದಿಸಿದರು.

ಬೈಂದೂರು ಮತದಾರರು ಅಭಿವೃದ್ಧಿ ಪರವಾಗಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಆಯ್ಕೆ ಮಾಡುವ ಮೂಲಕ ಗ್ರಾಮ ಮಟ್ಟದಲ್ಲಿಯೂ ಬಿಜೆಪಿ ಪಕ್ಷವನ್ನು ಬಲಿಷ್ಠವಾಗಿ ಬೆಳೆಸುವ ಮೂಲಕ ಗ್ರಾಮೋದ್ಧಾರಕ್ಕೆ ಮುನ್ನುಡಿ ಬರೆದಿದ್ದಾರೆ. ಕಳೆದ ವಿಧಾನ ಸಭೆ, ಲೋಕಸಭೆಯಲ್ಲಿ ಬಿಜೆಪಿ ಬೆಂಬಲಿಸಿ ಬೈಂದೂರು ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತೀ ಹೆಚ್ಚು ಸದಸ್ಯರ ಆಯ್ಕೆಮಾಡಿ ಬೈಂದೂರು ಬಿಜೆಪಿ ಭದ್ರಕೋಟೆ ಎನ್ನುವುದು ನಿರೂಪಿಸಿದೆ. ಗ್ರಾಪಂ ಸದಸ್ಯರ ಜವಾಬ್ದಾರಿ ಹೆಚ್ಚಿದ್ದು, ಗ್ರಾಮ ಸೇವಕರಂತೆ ಕೆಲಸ ಮಾಡುವ ಮೂಲಕ ಮತದಾರರ ಋಣ ತೀರಿಸಬೇಕು.
– ಬಿ.ಎಂ.ಸುಕುಮಾರ್ ಶೆಟ್ಟಿ, ಶಾಸಕ, ಬೈಂದೂರು.

 

Comments are closed.