ತಿರುವನಂತಪುರಂ (ಜೂ. 9): ಎಲ್ಲವೂ ನಾವು ಅಂದುಕೊಂಡಂತೆಯೇ ನಡೆದರೆ ಜೀವನ ಬಹಳ ಸರಾಗವಾಗಿ ಸಾಗಿಬಿಡುತ್ತದೆ. ಸವಾಲುಗಳನ್ನು ಎದುರಿಸುತ್ತಾ, ಸಂಕಷ್ಟಗಳಿಗೆ ತಲೆ ಬಗ್ಗಿಸುತ್ತಾ ನಡೆಯಲೇಬೇಕಾದ ಅನಿವಾರ್ಯತೆಯ ಸಂದರ್ಭ ಪ್ರತಿಯೊಬ್ಬರ ಜೀವನದಲ್ಲೂ ಖಂಡಿತ ಬಂದಿರುತ್ತದೆ. ಕೇರಳದ ಆ ಕುಟುಂಬ ಕೂಡ ತಮ್ಮ ಭವಿಷ್ಯಕ್ಕಾಗಿ ಹಲವಾರು ಕನಸುಗಳನ್ನು ಕಟ್ಟಿಕೊಂಡು ದೂರದ ದುಬೈಗೆ ಹೋಗಿದ್ದರು. ಆದರೆ, ವಿಧಿಯಾಟ ಬೇರೆಯದೇ ಆಗಿತ್ತು.
28 ವರ್ಷದ ಕೇರಳದ ಸಾಫ್ಟ್ವೇರ್ ಇಂಜಿನಿಯರ್ ತನ್ನ ಹೆಂಡತಿಯೊಂದಿಗೆ ಯುಎಇಯಲ್ಲಿ ನೆಲೆಸಿದ್ದರು. ಅಲ್ಲಿ ಅವರ ಹೆಂಡತಿ ಗರ್ಭಿಣಿಯಾಗಿದ್ದರು. ದುಬೈನಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿರುವುದರಿಂದ ಸುರಕ್ಷತಾ ದೃಷ್ಟಿಯಿಂದ ಭಾರತದಿಂದ ಬಂದಿದ್ದ ವಿಶೇಷ ವಿಮಾನದಲ್ಲಿ ತನ್ನ ಹೆಂಡತಿಯನ್ನು ಕೇರಳಕ್ಕೆ ವಾಪಾಸ್ ಕಳುಹಿಸಿದ್ದರು. ಕಳೆದ ತಿಂಗಳೇ ಕೇರಳಕ್ಕೆ ಹೆಂಡತಿಯನ್ನು ವಾಪಾಸ್ ಕಳುಹಿಸಿದ್ದ ಆತ ದುಬೈನಲ್ಲಿ ಸಾವನ್ನಪ್ಪಿದ್ದಾರೆ. ಇತ್ತ, ಗಂಡನ ಸಾವಿನ ವಿಷಯ ತಿಳಿಯದ ಹೆಂಡತಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ!
28 ವರ್ಷದ ನಿತಿನ್ ಚಂದ್ರನ್ ಹಾಗೂ ಅವರ 27 ವರ್ಷದ ಹೆಂಡತಿ ಅಧಿರಾ ಗೀತಾ ಶ್ರೀಧರನ್ ಅವರ ದುರಂತ ಕತೆಯಿದು. ಅಧಿರಾ ಅವರಿಗೆ ಜುಲೈ ಮೊದಲ ವಾರದಲ್ಲಿ ಡೆಲಿವರಿಗೆ ದಿನಾಂಕ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ಕೊರೋನಾದಿಂದ ಯಾವುದೇ ತೊಂದರೆ ಉಂಟಾಗಬಾರದು ಎಂದು ಕೇರಳಕ್ಕೆ ವಂದೇ ಭಾರತ್ ಮಿಷನ್ನಡಿ ನಿಯೋಜಿಸಿದ್ದ ವಿಶೇಷ ವಿಮಾನದಲ್ಲಿ ವಾಪಾಸ್ ಕಳುಹಿಸಿದ್ದರು. ಆದರೆ, ತಾವು ಹೆಂಡತಿ ಮತ್ತು ಮಗುವನ್ನು ನೋಡಲು ಭಾರತಕ್ಕೆ ವಾಪಸ್ಸಾಗುವುದಕ್ಕೆ ಅವರು ಮುನ್ನ ನಿದ್ರೆಯಲ್ಲಿಯೇ ಮೃತಪಟ್ಟಿದ್ದಾರೆ.
ನಿತಿನ್ ಚಂದ್ರನ್ ಅವರಿಗೆ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆ ಕಾಡುತ್ತಿತ್ತು. ಸೋಮವಾರ ತೀವ್ರ ಅನಾರೋಗ್ಯದಿಂದ ಚಂದ್ರನ್ ದುಬೈನ ಅಪಾರ್ಟ್ಮೆಂಟ್ನಲ್ಲಿ ಮಲಗಿದ್ದಾಗಲೇ ಸಾವನ್ನಪ್ಪಿದ್ದಾರೆ. ಅವರ ಸ್ನೇಹಿತ ಅಪಾರ್ಟ್ಮೆಂಟ್ಗೆ ಹೋಗಿ ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಈ ಮಾಹಿತಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಕಾಣಿಸುತ್ತಿದ್ದಂತೆಯೇ ಅಧಿರಾಳ ಕುಟುಂಬಸ್ಥರು ನಿಗದಿತ ದಿನಾಂಕಕ್ಕೂ ಮುನ್ನವೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಗಂಡನಿಗೆ ಏನೋ ಆಗಿದೆ ಎಂಬ ಸುಳಿವು ಸಿಕ್ಕ ಆಕೆ ತೀರಾ ಒತ್ತಡಕ್ಕೊಳಗಾಗಿದ್ದರು. ಹೀಗಾಗಿ, ಒಂದು ತಿಂಗಳ ಮೊದಲೇ ಆಕೆಗೆ ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆಯಲಾಗಿದೆ. ಗಂಡನ ಸಾವಿನ ಮಾರನೇ ದಿನವೇ ಆಕೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ನಿತಿನ್ ಚಂದ್ರನ್ ಅವರ ಮೃತದೇಹವನ್ನು ದುಬೈನ ರಶೀದ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ಅವರ ಗಂಟಲುದ್ರವ ಸಂಗ್ರಹಿಸಿ, ಕೊರೋನಾ ಸೋಂಕಿನ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಕೇರಳಕ್ಕೆ ಶವವನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಒಟ್ಟಾರೆ, ಮಗುವಿನ ಮುಖ ನೋಡುವ ಮೊದಲೇ ಚಂದ್ರನ್ ಇಹಲೋಕ ತ್ಯಜಿಸಿದ್ದಾರೆ. ಇತ್ತ, ಅಪ್ಪ ಸಾವನ್ನಪ್ಪಿದ ಮರುದಿನವೇ ಮಗು ಜೀವ ಪಡೆದಿದೆ.
Comments are closed.