ಕ್ರೀಡೆ

ದಾನಿಶ್ ಕನೇರಿಯಾಗೆ ಭಾರತ ಪೌರತ್ವಕ್ಕೆ ಅರ್ಜಿ ಸಲ್ಲಿಸಿ ಎಂದ ಯುಪಿ ಸಚಿವ

Pinterest LinkedIn Tumblr


ಲಕ್ನೋ: ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿ ಹಿಂದೂ ಎಂಬ ಕಾರಣಕ್ಕೆ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದ ಮಾಜಿ ಆಟಗಾರ ದಾನಿಶ್ ಕನೇರಿಯಾ ಅವರಿಗೆ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವಂತೆ ಉತ್ತರ ಪ್ರದೇಶ ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ ಸಚಿವ ಮೊಹ್ಸಿನ್ ರಾಜಾ ಸಲಹೆ ನೀಡಿದ್ದಾರೆ.

ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುವ ಮಂದಿ ಭಾರತದ ಪೌರತ್ವಕ್ಕೆ ಅರ್ಜಿಸಲ್ಲಿಸುವಂತೆ ಪ್ರತಿಕಾಗೋಷ್ಠಿಯಲ್ಲಿ ಮೊಹ್ಸಿನ್ ರಾಜಾ ತಿಳಿಸಿದರು. ಈ ವೇಳೆ ಪತ್ರಕರ್ತರಿಂದ ಕೇಳಿ ಬಂದ ದಾನಿಶ್ ಕನೇರಿಯಾ ಅವರ ವಿರುದ್ಧ ಟೀಕೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕನೇರಿಯಾ ಸೇರಿದಂತೆ ಧಾರ್ಮಿಕ ಅಸಮಾನತೆ, ಕಿರುಕುಳಕ್ಕೆ ಒಳಗಾಗಿರುವ ಜನರು ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಉತ್ತರಿಸಿದರು.

ದಾನಿಶ್ ಕನೇರಿಯಾ ಅವರನ್ನು ಡ್ಯಾನಿಶ್, ಯೂಸುಫ್ ಯೋಹಾನಾರನ್ನು ಮೊಹಮ್ಮದ್ ಯೂಸುಫ್ ಆಗಿ ಬದಲಾಯಿಸಲಾಯಿತು. ಈ ರೀತಿ ಪಾಕಿಸ್ತಾನದಲ್ಲಿ ಎಷ್ಟು ಸಾಮಾನ್ಯ ನಾಗರಿಕರು ತಾರತಮ್ಯ ಎದುರಿಸಿರಬಹುದು. ಅಲ್ಲಿ ಎಷ್ಟು ಕಿರುಕುಳ ನೀಡಲಾಗುತ್ತಿದೆ ಎಂಬುವುದು ಸುಲಭವಾಗಿ ಆರ್ಥೈಸಿಕೊಳ್ಳಬಹುದು ಎಂದು ಮೊಹ್ಸಿನ್ ರಾಜಾ ಟ್ವೀಟ್ ಮಾಡಿದ್ದಾರೆ.

ಇತ್ತ ದಾನಿಶ್ ಕನೇರಿಯಾ ತಮ್ಮ ಹೇಳಿಕೆ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ತಿರುಗೇಟು ಕೊಟ್ಟಿದ್ದು, ನಾನು ನಿಮ್ಮಂತೆ ಹಣಕ್ಕಾಗಿ ದೇಶವನ್ನು ಮಾರಾಟ ಮಾಡಿಲ್ಲ. ತಾರತಮ್ಯ ಎದುರಾದರೂ ನಾನು ಕ್ರಿಕೆಟ್‍ಗಾಗಿ ರಕ್ತವನ್ನು ಹರಿಸಿದ್ದೇನೆ ಎಂದು ಹೇಳಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್, ಪಾಕ್ ಕ್ರಿಕೆಟ್ ತಂಡದಲ್ಲಿದ್ದ ವೇಳೆ ದಾನಿಶ್ ಕನೇರಿಯಾ ಎಷ್ಟು ತಾರತಮ್ಯಕ್ಕೆ ಒಳಗಾಗಿದ್ದರು ಎಂದು ವಿವರಿಸಿದ್ದರು. ಅಖ್ತರ್ ಅವರ ಈ ಹೇಳಿಕೆಗಳು ಸತ್ಯ, ಶೀಘ್ರವೇ ತಮ್ಮನ್ನು ತಾರತಮ್ಯದಿಂದ ನಡೆಸಿಕೊಂಡ ಪ್ರಮುಖ ಆಟಗಾರರ ಹೆಸರುಗಳನ್ನು ರಿವೀಲ್ ಮಾಡುವುದಾಗಿಯೂ ದಾನಿಶ್ ಕನೇರಿಯಾ ತಿಳಿಸಿದ್ದರು. ಆದರೆ ದಾನಿಶ್‍ರ ಈ ಹೇಳಿಕೆಗೆ ಸಾಕಷ್ಟು ಮಂದಿ ಟೀಕೆ ಮಾಡಿದ್ದರು.

Comments are closed.