ಕ್ರೀಡೆ

ಚೆಂಡಿಗೆ ಎಂಜಲು ಸವರುವುದನ್ನು ರದ್ದು ಮಾಡಿದ ಐಸಿಸಿ

Pinterest LinkedIn Tumblr

ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ತನ್ನ ಆಟದ ನಿಯಮಗಳಲ್ಲಿ ಮಧ್ಯಂತರ ಬದಲಾವಣೆಗಳನ್ನು ಸ್ಪಷ್ಟಪಡಿಸಿದೆ. ಇದರಲ್ಲಿ ಚೆಂಡನ್ನು ಹೊಳೆಯಲು ಎಂಜಲು ಬಳಸುವುದನ್ನು ನಿಷೇಧಿಸಿದೆ ಮತ್ತು ಅಂತಾರಾಷ್ಟ್ರೀಯ ಸರಣಿಯಲ್ಲಿ ತವರು ಅಂಪೈರ್‌ಗಳಿಗೆ ಅವಕಾಶ ಕಲ್ಪಿಸಿದೆ.

ಟೆಸ್ಟ್‌ ಪಂದ್ಯಗಳಲ್ಲಿ ಯಾವೊಬ್ಬ ಆಟಗಾರನಲ್ಲಿ ಕೋವಿಡ್‌-19 ಲಕ್ಷಣಗಳು ಕಂಡುಬಂದಲ್ಲಿ, ಅಂತಹ ಆಟಗಾರರಿಗೆ ಬದಲಿ ಆಟಗಾರನನ್ನು ಆಡಿಸುವ ಅವಕಾಶ ನೀಡಲಾಗಿದೆ. ಭಾರತ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ನೇತೃತ್ವದ ಕ್ರಿಕೆಟ್‌ ಸಮಿತಿಯು ಈ ಎಲ್ಲಾ ಬದಲಾವಣೆಗಳನ್ನು ತಂದಿದೆ.

ವೆಸ್ಟ್ ಇಂಡೀಸ್‌ ತಂಡ ಮುಚ್ಚಿದ ಅಂಗಳದಲ್ಲಿ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಇಂದು ಇಂಗ್ಲೆಂಡ್‌ಗೆ ಆಗಮಿಸಿದೆ. ಇದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ತನ್ನ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ.

“ಪಂದ್ಯದ ನಡೆಯುವ ವೇಳೆ ಕೊರೊನಾ ವೈರಸ್‌ನಿಂದ ಆಟಗಾರರು, ಪಂದ್ಯದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ರಕ್ಷಿಸುವ ಉದ್ದೇಶದಿಂದ ಅನಿಲ್‌ ಕುಂಬ್ಳೆ ನೇತೃತ್ವದ ಐಸಿಸಿ ಚೀಫ್ ಎಕ್ಸಿಕ್ಯೂಟಿವ್‌ ಕಮಿಟಿಯು ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ,” ಎಂದು ಐಸಿಸಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಿಂದ ತಿಳಿದುಬಂದಿದೆ.

ಟೆಸ್ಟ್‌ ಪಂದ್ಯ ನಡೆಯುತ್ತಿರುವ ವೇಳೆ ಯಾವೊಬ್ಬ ಆಟಗಾರನಲ್ಲಿ ಕೋವಿಡ್‌-19 ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆ ಆಟಗಾರನ ಬದಲು ಇನ್ನೊಬ್ಬ ಆಟಗಾರನನ್ನು ಆಡಿಸಬಹುದು. ಪಂದ್ಯದ ವೇಳೆ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಚೆಂಡಿಗೆ ಎಂಜಲು ಹಚ್ಚುವುದನ್ನು ಐಸಿಸಿ ರದ್ದು ಮಾಡಿದೆ.

ಪ್ರಯಾಣದ ಸಮಸ್ಯೆಯಿಂದ ಪಂದ್ಯದ ತಟಸ್ಥ ಅಧಿಕಾರಿಗಳು ತಾತ್ಕಾಲಿಕವಾಗಿ ಐಸಿಸಿ ರದ್ದು ಮಾಡಿದ್ದು, ಆಯಾ ದೇಶದಲ್ಲಿ ಲಭ್ಯವಾಗುವ ಅಧಿಕಾರಿಗಳು ಹಾಗೂ ಅಂಪೈರ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಪಂದ್ಯದಲ್ಲಿ ಕಡಿಮೆ ಅನುಭವದ ಅಂಪೈರ್‌ಗಳು ಇರುವುದನ್ನು ಗಮನದಲ್ಲಿಟ್ಟುಕೊಂಡು ಒಂದು ಇನಿಂಗ್ಸ್‌ನಲ್ಲಿ ಪ್ರತಿ ತಂಡಕ್ಕೆ ಹೆಚ್ಚುವರಿ ವಿಫಲ ಡಿಆರ್‌ಎಸ್ ವಿಮರ್ಶೆಯನ್ನು ನೀಡಲಾಗಿದೆ.

Comments are closed.