ಕ್ರೀಡೆ

ಕೊರೊನಾ: .ಭಾರತ ತಂಡದ ಶ್ರೀಲಂಕಾ ಪ್ರವಾಸ ರದ್ದು!

Pinterest LinkedIn Tumblr


ಮುಂಬೈ: ಭಾರತ ತಂಡ ಆಗಸ್ಟ್‌ನಲ್ಲಿ ಸೀಮಿತ ಓವರ್‌ಗಳ ಸರಣಿ ಸಲುವಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎಂದು ಬುಧವಾರವಷ್ಟೇ ಸುದ್ದಿಯಾಗಿತ್ತು. ಇನ್ನೇನು ಟೀಮ್‌ ಇಂಡಿಯಾದ ಆಟ ಕಣ್ತುಂಬಿಕೊಳ್ಳುವ ಸಮಯ ಹತ್ತಿರ ಬಂತು ಎಂದು ಅಭಿಮಾನಿಗಳು ಸಂಭ್ರಮಿಸುವ ಹೊತ್ತಿಗೆ ಆಘಾತ ಎದುರಾಗಿದೆ.

ಕ್ರಿಕೆಟ್‌ಗೆ ಕೊರೊನಾ ವೈರಸ್‌ ಕಂಟಕ ಮುಂದುವರಿದಿದ್ದು, ಪರಿಸ್ಥಿತಿಗಳನ್ನು ಮನಗಂಡು ಸರಣಿಯನ್ನು ಆಯೋಜಿಸುವುದು ಸಾಧ್ಯವಿಲ್ಲ ಎಂದು ಎರಡೂ ದೇಶದ ಕ್ರಿಕೆಟ್‌ ಮಂಡಳಿಗಳು ಗುರುವಾರ ನಿರ್ಧಾರಕ್ಕೆ ಬಂದಿವೆ. ನಿಗದಿಯಂತೆ ಜೂನ್‌-ಜುಲೈನಲ್ಲಿ ಭಾರತ vs ಶ್ರೀಲಂಕಾ ನಡುವಣ ದ್ವಿಪಕ್ಷೀಯ ಸರಣಿ ನಡೆಯಬೇಕಿತ್ತು. ಆದರೆ, ಇದೀಗ ಬೇಸರದ ಸಂಗತಿ ಹೊರಬಿದ್ದಿದೆ.

ಜೂನ್‌ ಅಂತ್ಯದ ಹೊತ್ತಿಗೆ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡು ತಲಾ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಮತ್ತು ಟಿ20 ಕ್ರಿಕೆಟ್‌ ಸರಣಿಗಳನ್ನು ಆಡಬೇಕಿತ್ತು. ಆದರೆ, ಈ ಪಂದ್ಯಗಳ ಅಂತಿಮ ವೇಳಾಪಟ್ಟಿಯನ್ನು ರೂಪಿಸಲಾಗಿರಲಿಲ್ಲ.

“ಜೂನ್‌-ಜುಲೈನಲ್ಲಿ ಈ ಸರಣಿ ಆಯೋಜಿಸುವುದು ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಹೇಳಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಈ ಸರಣಿಗಳನ್ನು ಖಂಡಿತವಾಗಿ ಆಯೋಜಿಸಲಿದ್ದೇವೆ. ಈ ಬಗ್ಗೆ ಲಂಕಾ ಕ್ರಿಕೆಟ್‌ ಮಂಡಳಿಗೆ ಭರವಸೆಯನ್ನೂ ನೀಡಿದ್ದೇವೆ,” ಎಂದು ಬಿಸಿಸಿಐನ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.

ಭಾರತದಲ್ಲಿ ಇಂದು ಕೋವಿಡ್‌-19 ಸೋಂಕು ವ್ಯಾಪಕವಾಗಿ ಹೆಚ್ಚುತ್ತಲೇ ಇದೆ. ದೇಶದಲ್ಲಿ ಇನ್ನೇನು ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ 3 ಲಕ್ಷದ ಸಮೀಪವಿದ್ದು, 8 ಸಾವಿರಕ್ಕೂ ಹೆಚ್ಚು ಮಂದಿ ಅನುನೀಗಿದ್ದಾರೆ. ಹೀಗಿರುವಾಗ ಕ್ರಿಕೆಟ್‌ ಆರಂಭಿಸಿದರೂ ಪಂದ್ಯ ಆಡುವ ಫಿಟ್ನೆಸ್‌ಗೆ ಮರಳಲು ಆಟಗಾರರಿಗೆ ಕನಿಷ್ಠ 4-6 ವಾರಗಳ ಅಭ್ಯಾಸದ ಅಗತ್ಯವಿದೆ.

“ತಂಡಗಳಿಗೆ ಅಭ್ಯಾಸ ತಪ್ಪಿದೆ. ಇನ್ನು ಅಂತಾರಾಷ್ಟ್ರೀಯ ಪ್ರವಾಸ ಎಂದು ಸಾಧ್ಯವಾಗುತ್ತದೆ ಎಂಬುದು ತಿಳಿದಿಲ್ಲ. ಹೀಗಾಗಿ ಜೂನ್‌ ಜುಲೈನಲ್ಲಿ ಇದು ಸಾಧ್ಯವಿಲ್ಲ,” ಎಂದು ಧುಮಾಲ್‌ ಹೇಳಿದ್ದಾರೆ. ಟೀಮ್‌ ಇಂಡಿಯಾ ಜೂನ್‌ನಲ್ಲಿ ಅಭ್ಯಾಸ ಶಿಬಿರ ಆರಂಭಿಸಲಿದ್ದು, ಮಾನ್‌ಸೂನ್‌ ಬಳಿಕ ದೇಶದಲ್ಲಿ ಕ್ರಿಕೆಟ್‌ ಮರಳಿ ಆರಂಭವಾಗಲಿದೆ ಎಂದು ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ಈ ಮೊದಲು ಹೇಳಿದ್ದರು.

Comments are closed.